ಗದಗ: ಉತ್ತರ ಭಾರತದ ಶೀತವಲಯದಲ್ಲಿ ಬೆಳೆಯುವ ಕಪ್ಪು ಗೋಧಿ ಯನ್ನು ಬಿಸಿಲ ನಾಡು ಗದಗ ಜಿಲ್ಲೆಯಲ್ಲೂ ಬೆಳೆಯಬಹುದು! ಹುಬ್ಬೇರಿಸಬೇಡಿ, ಇಂಥ ಸಾಧನೆಯನ್ನು ನರಗುಂದ ತಾಲೂಕಿನ ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಮಾಡಿದ್ದಾರೆ.
ಆನ್‌ಲೈನ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸಾವಿರಾರು ರೂ. ದರದಲ್ಲಿ ಮಾರಾಟವಾಗುವ “ಕಪ್ಪು ಬಂಗಾರ’ವನ್ನು ಉತ್ತರ ಭಾರತದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಹರ್ಯಾಣ ರಾಜ್ಯದ ವಿವಿಧೆಡೆ ಬೆಳೆಯಲಾಗುತ್ತದೆ.
ಕಳೆದ ಐದು ವರ್ಷಗಳಿಂದ ಧಾರವಾಡ ಕೃಷಿ ವಿವಿ ಕೂಡ ಕಪ್ಪು ಗೋಧಿ ಬೆಳೆ ಕುರಿತು ಸಂಶೋಧನೆ ನಡೆಸುತ್ತಿದೆ. ಇದರ ಮಧ್ಯೆಯೇ ರೈತ ಮೃತ್ಯುಂಜಯ ವಸ್ತ್ರದ, ಸದ್ದಿಲ್ಲದೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಪ್ಪು ಗೋಧಿ ಬೆಳೆದು ಧಾರವಾಡ ಕೃಷಿ ವಿವಿ ತಜ್ಞರಿಗೂ ಅಚ್ಚರಿ ಮೂಡಿಸಿದ್ದಾರೆ. ಬಿಕಾಂ, ಎಲ್‌ಎಲ್‌ಬಿ ಪದವೀಧರರಾಗಿರುವ ಮೃತ್ಯುಂಜಯ, ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಾಗೂ ವಕೀಲರಾಗಿಯೂ ಸೇವೆ ಸಲ್ಲುತ್ತಿದ್ದಾರೆ. ಜತೆಗೆ ತಮ್ಮ ಸ್ವಗ್ರಾಮದಲ್ಲಿರುವ 13 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ, ಕಡಲೆ, ಕಪ್ಪು ಕಡಲೆ, ಸೋಂಪು ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ಸದ್ಯ ಪ್ರಾಯೋಗಿ ಕವಾಗಿ ಕೇವಲ ಐದು ಗುಂಟೆಯಲ್ಲಿ ಕಪ್ಪು ಗೋಧಿ ಬೆಳೆದಿದ್ದು, ಈಗಾಗಲೇ ಕಟಾವಿಗೆ ಬಂದಿದೆ.
ಕಪ್ಪು ಗೋಧಿ ಪ್ರಯೋಜನಗಳೇನು?:
ಕಪ್ಪು ಗೋಧಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿವಾರಣೆ, ಕ್ಯಾನ್ಸರ್ ತಡೆಗಟ್ಟುತ್ತದೆ. ಬೊಜ್ಜು ಕರಗಿಸುತ್ತದೆ. ಮಾನವನಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುತ್ತದೆ. ಕಪ್ಪು ಗೋಧಿ ಔಷ ಧೀಯ ಗುಣಗಳ ಜತೆಗೆ ಧಾರ್ಮಿಕ ಹಿನ್ನೆಲೆಯನ್ನೂ ಹೊಂದಿದೆ. ಉತ್ತರಾ ಖಂಡನಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕಪ್ಪು ಗೋಧಿ ಯಿಂದ ಸಿಹಿ ಖಾದ್ಯ ತಯಾರಿಸಿ ಪರಮೇಶ್ವರನಿಗೆ ನೈವೇದ್ಯ ಅರ್ಪಿಸಲಾಗುತ್ತದೆ ಎನ್ನುತ್ತಾರೆ ಧಾರವಾಡ ಕೃಷಿ ವಿವಿ ಬೇಸಾಯ ಶಾಸ್ತ್ರದ ಪ್ರಾಧ್ಯಾಪಕ ಪ್ರೊ|ಯು.ಕೆ.ಹುಲಿಹಳ್ಳಿ.
ಈ ಭಾಗದಲ್ಲಿ ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಮತ್ತಿತರೆ ಕಾರಣಗಳಿಂದ ಚಿಲ್ಲರೆ ಮಾರುಕಟ್ಟೆಗೆ ಬರುತ್ತಿಲ್ಲ. ಆನ್‌ಲೈನ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 700 ರೂ. ಗಳಿಂದ 1050 ರೂ.ವರೆಗೆ ಮಾರಾಟ ವಾಗುತ್ತಿದೆ. ಅಲ್ಲದೇ, ಇತ್ತೀಚೆಗೆ ಕೋವಿಡ್ ಸೋಂಕು ತಡೆಗಾಗಿ ಜನರು ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಅನೇಕ ರೀತಿಯ ಕಷಾಯ ಹಾಗೂ ಪೌಷ್ಟಿಕ ಆಹಾರಕ್ಕೆ ಒತ್ತು ನೀಡುತ್ತಿದ್ದರಿಂದ ಕಪ್ಪು ಗೋಧಿ ಗೆ ಬೇಡಿಕೆ ಹೆಚ್ಚಿದೆ ಎಂಬುದು ಗಮನಾರ್ಹ.
ಲಾಕ್ ಡೌನ್ ಅವಧಿಯಲ್ಲಿ ಕೃಷಿಯಲ್ಲಿ ಹೊಸ ಪ್ರಯೋಗದ ಚಿಂತನೆ ನಡೆಸಿದಾಗ ಕಪ್ಪು ಗೋಧಿ ಬೆಳೆ ಗಮನಕ್ಕೆ ಬಂದಿತ್ತು. ಆನ್‌ಲೈನ್‌ನಲ್ಲೇ 4 ಕೆಜಿ ಬಿತ್ತನೆ ಬೀಜ ಖರೀದಿಸಿ ಪ್ರಾಯೋಗಿಕವಾಗಿ 5 ಗುಂಟೆಯಲ್ಲಿ ಬೆಳೆದಿದ್ದು, ಕನಿಷ್ಠ 2 ಕ್ವಿಂಟಲ್ ಬೆಳೆ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಮೃತ್ಯುಂಜಯ ಪ್ರಭಾಕರ ವಸ್ತ್ರದ.
ವೀರೇಂದ್ರ ನಾಗಲದಿನ್ನಿ