ಗಂಗಾವತಿ: ಕಾರ್ಯಕ್ರಮದ ಪರವಾನಿಗೆಯ ಅವಧಿ ಮುಗಿದರೂ ಭಾಷಣ ಮುಂದುವರಿಸಿದ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ. ಎಲ್ .ಸಂತೋಷ್ ಅವರ ಭಾಷಣಕ್ಕೆ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬಿ.ಎಲ್. ಸಂತೋಷ ಅವರು ಭಾಷಣವನ್ನು ಮೊಟಕುಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಮರಳಿ ಹತ್ತಿರ ಇರುವ ಖಾಸಗಿ ರೆಸಾರ್ಟ್ ಹೊಟೇಲ್ ನಲ್ಲಿ ರವಿವಾರ ಮಧ್ಯಾಹ್ನ ಜರುಗಿದೆ.
ಬಿಜೆಪಿ ಡಿಜಿಟಲ್ ಮಾಧ್ಯಮ ಕಾರ್ಯಕರ್ತರ ಬಳ್ಳಾರಿ ವಿಭಾಗೀಯ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ .ಎಲ್. ಸಂತೋಷ ಅವರು ಮಾತನಾಡುವ ಸಂದರ್ಭದಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಗುರಪ್ಪ ನಾಯಕ ಮತ್ತು ಗುರುವಿನ ಗೌಡ ನಾಯಕ ಹಾಗೂ ಗ್ರಾಮೀಣ ಸಿಪಿಐ ಮಂಜುನಾಥ್ ಅವರು ವೇದಿಕೆಯ ಮೇಲೆ ಹತ್ತಿ ಕಾರ್ಯಕ್ರಮಕ್ಕೆ ಪರವಾನಿಗೆ ಪಡೆದ ಅವಧಿ ಮುಕ್ತಾಯವಾಗಿದ್ದು ಭಾಷಣ ನಿಲ್ಲಿಸುವಂತೆ ಸೂಚಿಸಿದರು ಇದಕ್ಕೆ ವೇದಿಕೆ ಮೇಲಿದ್ದ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಬಿ. ಎಲ್ .ಸಂತೋಷ್ ಮಾತನಾಡಿ ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ತಾವು ಮಾಡುತ್ತಿದ್ದಾರೆ. ಈಗಾಗಲೇ ಕಾರ್ಯಕರ್ತರಿಗೆ ನಾನು ಎಲ್ಲವನ್ನು ಹೇಳಿದ್ದೇನೆ. ನನ್ನ ಭಾಷಣವನ್ನು ಮುಗಿಸುತ್ತೇನೆ. ಒಂದು ವೇಳೆ ಅವಧಿ ಮುಗಿದರು ಭಾಷಣ ಮಾಡಿದ ಆರೋಪದಲ್ಲಿ ನನ್ನ ಮೇಲೆ ಅಧಿಕಾರಿಗಳು ಕೇಸನ್ನು ಹಾಕಿಕೊಳ್ಳಬಹುದು ಎಂದರು.
ನಂತರ ಅಧಿಕಾರಿಗಳು ಯಾವುದೇ ನೋಟಿಸನ್ನು ನೀಡದೆ ಎಚ್ಚರಿಕೆಯನ್ನು ನೀಡಿ ಅಲ್ಲಿಂದ ತೆರಳಿದರು.
ಬಿಜೆಪಿ ಬಳ್ಳಾರಿ ವಿಭಾಗದ ಬಳ್ಳಾರಿ,ವಿಜಯನಗರ,ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬಿಜೆಪಿ ಸೋಶಿಯಲ್ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಸಮ್ಮೇಳನವನ್ನು ತಾಲೂಕಿನ ಮರಳಿ ಹತ್ತಿರದ ರಾಜ್ ಕೌಂಟಿ ರೆಸಾರ್ಟ್ ನಲ್ಲಿ ಬೆಳ್ಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಚುನಾವಣಾ ಅಧಿಕಾರಿಗಳಿಂದ ಪರವಾನಿಗೆ ಪಡೆದು ಆಯೋಜಿಸಲಾಗಿತ್ತು.
ಬಿ.ಎಲ್. ಸಂಸಂತೋಷ ಅವರು ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಕಾರ್ಯಕ್ರಮ ಕೊನೆಗೊಳ್ಳುವ ಅವಧಿ ಮುಗಿದು ೧೦ ನಿಮಿಷಗಳಾಗಿದ್ದರಿಂದ ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಗುರ್ರಪ್ಪ ನಾಯಕ,ಗುರುವಿನಗೌಡ ನಾಯಕ ಮತ್ತು ಗ್ರಾಮೀಣ ಸಿಪಿಐ ಮಂಜುನಾಥ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ನಿಗದಿ ಅವಧಿ ಮುಕ್ತವಾಗಿ ೧೦ ನಿಮಿಷಗಳಾಗಿದ್ದು ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದ ಘಟನೆ ಜರುಗಿದೆ.