Advertisement

ಎಸ್‌ಟಿಪಿಯಿಂದ ದುರ್ನಾತ, ಗಿಡಮರಗಳಲ್ಲಿ ಕಪ್ಪುಧೂಳು ಪತ್ತೆ 

10:28 AM Jan 05, 2018 | Team Udayavani |

ಮಹಾನಗರ: ಕಾವೂರಿನ ಮುಲ್ಲಕಾಡಿನಲ್ಲಿ ಕಾರ್ಯಾಚರಿಸುತ್ತಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ನೀರನ್ನು ಸಂಸ್ಕರಿಸುವ ವೇಳೆ ಸ್ಥಳೀಯರಿಗೆ ದುರ್ನಾತ ಬೀರುವ ಜತೆಗೆ ಗಿಡ-ಮರಗಳ ಎಲೆಗಳಲ್ಲಿ ಕಪ್ಪು ಬಣ್ಣದ ಧೂಳಿನ ಅಂಶ ಗೋಚರವಾಗುತ್ತಿದೆ.

Advertisement

ನಗರದ ಬಹುತೇಕ ಭಾಗದ ಡ್ರೈನೇಜ್‌ ನೀರು ಒಳಚರಂಡಿಯ ಮೂಲಕ ಸಾಗಿ ಮುಲ್ಲಕಾಡಿನ ಎಸ್‌ಟಿಪಿ (ಸುಯೇಜ್‌ ಟ್ರೀಟ್‌ಮೆಂಟ್‌ ಪ್ಲ್ರಾಂಟ್‌)ಯಲ್ಲಿ ಶುದ್ಧೀಕರಣಗೊಳ್ಳುತ್ತದೆ. ಶುದ್ಧಗೊಂಡ ನೀರನ್ನು ಗಿಡಗಳಿಗೆ, ನಿರ್ಮಾಣ ಕಾರ್ಯ ಹಾಗೂ ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ. ರಾಸಾಯನಿಕವನ್ನು ಬಳಸಿ ನೀರಿನ ಶುದ್ಧೀಕರಣ ನಡೆಸಲಾಗು ತ್ತಿದೆ. ಆದರೆ ಈಗ ಉಂಟಾಗಿರುವ ಸಮಸ್ಯೆಯ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಿದರೂ ಕ್ರಮ ಜರಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕೈಗಾರಿಕೆ ತ್ಯಾಜ್ಯ: ಆರೋಪ
ಮುಲ್ಲಕಾಡಿನ ಎಸ್‌ಟಿಪಿ ಕೇವಲ ಯಾವುದೇ ರೀತಿಯ ಕೈಗಾರಿಕೆಯ ತ್ಯಾಜ್ಯವನ್ನು ಬಿಡುವಂತಿಲ್ಲ. ಆದರೆ ಪ್ರಸ್ತುತ
ಅದಕ್ಕೆ ಕೈಗಾರಿಕೆಯ ನೀರನ್ನು ಬಿಡುತ್ತಿದ್ದಾರೆ ಹೀಗಾಗಿ ಇಂತಹ ಸಮಸ್ಯೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ 6 ತಿಂಗಳಿನಿಂದ ಇಂತಹ ತೊಂದರೆ ತೀವ್ರವಾಗಿ ಕಾಡುತ್ತಿದೆ ಎಂದು ಸಂಬಂಧಪಟ್ಟವರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ರಾತ್ರಿ ವೇಳೆ ಇಂತಹ ತೊಂದರೆ ತೀವ್ರವಾಗಿದ್ದು, ಮನೆಯಲ್ಲಿ ಮಲಗಲಾಗದ ಸ್ಥಿತಿ ಇದೆ. ಜತೆಗೆ ಈ ರೀತಿಯ ಕಪ್ಪು ಧೂಳಿನ ಪರಿಣಾಮ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.

ಎಲೆಗಳು ಪೂರ್ತಿ ಕಪ್ಪು
ಮುಲ್ಲಕಾಡು ಜನವಸತಿ ಪ್ರದೇಶದಲ್ಲಿ ಗಿಡಮರಗಳ ಎಲೆಗಳು ಎಸ್‌ ಟಿಪಿಯ ಪರಿಣಾಮ ಪೂರ್ತಿ ಕಪ್ಪಾಗಿದೆ. ತೆಂಗಿನ ಗರಿಗಳು, ಬಾಳೆ ಎಲೆಗಳು, ಹೂವಿನ ಗಿಡಗಳಲ್ಲಿ ಈ ರೀತಿಯ ಧೂಳು ಕಂಡುಬರುತ್ತಿದೆ. ಈ ಕುರಿತು ಸಂಬಂಧಪಟ್ಟವರಿಗೆ ತಿಳಿಸಿದಾಗ ಎಸ್‌ ಟಿಪಿಯಿಂದಾಗಿ ಆ ರೀತಿ ಆಗಿಲ್ಲ ಎಂಬ ಉತ್ತರ ಬರುತ್ತದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಕ್ರಮಕೈಗೊಳುವಂತೆ ಜಿಲ್ಲಾಧಿಕಾರಿ ಗಳು, ಮನಪಾ ಕಮಿಷನರ್‌, ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಲಾಗಿದೆ.

ಅಂತಹ ಸಮಸ್ಯೆ ಇಲ್ಲ.!
ಸ್ಥಳೀಯ ನಿವಾಸಿಯೊಬ್ಬರು ಆ ರೀತಿಯ ದೂರು ನೀಡಿದರೂ ಅದನ್ನು ನಿರ್ವಹಣೆ ಮಾಡುತ್ತಿರುವ ಎಸ್‌ಇಝಡ್‌ನ‌ ಅಧಿಕಾರಿಗಳು ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಕೊಳಚೆ ನೀರು ಸ್ವಲ್ಪ ದುರ್ನಾತ ಬೀರಬಹುದು. ಆದರೆ ಅದರಿಂದ ತೊಂದರೆಯಾಗುವ ಸ್ಥಿತಿ ಇಲ್ಲ. ಕೊಳಚೆ ನೀರು ಶುದ್ಧೀಕರಣಗೊಂಡು ಕುಡಿಯುವ ನೀರಿನಂತಾಗುತ್ತದೆ. ಅದರ ಪವರ್‌ ಪ್ಲ್ಯಾಂಟ್ , ಗಾರ್ಡನಿಂಗ್‌, ನಿರ್ಮಾಣ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇದು ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಅಂತಹ ದೂರುಗಳು ಬಂದಿಲ್ಲ ಎಂದು ಅಧಿಕಾರಿಗಳು ವಿವರಿಸುತ್ತಾರೆ.

Advertisement

ಎಸ್‌ಟಿಪಿಯಿಂದ ತೊಂದರೆಯಿಲ್ಲ
ಮಂಗಳೂರು ನಗರದ ಕೊಳಚೆ ನೀರು ಇಲ್ಲಿಗೆ ಬಂದು ಶುದ್ಧೀಕರಣಗೊಂಡು ಮರುಬಳಕೆಯಾಗುತ್ತದೆ. ದುರ್ನಾತದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ನಮ್ಮಲ್ಲಿಯೂ ಗಿಡಗಳಿದ್ದು, ಯಾವುದೇ ರೀತಿಯ ಧೂಳಿ ಅಂಶ ಕಂಡುಬಂದಿಲ್ಲ.
–  ಪುಂಡಲೀಕ ಶೆಣೈ, ಡೆಪ್ಯುಟಿ ಮ್ಯಾನೇಜರ್‌,
   ಸಂಸ್ಕರಣ ಘಟಕ

ಕೈಗಾರಿಕೆಯ ಕೊಳಚೆ
ಈ ಎಸ್‌ಟಿಪಿಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ. ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾತ್ರಿ ವೇಳೆ ತೀವ್ರ ದುರ್ನಾತ ಬೀರುತ್ತದೆ. ಜತೆಗೆ ಇದರಿಂದ ಸ್ಥಳೀಯ ಗಿಡಮರಗಳ ಎಲೆಗಳಲ್ಲಿ ಕಪ್ಪು ಧೂಳಿನ ಅಂಶ ಕಂಡುರುತ್ತಿದೆ. ಕೈಗಾರಿಕೆಯ ಕೊಳಚೆ ನೀರು ಬಿಡುತ್ತಿರುವುದರಿಂದ ಇಂತಹ ತೊಂದರೆಯುಂಟಾಗಿದೆ.
ನಾರಾಯಣ ಕಲ್ಯಾಣ್ತಾಯ
 ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next