Advertisement

ಬ್ಲಾ ಬ್ಲಾ ಕಾರ್‌ ! 

03:45 AM Feb 12, 2017 | Harsha Rao |

ಮೊನ್ನೆ ರಾತ್ರಿ ಮನೆಯ ಫೋನು ರಿಂಗಣಿಸಿತು. ಹೋಗಿ ಎತ್ತಿಕೊಂಡೆ.
ಫ್ರಾನ್ಸ್‌ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಗನ ಫೋನಾಗಿತ್ತು.  “ಮುಂದಿನ ವಾರಾಂತ್ಯದಲ್ಲಿ ಇಟೆಲಿ ದೇಶಕ್ಕೆ ಪ್ರಯಾಣಿಸುತ್ತಿದ್ದೇನೆ. ಫೋನ್‌ ಮಾಡಬೇಡ. ಫೇಸುºಕ್‌ ಅಥವಾ ವಾಟ್ಸಾಪಿನಲ್ಲಿ ಸಂದೇಶ ಕಳುಹಿಸು’ ಎಂದ.
“”ಪ್ರಯಾಣದ ಟಿಕೇಟುಗಳನ್ನು ಸರಿಯಾಗಿ ಕಾಯ್ದಿರಿಸಿದ್ದೀಯ ತಾನೆ” ಎಂದು ಕೇಳಿದೆ.
“”ಅದರ ಅಗತ್ಯವಿಲ್ಲಮ್ಮಾ. ಈ ಬಾರಿ ನಾನು ಬ್ಲಾ ಬ್ಲಾ ಕಾರುಗಳನ್ನು ಉಪಯೋಗಿಸಿ ಪ್ರಯಾಣಿಸುತ್ತೇನೆ” ಎಂದ ಸುಪುತ್ರ.

Advertisement

“”ಅದೇನೋ ಹಾಗೆಂದರೆ?” ಕುತೂಹಲಭರಿತ ಪ್ರಶ್ನೆ ನನ್ನ ಕಡೆಯಿಂದ.
“”ಅದೆಲ್ಲ ಹೇಳುತ್ತ ಕೂರಲು ಈಗ ಪುರುಸೊತ್ತಿಲ್ಲಮ್ಮಾ, ನಾಳಿನ ಪರೀಕ್ಷೆಗೆ ತಯಾರು ಮಾಡಿಕೊಳ್ಳಬೇಕು. ನೀನೆ ಪ್ರಯತ್ನಿಸಿ ತಿಳಿದುಕೊಳ್ಳುತ್ತೀಯಾ?” ಎಂಬ ಉತ್ತರ ಆ ಕಡೆಯಿಂದ ಬಂತು.

ತದನಂತರ ಸಮಯ ದೊರೆತಾಗ ಅಂತರ್ಜಾಲದಲ್ಲಿ ಅದೇನೆಂದು ತಿಳಿಯಹೊರಟಾಗ ಕೆಲವು ವಿವರಗಳು ದೊರೆತವು.
ಸಮಾನಾಸಕ್ತರ ವೇದಿಕೆ ಇದು ಒಂದು ತರಹದ ಪ್ರಯಾಣವನ್ನು ಹಂಚಿಕೊಳ್ಳುವ ವೇದಿಕೆ. ಇದನ್ನು ಸ್ಥಾಪಿಸಿದ ವ್ಯಕ್ತಿ ಫ್ರೆಡರಿಕ್‌ ಮಾಝುಲ್ಲ 2003ನೇ ಇಸವಿಯಲ್ಲಿ ಕ್ರಿಸ್‌ಮಸ್‌ ರಜೆಯಲ್ಲಿ ಮನೆಗೆ ತೆರಳಲು ಅಣಿಯಾದ.  ವಾಹನಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಸರಿಯಾದ ಯಾವ ವಾಹನ ಸಂಚಾರವೂ ಈತನಿಗೆ ಲಭ್ಯವಾಗಲಿಲ್ಲ.  ಅದೇ ಸಮಯದಲ್ಲಿ ಹಲವಾರು ಜನ ಸ್ವಂತ ಕಾರುಗಳನ್ನು ತೆಗೆದುಕೊಂಡು, ಅದರಲ್ಲಿರುವ ಉಳಿದ ಸೀಟುಗಳನ್ನು ಖಾಲಿಇಟ್ಟುಕೊಂಡು ಪ್ರಯಾಣಿಸುವುದನ್ನು ಕಂಡ. ಜನದಟ್ಟಣೆ ಇರುವ ಸಮಯದಲ್ಲಿ ಈ ಖಾಲಿ ಸೀಟುಗಳನ್ನು  ಭರ್ತಿ ಮಾಡಿ ಜನರಿಗೆ  ಉಪಕಾರ ಮಾಡಲು ಸಾಧ್ಯವೆ? ಅದು ಹೇಗೆ?  ಎಂದು ಯೋಚಿಸಲಾರಂಭಿಸಿದ. ಇದರ ಫ‌ಲವೇ  2006ರಲ್ಲಿ  “ಬ್ಲಾ ಬ್ಲಾ ಕಾರ್‌’ ಎಂಬ ಸಂಸ್ಥೆಯ ಜನನ. ಈ ಸಂಸ್ಥೆಯ  ಪ್ರಧಾನ ಕಚೇರಿ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿದೆ. ಈ ವ್ಯವಸ್ಥೆಯು ಎರಡು ನಗರಗಳ ಮಧ್ಯೆ ಪ್ರಯಾಣಿಸುವ ವಾಹನ ಮಾಲಿಕ  ಚಾಲಕರನ್ನು ಮತ್ತು ಅದೇ ದಿಕ್ಕಿನಲ್ಲಿ ಪ್ರಯಾಣಿಸಬಯಸುವ ಸವಾರರನ್ನು ಒಂದು ಗೂಡಿಸುತ್ತದೆ. ಹುಟ್ಟು ಹಾಕಿದ ಹತ್ತೇ ವರ್ಷಗಳಲ್ಲಿ ಇದು 22 ದೇಶಗಳಲ್ಲಿ ಎರಡೂವರೆ  ಕೋಟಿಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇದರ ಸೇವೆಗಳು ಅಂತರ್ಜಾಲ, ಮೊಬೈಲ್‌ ಫೋನು ಮತ್ತು ಐ.ಒ.ಎಸ್‌ ಹಾಗೂ ಆಂಡ್ರಾಯ್ಡ ಆ್ಯಪ್‌ಗ್ಳ ಮೂಲಕ  ಲಭ್ಯ.

ಈ ಪ್ರಯಾಣದಲ್ಲಿ ಕಾರಿನ ಚಾಲಕನ ಖರ್ಚನ್ನು ಉಳಿದವರೂ ಹಂಚಿಕೊಳ್ಳುತ್ತಾರೆ. ಪ್ರಯಾಣದ ದೂರ, ಅದಕ್ಕೆ ಬೇಕಾಗುವ ಇಂಧನ, ರಸ್ತೆಯಲ್ಲಿ ಪಾವತಿಸುವ  ಸುಂಕದ ಮೊತ್ತ ಇವೆಲ್ಲವನ್ನೂ ಗಮನಿಸಿ ಕಂಪೆನಿ ನಿಗದಿಪಡಿಸಿದ ಶುಲ್ಕವನ್ನು ಸಹ ಪ್ರಯಾಣಿಕರು ಚಾಲಕನಿಗೆ ನೀಡಬೇಕು. ಚಾಲಕನು ತೆಗೆದುಕೊಳ್ಳುವ ಮೊತ್ತದ ಶೇ. 12-15ರಷ್ಟನ್ನು ಸಂಸ್ಥೆಗೆ ಪಾವತಿಸಬೇಕು. ಜಾಹೀರಾತುಗಳಿಂದಲೂ ಸಂಸ್ಥೆಯು ತನ್ನ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತದೆ.
2015ನೇ ಇಸವಿಯಿಂದ ಭಾರತದಲ್ಲೂ ಈ ಸೌಲಭ್ಯ ದೊರೆಯುತ್ತಿದೆ. ಭಾರತದಲ್ಲಿ  ಇದುವರೆಗೂ ಕಂಪೆನಿಯು ತನ್ನ ಶುಲ್ಕವನ್ನು  ವಿಧಿಸದೆ ವ್ಯವಹಾರ ನಡೆಸುತ್ತಿದೆ.

ಕಾರಿನ ಪ್ರಯಾಣವನ್ನು ಒದಗಿಸುವವನು ಬ್ಲಾ ಬ್ಲಾ ಕಾರಿನ ಸದಸ್ಯನಾಗಿರಬೇಕು. ಪ್ರಯಾಣಿಕರು ಯಾವ ಯಾವ  ಕಾರುಗಳು ತಮ್ಮ ಅನುಕೂಲಕ್ಕೆ ಲಭ್ಯವಿದೆಯೆಂದು ತಿಳಿದುಕೊಳ್ಳಲು ಸದಸ್ಯರಾಗಿರಬೇಕಿಲ್ಲ. ಪ್ರಯಾಣವನ್ನು ನಿಗದಿ ಪಡಿಸಲು ಸದಸ್ಯತ್ವ  ಹೊಂದಿರಬೇಕು. ಪ್ರಯಾಣ ಆರಂಭಿಸುವ ಹಾಗೂ ತಲುಪಬೇಕಾದ ಜಾಗಗಳ ಹೆಸರು, ಪ್ರಯಾಣದ ದಿನಾಂಕವನ್ನು ಅಂತರ್ಜಾಲದಲ್ಲಿ ನೋಂದಾಯಿಸಿದರೆ  ಆ ಮಾರ್ಗವಾಗಿ ಸಾಗುವ ಚಾಲಕರ ಮಾಹಿತಿ ಲಭ್ಯವಾ ಗುತ್ತದೆ. ಸಹಪ್ರಯಾಣಿಕ ತನಗೆ ಹಿಡಿಸಿದ ಮಾಲಿಕನ ಕಾರಿನಲ್ಲಿ ಸೀಟನ್ನು ಆನ್‌ಲೈನ್‌ ಕಾದಿರಿಸುತ್ತಾನೆ. ಇದರ ನಂತರ ಮಾಲಿಕನ ಮೊಬೈಲ್‌ ಸಂಖ್ಯೆ ಸಿಗುತ್ತದೆ. ಅವನೊಂದಿಗೆ ಸಂಭಾಷಿಸಿ ಹೊರಡುವ ಸ್ಥಳ ಮತ್ತು ಇತರ ಮಾಹಿತಿಗಳನ್ನು  ತಿಳಿದುಕೊಳ್ಳಬಹುದು.

Advertisement

ಮುಂಗಡವಾಗಿ ರೈಲು, ಬಸ್ಸು ಗಳ ಟಿಕೇಟುಗಳನ್ನು ಕಾಯ್ದಿರಿಸಲು ಅವಕಾಶವಿಲ್ಲದಾಗ ಈ ವ್ಯವಸ್ಥೆ ತುಂಬಾ ಅನುಕೂಲಕರವಾದ ಪ್ರಯಾಣವನ್ನು ಕೈಗೆಟಕುವ ದರದಲ್ಲಿ ಕಲ್ಪಿಸಿಕೊಡುತ್ತದೆ. ದಾರಿಯುದ್ದಕ್ಕೂ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತ¤, ಹೊಸ ಸ್ನೇಹಿತರ ಜೊತೆಗೆ ಬೆರೆಯುತ್ತ ಪಯಣಿಸುವುದು ಹೊಸ ಅನುಭವ. ಅದಕ್ಕೆ ಬ್ಲಾ – ಬ್ಲಾ ಕಾರ್‌ ಎಂದು ಹೆಸರು. ಸೀಟು ಕಾಯ್ದಿರಿಸುವಾಗ “ಬ್ಲಾ, ಬ್ಲಾ – ಬ್ಲಾ’ ಅಥವಾ “ಬ್ಲಾ ಬ್ಲಾ ಬ್ಲಾ’ ಎಂಬ ಆಯ್ಕೆಯಿದೆ.

(ಮಿತಭಾಷಿಯೋ, ಮಧ್ಯಮರೋ, ಅತಿಯಾಗಿ ಮಾತನಾಡುವ ವರ್ಗಕ್ಕೆ ಸೇರಿದವರೊ ಎಂಬುದು ಇದರರ್ಥ) ನೀವು ಮಾತನಾಡದೆ ಸುಮ್ಮನಿರುವ ಆಯ್ಕೆ ಮಾಡಿಕೊಂಡರೂ ತೊಂದರೆ ಇಲ್ಲ. 

ಮಹಿಳೆಯರಿಗಾಗಿ “ಲೇಡೀಸ್‌ ಓನ್ಲಿà’ ಎಂಬ ವಿಭಾಗವಿದೆ. ಮಹಿಳಾ ಚಾಲಕರು ತಮಗೆ ಮಹಿಳೆಯರೇ ಸಹಪ್ರಯಾಣಿಕರಾಗಬೇಕೆಂದು ಬಯಸಿದರೆ ಈ ವಿಭಾಗದಲ್ಲಿ ಸದಸ್ಯರಾಗಬಹುದು.

ಪ್ರಯಾಣ ಮುಗಿದ ನಂತರ ವಾಹನ ಮಾಲಿಕರು ಪ್ರಯಾಣಿಕರಿಗೆ, ಸಹಪ್ರಯಾಣಿಕರು ವಾಹನ ಮಾಲಿಕರಿಗೆ ಪರಸ್ಪರ ಅಂಕಗಳನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ  ಕೊಡುವ ಪದ್ಧತಿಯಿದೆ. 

– ಡಾ. ಉಮಾಮಹೇಶ್ವರಿ

Advertisement

Udayavani is now on Telegram. Click here to join our channel and stay updated with the latest news.

Next