ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಮಧ್ಯೆ ಬ್ಲಾಕ್ ಫಂಗಸ್ ಸಹ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರಕಾರಿ ಮತ್ತು ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ಕೋವಿಡ್ ನಿರ್ವಹಣೆಯಲ್ಲಿ ತೊಡಗಿರುವ ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 39 ಆಸ್ಪತ್ರೆಗಳ ವೈದ್ಯರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿಯೂ ಸಹ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಬಾಗಲಕೋಟೆ, ಬೀಳಗಿ ಹಾಗೂ ಮುಧೋಳದ ತಲಾ ಒಬ್ಬರಲ್ಲಿ ಸೇರಿ 3 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಹುಮಿಡಿಫೈಯರ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದು, ಹೆಚ್ಚಿನ ಆಸ್ಪತ್ರೆಗಳಲ್ಲಿ ಹ್ಯುಮಿಡಿಫೈಯರ್ನಲ್ಲಿ ಸಾದಾ ನೀರನ್ನು ಉಪಯೋಗಿಸುತ್ತಿರುವುದರಿಂದ ಈ ಸೋಂಕು ಕಂಡುಬಂದಿದ್ದು, ಈ ರೀತಿ ಸಾದಾ ನೀರನ್ನು ಉಪಯೋಗಿಸುವ ವೇಳೆಯಲ್ಲಿ ಸೋಂಕಿತರಿಗೆ ಬ್ಲಾಕ್ ಫಂಗಸ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ವೈದ್ಯರು ಇದನ್ನು ಗಂಭೀರವಾಗಿ ಪರಿಗಣಿಸಿ ಹ್ಯುಮಿಡಿಫೈಯರ್ ನಲ್ಲಿ ಕಡ್ಡಾಯವಾಗಿ ಡಿಸ್ಟಿಲರಿ ವಾಟರ್ ಬಳಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದರು. ವೈದ್ಯರು ಕೋವಿಡ್ ನಿರ್ವಹಣೆಯ ಜತೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ ಬಗ್ಗೆ ಸರಕಾರದಿಂದ ಬಂದಿರುವ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಆಕ್ಸಿಜನ್ ಜಿಲ್ಲಾಡಳಿತದಿಂದ ಪೂರೈಕೆ ಮಾಡಲಾಗುತ್ತಿದೆ. ಅಗತ್ಯತೆಗೆ ಅನುಗುಣವಾಗಿ ಸೋರಿಕೆಯಾಗದಂತೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ರೆಮ್ ಡೆಸಿವಿಯರ್‌ಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಎಸ್‌ಆರ್ ಎಫ್ ಐಡಿ ಹೊಂದಿದವರಿಗೆ ಅಗತ್ಯವಿರುವ ರೆಮ್ ಡೆಸಿವಿಯರ್ ನೇರವಾಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದ್ದು, ಯಾವುದೇ ರೀತಿಯ ತೊಂದರೆ ಇರವದಿಲ್ಲ. ರೆಮ್ ಡೆಸಿವಿಯರ್ ಹೊರಗಡೆ ತರುವಂತ ಬರೆದುಕೊಡುವಂತಿಲ್ಲ. ತಮಗೆ ಅಗತ್ಯವಿರುವ ರೆಮ್ ಡೆಸಿವಿಯರ್ ಚುಚುಮದ್ದನ್ನು ಎಸ್‌ಆರ್‌ಎಫ್ ಐಡಿ ಹೊಂದಿದ ಆಸ್ಪತ್ರೆಗಳು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡನೇ ಅಲೆಯಿಂದ ಮೃತಪಟ್ಟವರ ಸಂಖ್ಯೆಯನ್ನು ಅಡಿಟ್ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್.ದೇಸಾಯಿ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ|ಕುಸುಮಾ ಮಾಗಿ ಉಪಸ್ಥಿತರಿದ್ದರು.