ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಾಗಿ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ, ಹಣ ನೀಡಿ ಕೆಲವರು ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕರೇ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಮುಕ್ತ ತನಿಖೆಗೆ ಆದೇಶಿಸಬೇಕು. ಇದಕ್ಕೂ ಮೊದಲು ಯಡಿಯೂರಪ್ಪ ಅವರು ತಮ್ಮ ಮೇಲೆ ಗಂಭೀರ ಆರೋಪ ಬಂದಿರುವ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯನ್ನು ಅಂಜಿಸಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ ಮಾಡಿರುವ ಆರೋಪ ನಿರಾಧಾರ.
ಹೊಂದಾಣಿಕೆ ರಾಜಕಾರಣ ಎಂಬುದು ಕಾಂಗ್ರೆಸ್ ನಿಘಂಟಿನಲ್ಲಿಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ನಾಯಕರ ಬಳಿ ಅವರು ಹೇಳಿದಂತೆ ಯಾವ ಸಿಡಿ ಇಲ್ಲ. ಸಿಡಿ ವ್ಯವಹಾರ, ಅಶ್ಲೀಲ ವ್ಯವಹಾರ ಕಾಂಗ್ರೆಸ್‌ನವರು ಎಂದೂ ಮಾಡಿಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡದೇ ಮುಖ್ಯಮಂತ್ರಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದು ನೋವಿನ ಸಂಗತಿ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಆಡಳಿತ ಬಿಜೆಪಿಯಲ್ಲಿದ್ದರೂ ಜನಪರ ಧ್ವನಿ ಎತ್ತುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಧೈರ್ಯ ಮೆಚ್ಚುವಂತಹದು.
ಕಾಯ್ದೆ ತಿದ್ದುಪಡಿಯಿಂದ ಖಾಸಗಿ ಕಂಪನಿಗಳು ಎಪಿಎಂಸಿಗೆ ಪರ್ಯಾಯವಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಮೂಲಕ ರೈತರಿಗೆ ಆರಂಭದಲ್ಲಿ ಉತ್ತಮ ಬೆಲೆ ಸಿಗಬಹುದು. ಆದರೆ, ಎಪಿಎಂಸಿ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿ, ಸರ್ಕಾರದ ಯಾವುದೇ ನಿಯಂತ್ರಣವಿಲ್ಲದ ಖಾಸಗಿ ಕಂಪನಿಗಳ ಕೈಗೆ ದೇಶ ಕೃಷಿ ಉತ್ಪನ್ನ ಮಾರಾಟವನ್ನು ನೀಡುವ ಹುನ್ನಾರ ಅಡಗಿದೆ. ಇದರಿಂದ ರೈತರ ಶೋಷಣೆ ಜೊತೆಗೆ ಕೃತಕ ಅಭಾವ ಸೃಷ್ಟಿ, ಕಾಳಸಂತೆ ವ್ಯಾಪಾರ, ಬೆಲೆ ಏರಿಕೆಯಂಥ ಅಪಾಯಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಮೋದಿ ಸರ್ಕಾರ ಎರಡು ಅವಧಿಗೆ ಅಧಿಕಾರ ನಡೆಸಿ ಈ ಆರು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದಲ್ಲಿದ್ದ ಬಿಎಸ್‌ಎನ್‌ಎಲ್, ರೈಲ್ವೆ, ವಿಮಾನ ಸೇರಿದಂತೆ ಸರ್ಕಾರಿ ಉದ್ದಿಮೆಗಳನ್ನು ಅಂಬಾನಿ, ಅದಾನಿ ಅವರಂಥ ದೊಡ್ಡ ಉದ್ಯಮಿ ಶ್ರೀಮಂತರಿಗೆ ಖಾಸಗಿಕರಣ ಮಾಡಿದ್ದಾರೆ. ಇದೀಗ ರೈತರ ಹೊಲದ ಮೇಲೆ ಅವರ ಕಣ್ಣು ಬಿದ್ದಿದೆ ಎಂದು ವಾಗ್ಧಾಳಿ ನಡೆಸಿದರು. ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಶಾಸಕರಾದ ವಿಠಲ ಕಟಕಧೋಂಡ, ಶರಣಪ್ಪ ಸುಣಗಾರ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಹಾಸಿಂಪೀರ ವಾಲೀಕಾರ ಇದ್ದರು.