Advertisement

ಶಾಸಕನಿಗೆ ಬ್ಲಾಕ್‌ಮೇಲ್‌: ಸುದ್ದಿವಾಹಿನಿ ಮುಖ್ಯಸ್ಥ ಸೆರೆ

12:44 AM May 06, 2019 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಸೇರಿದ್ದು ಎನ್ನಲಾದ ನಕಲಿ ಆಡಿಯೋ/ವಿಡಿಯೋ ಕುರಿತು ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಖಾಸಗಿ ಸುದ್ದಿ ವಾಹಿನಿ ಫೋಕಸ್‌ ಟಿವಿ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Advertisement

ಫೋಕಸ್‌ ಟಿವಿ ಮುಖ್ಯಸ್ಥ ಹೇಮಂತ್‌ ಕುಮಾರ್‌ ಬಂಧಿತ. ಶಾಸಕ ಅರವಿಂದ ಲಿಂಬಾವಳಿ ಅವರ ಚುನಾವಣಾ ಕರ್ತವ್ಯಗಳನ್ನು ನೋಡಿಕೊಳ್ಳುವ ಗಿರೀಶ್‌ ಭಾರಧ್ವಾಜ್‌ ಎಂಬುವರು ಮೇ 2ರಂದು ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಗಂಭೀರ ಪ್ರಕರಣವಾದರಿಂದ ಇಡೀ ಪ್ರಕರಣವನ್ನು ಸಿಸಿಬಿಗೆ ವರ್ಗಾಹಿಸಲಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಹೇಮಂತ್‌ಗೆ ಸೇರಿದ ಸಂಜಯನಗರದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಅಲ್ಲದೆ, ಆರೋಪಿ ಮುಖ್ಯಮಂತ್ರಿ ಕಚೇರಿ ಬಗ್ಗೆ ಮಾತನಾಡಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಹಣ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಕಚೇರಿಯ ಹೆಸರನ್ನು ದುರ್ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಹೇಮಂತ್‌ ಕುಮಾರ್‌ ಫೆ.10 ರಂದು ಶಾಸಕ ಅರವಿಂದ ಲಿಂಬಾವಳಿ ಅವರ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ಶಾಸಕರಿಗೆ ಸೇರಿದ ಆಡಿಯೋ ಬಗ್ಗೆ ಮಾತನಾಡಬೇಕಿದೆ ಎಂದು ಹೇಳಿದ್ದ.

Advertisement

ಈ ವಿಚಾರ ತಿಳಿದ ಗಿರೀಶ್‌ ಭಾರದ್ವಾಜ್‌ ಹೇಮಂತ್‌ಗೆ ವಾಟ್ಸ್‌ಅಪ್‌ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿ ಮುಖ್ಯಮಂತ್ರಿಗಳ ಆಪ್ತ ಸಹಾಯಕರಾದ ಸತೀಶ್‌ ಎಂಬುವರು ಆಡಿಯೋ ಅಥವಾ ವಿಡಿಯೋಗಳ 25 ಕಾಪಿಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಈ ಆಡಿಯೋವನ್ನು ಮುಖ್ಯಮಂತ್ರಿ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಭಯ ಹುಟ್ಟಿಸಿದ್ದಾನೆ. ಅಲ್ಲದೆ, ಆಡಿಯೋ, ವಿಡಿಯೋಗಳನ್ನು ಸಿಡಿ ಮಾಡಿಕೊಡುವಂತೆ ಜೆಡಿಎಸ್‌ನ ಪಾಲಿಕೆ ಸದಸ್ಯ ಆನಂದ್‌, ಹೆಬ್ಟಾಳದ ಜೆಡಿಎಸ್‌ ಮುಖಂಡ ಹನುಮಂತಗೌಡ, ಎಸಿಬಿ ಅಧಿಕಾರಿ ಬಡಿಗೇರ್‌ ಒತ್ತಾಯ ಮಾಡುತ್ತಿದ್ದಾರೆ ಎಂದು ಆಂತಕ ಹುಟ್ಟಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಫೆ.11 ರಂದು ದೂರುದಾರರಾದ ಗಿರೀಶ್‌ ಆರೋಪಿಗೆ ಕರೆ ಮಾಡಿ, “ಏನು ಮಾಡಬೇಕು ಹೇಳಿ? ನೀವು ಹೇಳದಿದ್ದರೆ ಹೇಗೆ?’ ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಹೇಮಂತ್‌, ಸಾಹೇಬ್ರ ಹತ್ತಿರ ಡಿಮ್ಯಾಂಡ್‌ ಮಾಡುವಷ್ಟು ದೊಡ್ಡವನಲ್ಲ. ನನಗೂ ಕಮಿಟ್‌ಮೆಂಟ್‌ ಇದೆ,

ಒಂದು 50(50 ಲಕ್ಷ ರೂ.) ಮಾಡಿಸಿ ಬಿಡಿ, ಇನ್ನು ಮುಂದೆ ಇದ್ಯಾವುದು ಸಾಹೇಬ್ರ ಬಳಿ ಸುಳಿಯದಂತೆ ನೋಡಿಕೊಳ್ಳುತ್ತೇನೆ’ ಎಂದು ಉತ್ತರಿಸಿದ್ದಾನೆ. ಅಲ್ಲದೆ, ಇದೇ ವಿಚಾರವಾಗಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಕರೆ ಮಾಡಿ ಮಾನಸಿಕ ಹಿಂಸೆ ಕೂಡ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಮೇ 2ರಂದು ಗಿರೀಶ್‌ ಭಾರಧ್ವಾಜ್‌, ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next