ಬೆಂಗಳೂರು: ನಗರದ ಅಂದಕ್ಕೆ ‘ಕಪ್ಪು ಚುಕ್ಕೆ’ಗಳಾಗಿ ಪರಿಣಮಿಸುತ್ತಿರುವ ಬ್ಲ್ಯಾಕ್‌ಸ್ಪಾಟ್‌ಗಳ ನಿರ್ಮೂಲನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯ ಆರಂಭಿಸಿತು. ಇದರಿಂದ ಹಲವೆಡೆ ಬ್ಲಾಕ್ ಸ್ಪಾಟ್‌ಗಳ ಸಮಸ್ಯೆ ನಿವಾರಣೆಯೂ ಆಗಿದೆ. ಆದರೆ, ಪ್ರತಿಷ್ಠಿತರು ವಾಸವಿರುವ ಬಡಾವಣೆಯಾಗಿರುವ ಡಾಲರ್ ಕಾಲೋನಿ ಸ್ಥಿತಿ ಮಾತ್ರ ತದ್ವಿರುದ್ಧವಾಗಿದ್ದು, ಹೆಜ್ಜೆ-ಹೆಜ್ಜೆಗೂ ಬ್ಲ್ಯಾಕ್‌ಸ್ಪಾಟ್‌ಗಳು ಹುಟ್ಟಿಕೊಂಡಿವೆ. ಇದು ಸ್ವತಃ ನಿವಾಸಿಗಳಿಗೂ ತಲೆನೋವಾಗಿ ಪರಿಣಮಿಸಿದೆ!
ಸರ್ಕಾರಿ ಸಂಸ್ಥೆಗಳ ನಡುವೆ ಗೊಂದಲ: ಖಾಲಿ ನಿವೇಶಗಳಲ್ಲಿ ಬೀಳುತ್ತಿರುವ ತ್ಯಾಜ್ಯದ ವಿಲೇವಾರಿಯ ಬಗ್ಗೆ ಬಿಬಿಎಂಪಿ ಮತ್ತು ಬಿಡಿಎ ಎರಡೂ ಸರ್ಕಾರಿ ಸಂಸ್ಥೆಗಳೂ ನುಣುಚಿಕೊಳ್ಳುತ್ತಿವೆ. ಹೀಗಾಗಿ, ಈ ಸಮಸ್ಯೆಯ ಬಗ್ಗೆಯಾರ ಬಳಿ ಹೇಳಿಕೊಳ್ಳಬೇಕು ಎನ್ನುವ ಗೊಂದಲ ಸ್ಥಳೀಯರದ್ದು. ಬಿಡಿಎ ಮತ್ತು ಬಿಬಿಎಂಪಿಯ ತಟಸ್ಥ ನಿಲುವು ಸಮಸ್ಯೆ ಮುಂದುವರೆಯಲು ಕಾರಣವಾಗಿದೆ.
ಕುಡುಕರ ಅಡ್ಡೆ!: ಸಂಜೆಯಾಗುತ್ತಿದ್ದಂತೆ ಇಲ್ಲಿನ ಖಾಲಿ ನಿವೇಶನಗಳು ಕುಡುಕರ ಅಡ್ಡೆಗಳಾಗಿಯೂ ಬದಲಾಗುತ್ತಿವೆ. ಅನೈತಿಕ ಚುವಟಿಕೆಗಳ ತಾಣವಾಗಿ ಬದಲಾಗುವ ಮನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಇಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ.
•ಪೌರಕಾರ್ಮಿಕರು ಪ್ರತಿ ದಿನ ಬೆಳಗ್ಗೆ ಕಸ ಸಂಗ್ರಹಿಸಿದರೂ ತಪ್ಪದ ಸಮಸ್ಯೆ
Advertisement
ಬೆಳಗ್ಗೆ 8ರ ಸುಮಾರಿಗೆ ಪೌರಕಾರ್ಮಿಕರು ಎಂದಿನಂತೆ ಬಂದು ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುತ್ತಾರೆ. ನಂತರದಲ್ಲಿ ಉತ್ಪತ್ತಿಯಾಗುವ ಕಸ ಅಕ್ಕಪಕ್ಕದ ನಿವೇಶನಗಳಿಗೆ ಬಂದುಬೀಳುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿರುವ ಫ್ಲ್ಯಾಟ್‌ಗಳಿಂದಲೇ ಜನ ಕಸ ಎಸೆಯುತ್ತಾರೆ. ಇಲ್ಲಿನ ಬಹುತೇಕ ನಿವೇಶಗಳು ಬಿಡಿಎಗೆ ಸೇರಿದ್ದು, ಸಮರ್ಪಕ ನಿರ್ವಹಣೆ ಇಲ್ಲದಿರುವುದು ಇದಕ್ಕೆ ಮತ್ತಷ್ಟು ಅನುವು ಮಾಡಿಕೊಟ್ಟಂತಾಗಿದೆ. ಹಲವು ನಿವೇಶನಗಳು ತ್ಯಾಜ್ಯದಿಂದ ತುಂಬಿಕೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಕೂಡ ತ್ಯಾಜ್ಯ ಬಿಸಾಡಿರುವುದು ಕಂಡುಬರುತ್ತದೆ. ಇಲ್ಲಿ ಬಹುಅಂತಸ್ತಿನ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಅಪಾರ್ಟ್‌ಮೆಂಟ್ ಮೇಲಿನಿಂದ ಜನ ತ್ಯಾಜ್ಯ ಎಸೆಯುವುದು ಖಾಲಿ ನಿವೇಶನಕಷ್ಟೇ ಸೀಮಿತವಾಗದೆ, ಇಲ್ಲಿನ ರಸ್ತೆಗಳಿಗೂ ವಿಸ್ತರಿಸಿದೆ. ಡಾಲರ್ ಕಾಲೋನಿಯ ಆರ್‌ಎಂವಿ ಎಕ್ಸ್‌ಟೆಕ್ಷನ್‌ನ ಖಾಲಿ ನಿವೇಶನಗಳಲ್ಲಿ ನಿತ್ಯ ಸುತ್ತಮುತ್ತಲಿನ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳೇ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಕಸ ವಿಲೇವಾರಿಯಾಗಲೇ ಅಲ್ಲೇ ಕೊಳೆಯುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಬೆಳಗ್ಗೆ 6.30ರಿಂದ 7ಗಂಟೆಗೆ ಇಲ್ಲಿ ಬಿಬಿಎಂಪಿಯ ತ್ಯಾಜ್ಯ ಸಂಗ್ರಹಣೆ ವಾಹನ ಬರುತ್ತದೆ. ಆದರೂ ಇಲ್ಲಿನ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವುದು ನಿಂತಿಲ್ಲ. ತ್ಯಾಜ್ಯ ಸಂಗ್ರಹಣೆಗೆ ಬರುವ ಪೌರಕಾರ್ಮಿಕರು ಹಣ ಕೇಳುತ್ತಾರೆ. ಹೀಗಾಗಿ, ಬಹುತೇಕರು ತ್ಯಾಜ್ಯವನ್ನು ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
Related Articles
Advertisement
•ಅಪಾರ್ಟ್‌ಮೆಂಟ್‌ಗಳ ಪಕ್ಕದ ನಿವೇಶನಕ್ಕೆ ಫ್ಲ್ಯಾಟ್ನಿಂದಲೇ ಕಸ ಎಸೆತ
•ನಿವೇಶನಗಳ ತುಂಬಾ ತ್ಯಾಜ್ಯ; ಸಾಂಕ್ರಾಮಿಕ ರೋಗಗಳು ಹರಡುವ ಭೀತಿ
•ಸೈಟ್‌ಗಳನ್ನು ಬಿಡಿಎ ನಿರ್ವಹಿಸದಿರುವುದೇ ಕಸ ಎಸೆಯುವವರಿಗೆ ವರ
ಮಾಜಿ ರಾಜ್ಯಪಾಲರಿಗೆ ನಿದ್ದೆ ಇಲ್ಲ!:
ಡಾಲರ್ ಕಾಲೊನಿಯ ಆರ್‌ಎಂವಿ ಎಕ್ಸ್‌ಟೆಕ್ಷನ್ ಬೀದಿಯಲ್ಲೇ ಮಾಜಿ ಕೇಂದ್ರ ಸಚಿವೆ ಮತ್ತು ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ನಿವಾಸವಿದೆ. ಐದು ದಶಕಗಳ ಕಾಲ ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, ಅವರ ನಿವಾಸದ ಪಕ್ಕದಲ್ಲೇ ಇರುವ ತ್ಯಾಜ್ಯ ಸಮಸ್ಯೆ ನಿವಾರಣೆ ಅವರಿಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಸ್ವತಃ ಮಾರ್ಗರೇಟ್ ಆಳ್ವ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘ಖಾಲಿ ನಿವೇಶನದಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಮೇಯರ್, ಎಂಎಲ್ಎ ಮತ್ತು ಬಿಡಿಎ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಹಲವು ಬಾರಿ ಖಾಲಿ ನಿವೇಶನದಲ್ಲಿರುವ ತ್ಯಾಜ್ಯವನ್ನು ಸ್ವಂತ ಖರ್ಚಿನಲ್ಲಿ ಸ್ವಚ್ಛ ಮಾಡಿಸಿದ್ದೀನಿ. ಆದರೆ, ಒಂದೇ ವಾರದಲ್ಲಿ ಯಥಾಸ್ಥಿತಿಗೆ ತಲುಪುತ್ತಿದ್ದು, ಸಮಸ್ಯೆ ಮುಂದುವರಿದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಲವು ಪ್ರದೇಶಗಳಲ್ಲಿ ಬ್ಲಾಕ್ ಸ್ಪಾಟ್ ಸಮಸ್ಯೆ:
ನಗರದಲ್ಲಿರುವ ಬ್ಲಾಕ್‌ಸ್ಪಾಟ್ (ತ್ಯಾಜ್ಯ ಎಸೆಯುವ ಸ್ಥಳ)ಗಳಿವೆ ಇದನ್ನು ತಪ್ಪಿಸಲು ಕೆಲವು ಸ್ಥಳೀಯರು ಮತ್ತು ಪಾಲಿಕೆ ನಾನಾ ಕಸರತ್ತು ನಡೆಸುತ್ತಿದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ! ತ್ಯಾಜ್ಯ ಎಸೆಯುವ ಸ್ಥಳದಲ್ಲಿ ದೇವರ ವಿಗ್ರಹ, ಚಿತ್ರಗಳನ್ನು ಅಂಟಿಸುವುದರಿಂದ ಪೌರಕಾರ್ಮಿಕರು ತ್ಯಾಜ್ಯ ಎಸೆಯುವ ಜಾಗಗಳನ್ನು ಸ್ವಚ್ಛಮಾಡಿ, ರಂಗೋಲಿ ಬಿಡಿಸಿ ಅಂದಗೊಳಿಸುವವರೆಗೆ ನಾನಾ ಪ್ರಯೋಗಗಳು ನಡೆದರೂ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಬಿಟ್ಟಿಲ್ಲ. ಹೀಗಾಗಿ ,ಪಾಲಿಕೆ ಮಾರ್ಷಲ್ಗಳನ್ನು ನೇಮಿಸಲು ಮುಂದಾಗಿದ್ದು, ಪರಿಸ್ಥಿತಿ ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ.
.ಹಿತೇಶ್ ವೈ