ಬಜಪೆ: ಕಳೆಗಟ್ಟಿದ ವಾರದ ಸಂತೆ ಬಜಪೆ, ಜೂ. 13: ಬಜಪೆ ಸೋಮ ವಾರದ ಸಂತೆಯಲ್ಲಿ ಅಲಸಂಡೆಯ ದರ್ಬಾರ್ ನಡೆದಿದೆ. ಅಲಸಂಡೆ ಕೆ.ಜಿ. 30 ರೂ. ಆಗಿದ್ದ ಕಾರಣ ಜನರು ಭರ್ಜರಿ ಖರೀದಿಗೆ ಮುಂದಾಗಿದ್ದಾರೆ.
ಮಧ್ಯಾಹ್ನವೇ ಐದಾರು ಮೂಟೆ ಖಾಲಿ: ಒಂದು ಗಂಟೆಗೆ ಅಲಸಂಡೆಯ ಐದಾರು ಮೂಟೆಗಳು ಖಾಲಿಯಾಗಿದ್ದು, ವ್ಯಾಪಾರಿಗಳು ಬಿರುಸಿನಿಂದ ಮಾರಾಟ ಮಾಡಿದರು. ಸಂತೆಗೆ ಬಂದ ಜನರಿಗೆ ಅಲಸಂಡೆ ತೃಪ್ತಿ ಕೊಟ್ಟಿದೆ. ಭಾರಿ ಸಮಯ ಅನಂತರ ಇಂತಹ ದೃಶ್ಯ ಬಜಪೆ ಸಂತೆಯಲ್ಲಿ ಕಂಡು ಬಂದಿದೆ. ತೊಂಡೆಕಾಯಿಗೆ ಕೆ.ಜಿಗೆ 30 ರೂ., ಸೌತೆ ಕಾಯಿ ಕೆ.ಜಿ.20 ರೂ. ಯಾದರೂ ತೆಗೆದುಕೊಳ್ಳುವ ಗಿರಾಕಿಗಳಿಲ್ಲ.
ಇಳಿದ ತರಕಾರಿ ದರ: ತರಕಾರಿ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಟೊಮೋಟೊ ಕೆ.ಜಿ.ಗೆ 80ರಿಂದ 60, ಬೆಂಡೆ 50ರಿಂದ 40, ಬೀನ್ಸ್ 80ರಿಂದ 50, ಸೌತೆ 30ರಿಂದ 20ಕ್ಕೆ ಇಳಿದಿದೆ. ಆಲಸಂಡೆ 50ರಿಂದ 20 ರೂ.ಗೆ ಇಳಿದಿದೆ. ಊರಿನ ಹೀರೆಕಾಯಿ, ಬೆಂಡೆ, ಹರಿವೆ ಮಾರುಕಟ್ಟೆಗೆ ಬಂದಿದೆ. ಹೀರೆಕಾಯಿ ಕೆ.ಜಿ.70, ಬೆಂಡೆ ಕೆ.ಜಿ.ಗೆ 80, ಹರಿವೆ ಒಂದು ಕಟ್ಟು 25 ರೂ. ದರ ಇದೆ.
ಬೆಂಡೆ, ಮುಳ್ಳುಸೌತೆಗೆ ಬಿತ್ತನೆ ಪ್ರಾರಂಭ: ಬಿಸಿಲು ಮಳೆಯಿಂದಾಗಿ ಕೃಷಿಕರಿಗೆ ತರಕಾರಿ ಬೀಜ ಬಿತ್ತನೆಗೆ ತಡೆಯಾಗಿ ಬಿತ್ತನೆ ತಡವಾಗಿದೆ. ಈಗ ರೈತರು ಬೆಂಡೆ ಮತ್ತು ಮುಳ್ಳುಸೌತೆ ಬಿತ್ತನೆ ಆರಂಭಿಸಿದ್ದಾರೆ. ಕೆಲವು ಕೃಷಿಕರ ಬೇಗನೆ ಬಿತ್ತನೆ ಮಾಡಿದ್ದರು.ಬಿಸಲಿನಿಂದಾಗಿ ತರಕಾರಿ ಕೃಷಿಗೆ ಹಾನಿಯಾಗಿದೆ.
Related Articles
ಮೌನವಾದ ಮಾವು: ಸಂತೆಯಲ್ಲಿ ಮಾವು ಭಾರಿ ಕಡಿಮೆ ಕಂಡು ಬಂತು. ಮಲ್ಲಿಕ ಮಾವು ಹೆಚ್ಚು ಕಾಣಿಸಲೇ ಇಲ್ಲ. ಕಳೆದ ವಾರದ ಸಂತೆಯಲ್ಲಿ ಕಂಡು ಬಂದ ಮಾವು ಈ ವಾರದ ಸಂತೆಯಲ್ಲಿ ಕಾಣಿಸದೇ ಇರುವುದು ಮಾವು ಪ್ರಿಯರಿಗೆ ಬೇಸರ ತಂದಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆ ಅಭಾವ:
ಬಜಪೆ: ಮಾರುಕಟ್ಟೆಯಲ್ಲಿ ಒಂದು ವಾರದಿಂದ ಮೊಟ್ಟೆ ಅಭಾವ ಕಂಡು ಬಂದಿದೆ. ದರದಲ್ಲಿ ಕೊಂಚ ಏರಿಕೆ (ರಖಂ ಒಂದಕ್ಕೆ 5.70 ರೂ.) ಕಂಡರೂ ಮೊಟ್ಟೆ ಲೈನ್ ಸೇಲ್ ಟೆಂಪೋಗಳು ತಮ್ಮ ನಿಗದಿತ ದಿನಗಳಲ್ಲಿ ಬಾರದೇ ಇರುವುದು ಅದನ್ನು ನಂಬಿಕೊಂಡ ಸ್ಥಳೀಯ ವ್ಯಾಪಾರಿಗಳಲ್ಲಿ ಚಿಂತೆ ಉಂಟು ಮಾಡಿದೆ. ಮೊಟ್ಟೆಗೆ ಬೇಡಿಕೆಯೂ ಏರಿದೆ. ಮೊಟ್ಟೆ ದಾಸ್ತಾನು ಇಲ್ಲ. ಫಾರ್ಮ್ನಿಂದ ನಿಗದಿತವಾಗಿ ಬರುವ ಲಾರಿಗಳು ಕ್ಲಪ್ತ ಸಮಯಕ್ಕೆ ಆರ್ಡರ್ ಮಾಡಿದಷ್ಟು ಬರದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಕ್ಯಾಶ್ ವಹಿವಾಟು: ಈಗ ಮೊಟ್ಟೆ ವಹಿವಾಟುಗೆ ಸಾಲ ನೀಡಲಾಗುವುದಿಲ್ಲ. ಮೊದಲು ಹಣ ಮತ್ತೆ ಮೊಟ್ಟೆ. ದಾವಣಗೆರೆ, ಮೈಸೂರಿನ ಫಾರ್ಮ್ ನಿಂದ ಮೊಟ್ಟೆ ಮಂಗಳೂರು ಮಾರುಕಟ್ಟೆಗೆ ಬರುತ್ತದೆ.ಹಿಂದೆ ಮೊಟ್ಟೆ ಸಾಲ ಕೊಡುತ್ತಿದ್ದ ಫಾರ್ಮ್ ಗಳಲ್ಲಿ ಈಗ ಪ್ರಥಮವಾಗಿ ಡೀಲರ್ ಗಳ ಆರ್ಡರ್ ಜತೆಗೆ ಅದಕ್ಕೆ ಕ್ಯಾಶ್ ನೀಡಿದರೆ ಮಾತ್ರ ಮೊಟ್ಟೆ ಕಳುಹಿಸಲಾಗುತ್ತದೆ. ಒಂದು ಲಾರಿಯಲ್ಲಿ 1.2 0 ಲಕ್ಷ ಮೊಟ್ಟೆ ಲೋಡ್ ಆಗುತ್ತದೆ. ಈಗ ಮೊಟ್ಟೆ ಇದ್ದಷ್ಟು ಲೋಡ್ ಆಗುತ್ತದೆ.