Advertisement

ಸಂಭ್ರಮದ ದಿನದಂದೇ ಉಪನ್ಯಾಸಕರ ಕೈಗೆ ಕಪ್ಪು ಪಟ್ಟಿ!

12:43 PM Nov 23, 2019 | Team Udayavani |

ಬಾಗಲಕೋಟೆ: ದೇಶದ 2ನೇ ಅತಿದೊಡ್ಡ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದ ಇಲ್ಲಿನ ತೋಟಗಾರಿಕೆ ವಿವಿ, ಒಂದಿಲ್ಲೊಂದು ಸಮಸ್ಯೆಯಲ್ಲೇ ಮುನ್ನಡೆಯುತ್ತಿದೆ.

Advertisement

ಹೌದು, ಶುಕ್ರವಾರ ತೋಟಗಾರಿಕೆ ವಿವಿ ಸ್ಥಾಪನೆಗೊಂಡು 11ರ ಸಂಭ್ರಮ. ಈ ಸಂಭ್ರಮವನ್ನು ವಿವಿಯ ಎಲ್ಲ ಅಧಿಕಾರಿಗಳು, ವಿಜ್ಞಾನಿಗಳು, ಸಿಬ್ಬಂದಿ ಹಾಗೂ ವ್ಯವಸ್ಥಾಪನ ಮಂಡಳಿ ಸದಸ್ಯರು ಜತೆ ಸೇರಿ ಆಚರಿಸಬೇಕಿತ್ತು. ಪ್ರತಿವರ್ಷ ವಿವಿಯ ಸಂಸ್ಥಾಪನೆ ದಿನವನ್ನು ಸಂಭ್ರಮದಿಂದಲೇ ನಡೆಯುತ್ತಿತ್ತು. ಆದರೆ, ಈ ವರ್ಷ ಮಾತ್ರ, ವಿವಿಯ ಶಿಕ್ಷಕ ಸಿಬ್ಬಂದಿ, ಈ ಸಂಸ್ಥಾಪನೆ ದಿನವನ್ನೇ ಬಹಿಷ್ಕರಿಸಿದರು. ಶಿಕ್ಷಕರ ಹೋರಾಟದಿಂದ ಮುಜುಗರಕ್ಕೆ ಒಳಗಾದ ವ್ಯವಸ್ಥಾಪನಾಮಂಡಳಿ ಸದಸ್ಯರೂ, ಕಾರ್ಯಕ್ರಮದತ್ತ ಸುಳಿಯಲಿಲ್ಲ. ಸಂಭ್ರಮಪಡಬೇಕಾದ ದಿನ, ಹೋರಾಟದ ದಿನವಾಗಿ ಮಾರ್ಪಟ್ಟಿತ್ತು.

ಸದಸ್ಯರು-ಉಪನ್ಯಾಸಕರ ಮಧ್ಯೆ ಸಂಘರ್ಷ: ತೋಟಗಾರಿಕೆ ವಿವಿಗೆ ಏಳು ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ಅವರೆಲ್ಲ ಸರ್ಕಾರದಿಂದ ನೇಮಕಗೊಂಡಿದ್ದು, ವ್ಯವಸ್ಥಾಪನಾ ಮಂಡಳಿಯಲ್ಲಿ ಕೈಗೊಳ್ಳುವ ಮಹತ್ವದ ನಿರ್ಧಾರಗಳು, ಅವರ ವಿವೇಚನೆಗೆ ಒಳಪಟ್ಟಿರುತ್ತವೆ. ವಿವಿಯ ಕುಲಪತಿ ನೇತೃತ್ವದಲ್ಲಿ ವ್ಯವಸ್ಥಾಪನಾ ಮಂಡಳಿ ಸಭೆ ನಡೆದರೂ ಎಲ್ಲ ಸದಸ್ಯರು ಒಪ್ಪಿಗೆ ನೀಡಿದರೆ ಮಾತ್ರ ವಿವಿಗೆ ಸಂಬಂಧಿಸಿದ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತವೆ. ಆದರೆ, ಕಳೆದ 2016ರಿಂದ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಅಧಿಕಾರಿ-ಉಪನ್ಯಾಸಕರ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ. ಈ ಸಂಘರ್ಷಕ್ಕೆ ಇತಿಶ್ರೀ ಹಾಡಲು, ಸರ್ಕಾರ ಅಥವಾ ತೋಟಗಾರಿಕೆ ಸಚಿವರು ಮಧ್ಯೆ ಪ್ರವೇಶಿಸಿಲ್ಲ ಎಂಬ ಕೊರಗು ಮನೆ ಮಾಡಿದೆ.

ಭ್ರಷ್ಟಾಚಾರದ ಆರೋಪ: ವಿವಿಯ ವ್ಯವಸ್ಥಾಪನ ಮಂಡಳಿ ಸದಸ್ಯರು, ತಮಗೆ ಬೇಕಾದ ಹಾಗೂ ವಿವಿಧ ಕಟ್ಟಡ ಕಾಮಗಾರಿ, ತಾವು ಮೊದಲೇ ಮಾಡಿಕೊಂಡ ಒಪ್ಪಂದದ ವಿಷಯಗಳಿಗೆ ಮಾತ್ರ ಅನುಮೋದನೆ ಕೊಡುತ್ತಾರೆ. ವಿವಿಯ ಉಪನ್ಯಾಸಕರ ಬೇಕು-ಬೇಡಗಳಿಗೆ ಒಮ್ಮೆಯೂ ಸ್ಪಂದಿಸಿಲ್ಲ. ಒಂದೇ ವಿಷಯವನ್ನು ಕಳೆದ 20016ರ 47ನೇ ಬೋರ್ಡ್‌ ಸಭೆಯಿಂದಲೂ ಮಂಡಿಸಲಾಗುತ್ತಿದೆ. ಆದರೆ, ಒಮ್ಮೆಯೂ ಆ ವಿಷಯಕ್ಕೆ ಒಪ್ಪಿಗೆ ನೀಡಿಲ್ಲ.

ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣ ವಿರೋಧ ಮಾಡಲಾಗುತ್ತಿದೆ ಎಂಬುದು ಉಪನ್ಯಾಸಕರ ಆರೋಪ. ಸರ್ಕಾರದಿಂದ ನಾಮ ನಿರ್ದೇಶನಗೊಂಡ ಏಳು ಜನ ವ್ಯವಸ್ಥಾಪನಾ ಮಂಡಳಿ ಸದಸ್ಯರಲ್ಲಿ ಬಾಗಲಕೋಟೆಯ ಶಂಕ್ರಪ್ಪ ಮಳಲಿ ಎಂಬ ಸದಸ್ಯರು ಮಾತ್ರ ಪ್ರತಿಬಾರಿ ಉಪನ್ಯಾಸಕರ ಸಮಸ್ಯೆ ಕುರಿತು ಮಾತನಾಡುತ್ತಾರೆ. ಉಳಿದೆಲ್ಲ ಸದಸ್ಯರು, ವಿವಿಯ ಸಮಸ್ಯೆ ಪರಿಹಾರಕ್ಕೂ ಮುಂದಾಗುತ್ತಿಲ್ಲ. ವಿವಿಯ ಆರಂಭಗೊಂಡು 11 ವರ್ಷವಾದರೂ, ಸೂಕ್ತ ಭೂಮಿ ಸಿಕ್ಕಿಲ್ಲ. ಕೇಂದ್ರ-ರಾಜ್ಯ ಸರ್ಕಾರದಿಂದ ಅನುದಾನ ತಂದಿಲ್ಲ.

Advertisement

ವಿವಿಗೆ ಮುಖ್ಯವಾಗಿ ಬೇಕಾಗುವ ನೀರಿನ ಸಮಸ್ಯೆ ನೀಗಿಸಲು ಪ್ರಯತ್ನಿಸಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸ್ಪಂದಿಸದ ವ್ಯವಸ್ಥಾಪನಾ ಮಂಡಳಿ ಇರುವುದಾದರೂ ಏತಕ್ಕೆ ಎಂಬುದು ಹಲವರ ಪ್ರಶ್ನೆ. ಒಟ್ಟಾರೆ, ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಉಪನ್ಯಾಸಕರ ಮಧ್ಯೆ ಸಂಘರ್ಷ ಮುಂದುವರಿದಿದೆ. ಇದು ವಿವಿಯ ಅಭಿವೃದ್ಧಿಗೆ ಮಾರಕವಾಗದಿರಲಿ ಎಂಬುದು ಜಿಲ್ಲೆಯ ರೈತರ ಒತ್ತಾಸೆ.

ವಿವಿಯ ಶಿಕ್ಷಕ ಸಿಬ್ಬಂದಿಗೆ ಕಳೆದ 2016ರಿಂದ ಬಡ್ತಿ ನೀಡಿಲ್ಲ. ಈ ಕುರಿತು ಸ್ವತಃ ರಾಜ್ಯಪಾಲರು ಆದೇಶ ನೀಡಿದರೂ, ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೂಕ್ತವಲ್ಲದ ಕಾರಣ ನೀಡಿ, ಬಡ್ತಿಗೆ ವಿರೋಧ ಮಾಡುತ್ತಿದ್ದಾರೆ. ವಿವಿಯ ಅಭಿವೃದ್ಧಿಗೆ ಶ್ರಮಿಸದ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ಬದಲಾಯಿಸಬೇಕು. ಡಾ| ಎಂ.ಪಿ. ಬಸವರಾಜಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ, ತೋಟಗಾರಿಕೆ ವಿವಿ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next