Advertisement

ಬಿಕೆಎಸ್‌ ಅಯ್ಯಂಗಾರ್‌ ಶತಸಂವತ್ಸರ ಯೋಗ 

06:15 AM Dec 03, 2017 | Harsha Rao |

ಬಿಕೆಎಸ್‌ ಅಯ್ಯಂಗಾರ್‌ ಎಂದ ತತ್‌ಕ್ಷಣ “ಅಯ್ಯಂಗಾರ್‌ ಯೋಗ’ ನೆನಪಿಗೆ ಬರುತ್ತದೆ. ಬಿಕೆಎಸ್‌ ಅಯ್ಯಂಗಾರ್‌ ಅವರು “ಯೋಗ ಪಟು’ ಎಂಬುದು ನಿಜವೇ. ಅದಕ್ಕಿಂತ ಹೆಚ್ಚಾಗಿ ದೇಶ -ವಿದೇಶಗಳಲ್ಲಿ ಯೋಗ ಕಲೆಯನ್ನು ಪರಿಚಯಿಸಿ ಜನಪ್ರಿಯಗೊಳಿಸಿದವರು, ಸಾವಿರಾರು  ಶಿಷ್ಯರನ್ನು ಸಿದ್ಧಗೊಳಿಸಿದ ವರು, “ಅಯ್ಯಂಗಾರ್‌ಯೋಗ’ದ ಮಹಣ್ತೀವನ್ನು ಸಾರಿದವರು. ಅವರೇ ಹೇಳುವಂತೆ, “ನನ್ನ ಶರೀರ ನನ್ನ ಪಾಲಿನ ದೇವಾಲಯ, ಯೋಗಾಸನವೆಂದರೆ ಪ್ರಾರ್ಥನೆ!’
ಅನಾರೋಗ್ಯವನ್ನು ಬೆನ್ನಿಗಂಟಿಸಿಕೊಂಡೇ ಬಾಲ್ಯವನ್ನು ಕಳೆದ ಅಯ್ಯಂಗಾರರು, “ಜನರಿಂದ ನಿರ್ಲಕ್ಷ್ಯಕ್ಕೊಳಗಾದ ಜೀವಿ’ಯಂತೆ ಬದುಕಿದವರು. ಮುಂದೆ ಜಗತ್ತೇ ಬೆರಗುಗೊಳ್ಳುವ ಯೋಗಾಚಾರ್ಯನಾಗಿ ಬೆಳೆದ ಅವರ ಆತ್ಮಕತೆ ಉಳಿದವರ ಪಾಲಿಗೆ ಆತ್ಮವಿಶ್ವಾಸದ ಕತೆಯಾಗಬಲ್ಲುದು. ಭಾರತ ಸರ್ಕಾರವು ಅಯ್ಯಂಗಾರರನ್ನು ಪದ್ಮವಿಭೂಣ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌ ಹುಟ್ಟಿದ್ದು ನೂರು ವರ್ಷಗಳ ಹಿಂದೆ ; 1918ರ ಡಿಸೆಂಬರ್‌ 14ರಂದು. ಹುಟ್ಟೂರು ಕೋಲಾರ ಜಿಲ್ಲೆಯ ಬೆಳ್ಳೂರು. ಅವರ ತಂದೆ-ತಾಯಿಗೆ ಒಟ್ಟು 13 ಮಂದಿ ಮಕ್ಕಳು. ಅವರಲ್ಲಿ ಹತ್ತು ಮಂದಿ ಮಾತ್ರ ಬದುಕುಳಿದಿದ್ದರು. ಸದಾಕಾಲ ಅಸ್ವಾಸ್ಥ್ಯದಿಂದ ನರಳುತ್ತಿದ್ದ ಸುಂದರರಾಜನ ಬದುಕಿನಲ್ಲಿ ಹೊಸ ದಾರಿಯನ್ನು ತೆರೆದವರು ಅವರ ಸಹೋದರಿಯ ಪತಿ ತಿರುಮಲೈ ಕೃಷ್ಣಾಮಾಚಾರ್ಯರು. ಕೃಷ್ಣಾಮಾಚಾರ್ಯರು ಮೈಸೂರು ನಾಲ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿ ಜಗನ್ಮೋಹನ ಚಿತ್ರಶಾಲೆಯಲ್ಲಿ ಯೋಗಶಾಲೆಯೊಂದನ್ನು ನಡೆಸುತ್ತಿದ್ದರು. 1934ರಲ್ಲಿ ತಮ್ಮ ಸಹೋದರಿಗೆ ಸಹಾಯಕನಾಗಿ ಹುಟ್ಟೂರಿನಿಂದ ಮೈಸೂರಿಗೆ ತೆರಳಿದ ಸುಂದರರಾಜ, ಅಲ್ಲಿ ತಮ್ಮ ಭಾವ ಕೃಷ್ಣಮಾಚಾರ್ಯರಿಂದ ಕೆಲವು ಯೋಗಾಸನಗಳನ್ನು ಕಲಿತರು. ಮಹಾರಾಜರ ಮುಂದೆ ಯೋಗ ಪ್ರಾತ್ಯಕ್ಷಿಕೆ ನೀಡಿ ಗುರುವಿನ ಪ್ರೀತಿಗೆ ಪಾತ್ರರಾದರು. ಮಹಾರಾಜರ ಆಜ್ಞೆಯಂತೆ ಗುರು ಕೃಷ್ಣಮಾಚಾರ್ಯರ ಜೊತೆಗೆ ಉತ್ತರಕರ್ನಾಟಕದ ಕಡೆ ತೆರಳಿ ಯೋಗ ತರಗತಿಗಳನ್ನು ನಡೆಸಿ ಯೋಗಶಿಕ್ಷಕರಾದರು. ಆಗ ಅವರು ಹದಿನೆಂಟರ ತರುಣ.

1937ರಲ್ಲಿ ಪುಣೆಯ ಸುಪ್ರಸಿದ್ಧ ಸರ್ಜನ್‌ ಡಾ. ವಿ. ಬಿ. ಗೋಖಲೆ ಅವರ ಅಪೇಕ್ಷೆಯಂತೆ ಅಲ್ಲಿದ್ದ ಹಳೆಯ ಡೆಕ್ಕನ್‌ ಜಿಮ್‌ಖಾನಾ ಕ್ಲಬ್‌ನಲ್ಲಿ ಯೋಗಶಿಕ್ಷಕರಾಗಿ ತೆರಳುವ ಅವಕಾಶ ದೊರೆಯಿತು. ಹಾಗೆ ಹೋದವರು ಪುಣೆಯಲ್ಲಿಯೇ ನೆಲೆನಿಂತರು. ಜೀವನದ ಕೊನೆಯವರೆಗೆ ಅದನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡರು. “ಅಯ್ಯಂಗಾರ್‌ ಯೋಗ’ ಎಂಬ ಶೀರ್ಷಿಕೆಯ ಮೂಲಕ ಪುಣೆಗೂ ವಿಶ್ವಮನ್ನಣೆಯ “ಯೋಗ’ ದೊರೆಯುವಂತೆ ಮಾಡಿದರು.

ಸುಪ್ರಸಿದ್ಧ ವಯೊಲಿನ್‌ ವಿದ್ವಾಂಸ ಯಹೂದಿ ಮೆನುಹಿನ್‌ ಅವರು ಅಯ್ಯಂಗಾರರ ಶಿಷ್ಯರಾದ ಬಳಿಕ ಅವರು, “ಅಯ್ಯಂಗಾರ್‌ ಯೋಗ’ವನ್ನು ಪಶ್ಚಿಮದ ರಾಷ್ಟ್ರಗಳಲ್ಲಿ ಜನಪ್ರಿಯಗೊಳಿಸಿದರು. 1954ರಲ್ಲಿ ಮೆನುಹಿನ್‌, ಅಯ್ಯಂಗಾರರನ್ನು ಸ್ವಿಟ್ಜರ್‌ಲೆಂಡ್‌ಗೆ ಕರೆದೊಯ್ದರು. ಯುರೋಪಿನ ದೇಶಗಳಿಗೆ ಹೋದಾಗಲೆಲ್ಲ ಅಲ್ಲಿನ ವರ್ಣತರತಮವೂ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಒಳವಲಸೆ ಕಚೇರಿಯ ಅಧಿಕಾರಿಗಳು ಅವರನ್ನು “ಜಾದೂಗಾರ’ನೆಂದು ಭಾವಿಸಿದ್ದಿತ್ತು. ಲಂಡನ್‌ನಲ್ಲಿ ವಸತಿಗೆ ಹೊಟೇಲ್‌ ದೊರೆಯದೆ ಪರದಾಡುವ ಸ್ಥಿತಿ ಉಂಟಾಗಿತ್ತು. ಆದರೆ, ಬದುಕಿನಲ್ಲಿ ಕಷ್ಟಗಳನ್ನೇ ಉಂಡ ಅಯ್ಯಂಗಾರರಿಗೆ ಇದೇನೂ ದುರ್ಗಮ ಅನ್ನಿಸಲಿಲ್ಲ. ಪಾಶ್ಯಾತ್ಯದೇಶಗಳಲ್ಲಿ ಯೋಗವನ್ನು ಹೇಗೆ ಜನಪ್ರಿಯಗೊಳಿಸಿದರೆಂದರೆ ಮುಂದೆ, ಬೆಲ್ಜಿಯಂನ ರಾಣಿ ಎಲಿಜಬೆತ್‌, ಆರನೆಯ ಪೋಪ್‌ ಪಾಲ್‌ ಅಯ್ಯಂಗಾರರ “ಯೋಗಶಿಷ್ಯ’ರಾದರು!

ಅಯ್ಯಂಗಾರರು ಯೋಗವನ್ನು “ಆಧ್ಯಾತ್ಮಿಕ ಶಿಸ್ತು’ ಎಂದು ಪರಿಭಾವಿಸಿದವರು. ಅವರಿಗೆ ಯೋಗ ಎಂಬುದು “ಆತ್ಮ ಸಾಕ್ಷಾತ್ಕಾರ’ದ ಮಾಧ್ಯಮವಾಗಿತ್ತು. “ಎರಡು ರಾಷ್ಟ್ರಗಳ ನಡುವೆ ಶಾಂತಿ ನೆಲೆಸ‌ಬೇಕಾದರೆ ನಮ್ಮೊಳಗಿರುವ ಆತ್ಮವೆಂಬ ರಾಷ್ಟ್ರದಲ್ಲಿ ಮೊದಲು ಶಾಂತಿ ಮೂಡ‌ಬೇಕಲ್ಲ’ ಎಂದು ಅವರು ಹೇಳುತ್ತಿದ್ದರು. ಯೋಗವೆಂದರೆ ಕೇವಲ ದೈಹಿಕ ವ್ಯಾಯಾಮ ಎಂದು ಭಾವಿಸಿದ್ದ ಪಾಶ್ಚಾತ್ಯರಲ್ಲಿ “ಯೋಗ’ದ ಕುರಿತ ನಿಜವಾದ ಅರಿವನ್ನು ಮೂಡಿಸಿದರು.

Advertisement

ಅಯ್ಯಂಗಾರರ ಶಿಕ್ಷಣ ಕ್ರಮ ಅತ್ಯಂತ ಸರಳವಾಗಿತ್ತು. ಸುಪ್ರಸಿದ್ಧ ಯೋಗಾಚಾರ್ಯರಾದರೂ ಶಿಷ್ಯರಿಗೆ ಹೇಳಿಕೊಡುವಾಗ ಅಸಾಧ್ಯ ಸಹನೆಯಿಂದಿರುತ್ತಿದ್ದರು. ತಾವು ಮಾಡುವ ಆಸನಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಗೆಯೇ ಮಾಡುವಂತೆ ಸೂಚಿಸುತ್ತಿದ್ದರಲ್ಲದೆ, ಆಸನಗಳನ್ನು ಅನುಸರಿಸಲು ಕಷ್ಟವಾಗುವವರಿಗೆ ಸ್ವತಃ ಸಹಾಯ ಮಾಡುತ್ತಿದ್ದರು ಅಥವಾ ಸೂಕ್ತ ಪರಿಕರಗಳನ್ನು ಸಹಕಾರಿಯನ್ನಾಗಿ ಬಳಸುತ್ತಿದ್ದರು.

ಅತ್ಯಂತ ಸರಳ ಮತ್ತು ಘನತೆಯ ಬದುಕನ್ನು ಬದುಕಿದ‌ ಬಿಕೆಎಸ್‌ ಅಯ್ಯಂಗಾರರು ನಿಜವಾದ ಯೋಗಿ ! ಪತ್ನಿ ರಮಾಮಣಿಯವರ ಬಗ್ಗೆ  ಬಿಕೆಎಸ್‌ ಅಯ್ಯಂಗಾರರು ಹೇಳುವುದು ಹೀಗೆ : “”ನನ್ನ ಪಾಲಿನ ಕನ್ನಡಿ ಅವಳು. ಯೋಗಾಭ್ಯಾಸ ಮಾಡುತ್ತಿರುವಾಗಲೂ ತಪ್ಪು ಮಾಡಿದರೆ ನನ್ನನ್ನು ತಿದ್ದುತ್ತಿದ್ದಳು. ನಾವಿಬ್ಬರು ಒಂದೇ ಆತ್ಮ, ಎರಡು ದೇಹಗಳಂತೆ ಬದುಕಿದೆವು” 

ರಮಾಮಣಿಯವರೊಂದಿಗೆ ಸೇರಿಕೊಂಡು ಪುಣೆಯಲ್ಲಿ ಯೋಗಶಾಲೆಯೊಂದನ್ನು ಆರಂಭಿಸುವ ಯೋಜನೆಗೆ ಕೈಹಾಕಿದರು. 1973ರಲ್ಲಿ ರಮಾಮಣಿ ತೀರಿಕೊಂಡರು. ಹಾಗಾಗಿ, ಹೊಸದಾಗಿ ಕಟ್ಟಿದ ಯೋಗ ಕೇಂದ್ರಕ್ಕೆ ರಮಾಮಣಿಯವರ ಹೆಸರನ್ನೇ ಕೊಟ್ಟರು.

2014ರ ಆಗಸ್ಟ್‌ 20ರಂದು ಅಯ್ಯಂಗಾರರು ತಮ್ಮ 96ನೆಯ ವಯಸ್ಸಿನಲ್ಲಿ ತೀರಿಕೊಂಡ ಬಳಿಕ ಅವರ ಮಕ್ಕಳಾದ ಪ್ರಶಾಂತ್‌ ಮತ್ತು ಗೀತಾ ಮುಖ್ಯ ಶಿಕ್ಷಕರಾಗಿ “ರಮಾಮಮಣಿ ಸ್ಮಾರಕ ಯೋಗ ಕೇಂದ್ರ’ ವನ್ನು ನಡೆಸುತ್ತಿದ್ದಾರೆ. ಅಯ್ಯಂಗಾರರ ಮೊಮ್ಮಗಳು ಅಭಿಜಾತಾ ಕೂಡಾ ಅಲ್ಲಿಯೇ ಯೋಗ ಗುರುವಾಗಿದ್ದಾರೆ. 

ಇನ್ನೇನು ಹೆಚ್ಚು ಕಾಲ ಬಾಳಲಾರ ಎಂಬಂತಿದ್ದ ಬಾಲಕ ತೊಂಬತ್ತಾರು ದಶಕಗಳ ತುಂಬು ಜೀವನ ನಡೆಸಿದ್ದು “ಯೋಗ’ವಲ್ಲದೆ ಇನ್ನೇನು? ಬಿಕೆಎಸ್‌ ಅಯ್ಯಂಗಾರ್‌ ಅವರ “ಜನ್ಮಶತಮಾನೋತ್ಸವ’ವನ್ನು ಈ ವರ್ಷವಿಡೀ ಆಚರಿಸಲಾಗುತ್ತಿದೆ.

ಇದು ಅಯ್ಯಂಗಾರ್‌ ಯೋಗ !
ವಿಶ್ವವಿಖ್ಯಾತ ಯೋಗ ಗುರು ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌ (ಬಿಕೆಎಸ್‌ ಅಯ್ಯಂಗಾರ್‌) ಸುಮಾರು 200ರಷ್ಟು ಯೋಗ ಭಂಗಿಗಳನ್ನು, ಸುಮಾರು 14 ಬಗೆಯ ಪ್ರಾಣಾಯಾಮ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಿ, ಪ್ರಯೋಗಾರ್ಹ ಯೋಗವಿದ್ಯೆಗೆ ಹೊಸ ಆಯಾಮ ಕಲ್ಪಿಸಿದವರು. ಯೋಗ-ಪ್ರಾಣಾಯಾಮ ಭಂಗಿಗಳ ಪರಿಣಾಮಕಾರಿ ಬಳಕೆ ಹೇಗೆಂಬುದನ್ನು ತಮ್ಮ ಜಗತ್ತಿನಾದ್ಯಂತದ ಶಿಷ್ಯ ಸಮೂಹಕ್ಕೆ ಸರಳ-ಸುಲಭ ಯೋಗ ತಂತ್ರಗಳ ಮೂಲಕ ತೋರಿಸಿಕೊಟ್ಟವರು. ಪ್ರಾಥಮಿಕ ಹಂತದಿಂದ ಉನ್ನತ ಹಂತದ ಭಂಗಿಗಳವರೆಗೆ ಎಷ್ಟೆಲ್ಲ ಯೋಗಾಭ್ಯಾಸ-ಪ್ರಾಣಾಯಾಮ ಪ್ರಯೋಗ ವೈವಿಧ್ಯಗಳಿವೆಯೋ, ಅವೆಲ್ಲಕ್ಕೂ ಒಂದು ಸುವ್ಯವಸ್ಥಿತ ಪ್ರಯೋಗಾರ್ಹ ರೂಪವನ್ನು ಕೊಟ್ಟವರು ಅವರು. ವಿದ್ಯಾರ್ಥಿಗಳು ಸರಳ ಭಂಗಿಗಳಿಂದ ಅಭ್ಯಾಸದತ್ತ ಹೊರಳಲು; ತನ್ಮೂಲಕ ವ್ಯವಸ್ಥಿತ ರೀತಿಯಲ್ಲಿ ತಮ್ಮ ಮನಸ್ಸು , ಶರೀರ ಹಾಗೂ ಆತ್ಮಗಳ ವಿಕಸನ ಸಾಧಿಸಲು ಇಂಥ ಪರಿಷ್ಕೃತ ಯೋಗ/ಪ್ರಾಣಾಯಾಮ ಭಂಗಿಗಳಿಂದ ಸಾಧ್ಯ.

ಅಯ್ಯಂಗಾರ್‌ ಅವರ ಬಹುದೊಡ್ಡ ಸಾಧನೆ ಇದು- ಯೋಗಶಾಸ್ತ್ರ ನಿಗದಿಪಡಿಸಿರುವ ಹಲವಾರು ಪ್ರಯೋಗಗಳ ಮರು ಸಂಯೋಜನೆಯನ್ನು ಅವರು ಬೇರೆ ಯಾರೂ ಮಾಡಿರದ ರೀತಿಯಲ್ಲಿ ಮಾಡಿದರು. ಕೆಲವೊಂದು ಯೋಗ/ಪ್ರಾಣಾಯಾಮ ತಂತ್ರಗಳ ಗರಿಷ್ಠ ಪರಿಣಾಮ ಲಭಿಸುವಂತಾಗಲು ಅವುಗಳಲ್ಲಿ ಕೆಲವೊಂದು ಅಗತ್ಯದ ಬದಲಾವಣೆಗಳನ್ನು ಮಾಡಿಕೊಂಡರು. ಹಾಗೂ ಅವುಗಳನ್ನು ತಮ್ಮ ಶಿಷ್ಯ ಸಮುದಾಯಕ್ಕೆ ಶ್ರದ್ಧೆಯಿಂದ ಧಾರೆಯೆರೆದರು. ಯೋಗದ ವಿವಿಧ ತಂತ್ರಗಳ ಮರುರೂಪಣೆಯ ವೇಳೆ ನಿಷ್ಕೃಷ್ಟತೆ ಹಾಗೂ ಏಕತ್ರೀಕರಣ (ಅಲೈನ್‌ಮೆಂಟ್‌)ದತ್ತ ಹೆಚ್ಚಿನ ಗಮನ ನೀಡಿದರು. ಹೀಗೆ ಅವರು ಪರಿಷ್ಕರಿಸಿದ ಯೋಗ ಮಾರ್ಗ “ಅಯ್ಯಂಗಾರ್‌ ಯೋಗ’ ಎಂಬ ಹೆಸರಿನಿಂದಲೇ ವಿಶ್ವಾದ್ಯಂತ ಪರಿಚಿತವಾಯಿತು.

ಪತಂಜಲಿ ಪ್ರಣೀತ “ಹಠಯೋಗ’ದಲ್ಲಿ ಹಲವು ಸುಧಾರಣೆಗಳನ್ನು ಅವರು ತಂದರು. ಆಸನ-ಪ್ರಾಣಾಯಾಮ ಭಂಗಿಗಳಲ್ಲಿ ದೀರ್ಘ‌ ಸಮಯ ವಿನಿಯೋಗಿಸುವುದು ಇರುವುದು ಅಯ್ಯಂಗಾರ್‌ ಯೋಗದ ಪ್ರಧಾನ ಲಕ್ಷಣ. ಇದೇ ರೀತಿಯ ಊರೆ/ಆಧಾರ ಪರಿಕರಗಳನ್ನು ಬಳಸಿಕೊಂಡು ಯೋಗಾಸನಗಳನ್ನು ಮಾಡಬಹುದೆಂಬುದನ್ನು ಅವರು ಕಲ್ಪಿಸಿಕೊಟ್ಟರು.

ಯೋಗ ಕಲಿಕೆಯಲ್ಲಿ ಇದು ಅವರು ಮಾಡಿದ ಎದ್ದು ತೋರುವ ಮಾರ್ಪಾಡು. ಈ ರೀತಿಯ ಊರೆ/ಆಧಾರ ಸಹಿತ ಯೋಗ ಕಲಿಕೆ ಕ್ರಮವನ್ನು ರೂಪಿಸಿದ ಉದ್ದೇಶ, ಯೋಗ ಸಾಧಕರಲ್ಲಿ ಶರೀರ ಬಲ, ನಮ್ಯತೆ, ಸ್ಥಿರತೆ, ಜಾಗೃತಿ ಅಥವಾ ಪ್ರಜ್ಞಾವಂತಿಕೆಯನ್ನು  ಉದ್ದೇಪಿಸುವುದೇ ಆಗಿದೆ. ಈ “ಅಯ್ಯಂಗಾರ್‌ ವಿಧಾನ’ ಕೆಲವೊಂದು ನಿರ್ದಿಷ್ಟ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸಾ ಉಪಾಯವಾಗಿಯೂ ನೆರವಾಗುತ್ತದೆ ಎನ್ನುವುದು ಇದರ ಹೆಚ್ಚುಗಾರಿಕೆ.
ಇದು ಭಿನ್ನವೂ ಹೌದು, ಅನನ್ಯವೂ ಹೌದು ಅಯ್ಯಂಗಾರ್‌ ಯೋಗ (ಇಂದು ಕಾಣಸಿಗುತ್ತಿರುವ) ಉಳಿದ ಯೋಗಾಭ್ಯಾಸ ಮಾರ್ಗಗಳಿಗಿಂತ ಭಿನ್ನವೂ ಅನನ್ಯವೂ ಆಗಿದೆ. ಅದು ಮೂರು ಮುಖ್ಯ ಅಂಶಗಳ ಮೇಲೆ ಲಕ್ಷ್ಯವಿರಿಸಿದೆ- ಅವೆಂದರೆ, ಸಹಯೋಗ/ಸರಿ ಹೊಂದಾಣಿಕೆ ಅಥವಾ ಏಕತ್ರೀಕರಣ (ಅಲೈನ್‌ಮೆಂಟ್‌), ಅನುಕ್ರಮಿತ ಅಭ್ಯಾಸ/ಸಾಧನೆ (ಸೀಕ್ವೆನ್ಸ್‌) ಸುಸಂಗತ ಸಮಯ ಪಾಲನೆ (ಟೈಮಿಂಗ್‌).

ಅಲೈನ್‌ಮೆಂಟ್‌ ಅಥವಾ ಸಾಧನ-ಸಹಯೋಗ/ಸರಿ ಹೊಂದಾಣಿಕೆಯೆಂದರೆ, ನಮಗೆ ಬೇಕೆನಿಸುವ ಯೋಗಾಸನ ಭಂಗಿಯನ್ನು ನಮ್ಮ ಶಾರೀರಿಕ ಇತಿಮಿತಿಗಳ ನಡುವೆಯೇ ಕೆಲವೊಂದು ಆಧಾರ ಪರಿಕರಗಳ ನೆರವಿನಿಂದ ಅಭ್ಯಾಸ ಮಾಡುವ ಕ್ರಮ. ಇಂಥ ಪರಿಕರಗಳು ಯಾವುದೇ ಅಪಾಯದ ಸಾಧ್ಯತೆಯಿಂದ ಯೋಗಾಭ್ಯಾಸಿಯನ್ನು ರಕ್ಷಿಸುತ್ತವೆ. ಪರಿಕರಗಳೊಂದಿಗೆ ಹೊಂದಾಣಿಕೆ ಸಾಧಿಸಿ ನಡೆಸುವ ಯೋಗಾಭ್ಯಾಸದ ಭಂಗಿಗಳು, ಅಭ್ಯಾಸಿಯ ದೇಹ, ಮನಸ್ಸು ಹಾಗೂ ಉಸಿರಾಟಗಳ ನಡುವೆ ಸಮತೋಲನ ಸಾಧಿಸಲು ನೆರವಾಗುತ್ತವೆ.

ಸೀಕ್ವೆನ್ಸ್‌ ಅಥವಾ ಕ್ರಮ ಪ್ರಕಾರ ಅಭ್ಯಾಸ ಮಾಡುವುದೆಂದರೆ, ವಿವಿಧ ಯೋಗ-ಪ್ರಾಣಾಯಾಮ ಭಂಗಿಗಳನ್ನು ಸುರಕ್ಷಿತ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವುದು; ಜತೆಗೆ ಭೌತಿಕ ಹಾಗೂ ಭಾವನಾತ್ಮಕ ಶರೀರದ ವಿಕಸನ ಹಾಗೂ ಸಮತೋಲನಕ್ಕೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು.

ಟೈಮಿಂಗ್‌ ಅಥವಾ ಸುಸಂಗತ ಸಮಯ ನಿರ್ವಹಣೆಯ ಕ್ರಮವೆಂದರೆ, ಯೋಗ ಭಂಗಿಗಳನ್ನು ಅಭ್ಯಾಸ ಮಾಡುವಾಗ ಒಂದೊಂದು ಭಂಗಿಗೂ ಹೆಚ್ಚು ಸಮಯ ಮೀಸಲಿಡುವುದು. ಒಂದು ನಿಗದಿತ ಅಭ್ಯಾಸ ಭಂಗಿಯಲ್ಲಿ ಸ್ಥಿರತೆ/ಪರಿಣತಿ ಸಾಧಿಸಿದ ಬಳಿಕ, ಆ ಭಂಗಿಯಲ್ಲಿ ಇನ್ನೂ ಆಳವಾದ ಸಾಧ್ಯತೆಗಳನ್ನು ಕರಗತಗೊಳಿಸಿಕೊಳ್ಳಲು ಸಾಧ್ಯ. ಇದರಿಂದ ದೇಹ ಹಾಗೂ ಮನಸ್ಸುಗಳ ನಡುವೆ ಇನ್ನಷ್ಟು ಬಲ, ನಮನೀಯತೆ, ಸಂವೇದನಾಶೀಲತೆ ಹಾಗೂ ಪ್ರಜ್ಞಾವಂತಿಕೆಯನ್ನು ಸಾಧಿಸಲು ಸುಲಭವಾಗುತ್ತದೆ.

ಆಧಾರ ಪರಿಕರದ ಸಹಿತ ಯೋಗಾಭ್ಯಾಸ
ಅಯ್ಯಂಗಾರ್‌ ಯೋಗದ ವೈಶಿಷ್ಟé ನೋಡಿ- ಇಲ್ಲಿ ನೀವು ನಿಮ್ಮ ದೇಹವನ್ನು ಬಲವಂತವಾಗಿ ಬಾಗಿಸಿ ನಿಮ್ಮ ಕಾಲಿನ ಅಂಗುಷ್ಟವನ್ನು ಮುಟ್ಟುವಂಥ ಬಲವಂತದ ಭಂಗಿಯನ್ನು ಈ ಯೋಗಕ್ರಮದಲ್ಲಿ ಕಾಣಲಾರಿರಿ. ಈ ರೀತಿ ದೇಹವನ್ನು ಬಲವಂತವಾಗಿ ಬಾಗಿಸಿ ಅಂಗುಷ್ಟ ಮುಟ್ಟಲು ಪ್ರಯತ್ನಿಸಿದರೆ, ಇದರ ಅಡ್ಡ ಪರಿಣಾಮವೂ ನಿಮ್ಮ ಅನುಭವಕ್ಕೆ ಬಂದೀತು. ಅಯ್ಯಂಗಾರ್‌ ಯೋಗಾಭ್ಯಾಸ ಕ್ರಮ, ದೇಹವನ್ನು ನಿಧಾನವಾಗಿ, ಮೆದುವಾಗಿ, ಸುಮಾರು ಒಂದು ನಿಮಿಷದಷ್ಟು ಅವಧಿಯಲ್ಲಿ ಬಾಗಿಸಿ ಆ ಭಂಗಿಯಲ್ಲಿ ನಿಲ್ಲುವುದನ್ನು ನಿಮಗೆ ಕಲಿಸುತ್ತದೆ. ಇಲ್ಲಿ ಈ ರೀತಿ ಅಭ್ಯಾಸ ಮಾಡಲು ನಿಮಗೆ ಅಗತ್ಯವಾದ ನೆರವಿನ ಊರೆ/ಪರಿಕರವೂ ಉಂಟು. ಇದು ಕೇವಲ ಇದೀಗ ಕಲಿಯಹೊರಟವರಿಗಷ್ಟೆ ಅಲ್ಲ. “ಮುಂದುವರಿದ’ ಅಭ್ಯಾಸಿಗಳೂ ಪರಿಕರ ಬಳಕೆಯ ಅವಕಾಶವಿದೆ. ಯಾವುದೇ ರೀತಿಯ ನೋವು ಅಥವಾ ಗಾಯ ಉಂಟಾಗದಂತೆ ನೆರವಾಗುವ ಆಧಾರ ಪರಿಕರದ ಬಳಕೆಯ ವ್ಯವಸ್ಥೆ ಅಯ್ಯಂಗಾರ್‌ ಯೋಗ ವಿಧಾನದಲ್ಲಿದೆ.

ಸ್ನಾಯುಗಳ ಸುಸ್ಥಿತಿಗಾಗಿ
ನಿಮ್ಮ ಸ್ನಾಯು (ಮಾಂಸಖಂಡ)ಗಳನ್ನು ನಿಧಾನವಾಗಿ ಚಾಚುವ ಕ್ರಮವನ್ನು ಈ ಯೋಗಾಭ್ಯಾಸ ವಿಧಾನದಲ್ಲಿ ಕಲಿಸಿಕೊಡಲಾಗುತ್ತದೆ. ಜತೆಗೆ, ಪ್ರತಿಯೊಂದು ಯೋಗಭಂಗಿಯಲ್ಲಿ ಕೆಲವು ಕಾಲ ಇರುವಂತೆ ಮಾಡುವ ತಾಂತ್ರಿಕತೆಯೂ ಇಲ್ಲಿದೆ. ಇದು ನಿಮ್ಮ ದೇಹಬಲವನ್ನು ವರ್ಧಿಸಿಕೊಳ್ಳಲು ಹಾಗೂ ದೇಹವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ನೆರವಾಗುವ ಯೋಗತಂತ್ರ.

ನಿಗದಿತ ಸ್ನಾಯುವೊಂದರ ಮೇಲೆ ಲಕ್ಷ್ಯವಿರಿಸಿ ಅಭ್ಯಾಸ ಮಾಡುವಾಗ, ಕೇವಲ ಅದೊಂದರ ಮೇಲಷ್ಟೆ ಗಮನ ಕೇಂದ್ರೀಕರಿಸದೆ, ಲಕ್ಷಿತ ಸ್ನಾಯುವು ದೇಹದ ಇತರ ಭಾಗಗಳೊಂದಿಗೆ ಹೇಗೆ ಸಂಪರ್ಕ ಸಾಧಿಸಿದೆಯೆಂದು ಅರ್ಥಮಾಡಿಕೊಳ್ಳುವ ಚಿಂತನಾ ಕ್ರಮವನ್ನು ಅಯ್ಯಂಗಾರ್‌ ಯೋಗ ಕಲಿಸಿಕೊಡುತ್ತದೆ. ಇದರ ಪರಿಣಾಮ ಆ ಸ್ನಾಯುವಿನ ಮೇಲಷ್ಟೆ ಅಲ್ಲ, ಇಡೀ ದೇಹದ ಮೇಲೆ ಆಗುವುದರಿಂದ, ಇಡೀ ದೇಹವು ಸುಸ್ಥಿತಿಯಲ್ಲಿರುವ ಅನುಭವ ಯೋಗಾಭ್ಯಾಸಿಗೆ ಲಭಿಸುತ್ತದೆ.

ಮಾನಸಿಕ ಶಾಂತಿಗಾಗಿ
ನಾವು ಒಂದು ಆಸನವನ್ನೋ, ಭಂಗಿಯನ್ನೋ ಸಾಧಿಸಿದಾಗ, ಇಡೀ ದೇಹದ ವಿವಿಧ ಅಂಗಗಳ ಹೊಂದಾಣಿಕೆಯ ಬಗ್ಗೆ ಗಮನ ಕೇಂದ್ರೀಕರಿಸುವುದನ್ನು ಈ ಯೋಗ ಪದ್ಧತಿಯಲ್ಲಿ ಕಲಿಸಿಕೊಡುತ್ತಾರೆ. ಇಂಥ ಆಸನ/ಭಂಗಿಯಲ್ಲಿರುವಾಗ ಇತರ ಯಾವತ್ತೂ ಚಿಂತೆ-ಚಿಂತನೆಗಳು ನಿಮ್ಮ ಮಿದುಳನ್ನು ಪ್ರವೇಶಿಸದಿರುವಂತೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಲು ಕೂಡ ಕಲಿಸಲಾಗುತ್ತದೆ. ಇದೊಂದು ರೀತಿಯ ಧ್ಯಾನದಂತೆ. ಈ ರೀತಿಯ ಚಿಂತನೆ-ಧ್ಯಾನದ ಸಾಮರ್ಥ್ಯ ಹೆಚ್ಚಿದಷ್ಟೂ ನಮ್ಮ ಮನಸ್ಸು ಪ್ರಶಾಂತ ಸ್ಥಿತಿಯನ್ನು ಅನುಭವಿಸುತ್ತದೆ; ಈ ಪ್ರಶಾಂತಿಯ ಭಾವ ಅಭ್ಯಾಸದ ವೇಳೆಯಲ್ಲಷ್ಟೆ ಅಲ್ಲ, ಆಮೇಲೂ ಮುಂದುವರಿಯುತ್ತದೆ.

ನೋವುನಿವಾರಕ ಅಭ್ಯಾಸ ತಂತ್ರ
ಅಯ್ಯಂಗಾರ್‌ ಯೋಗವಿಧಾನ ಬೆನ್ನು ಮತ್ತು ಕತ್ತಿನ ನೋವುಗಳನ್ನು ಪರಿಹರಿಸುವ ಗುಣವನ್ನು ಹೊಂದಿದೆಯೆಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಇಡೀ ದೇಹದ ಅಂಗಾಂಗಗಳ ಹೊಂದಾಣಿಕೆಯ ಮೇಲೆ ಅಭ್ಯಾಸಿಯ ಗಮನ ಕೇಂದ್ರೀಕೃತವಾಗುವುದನ್ನು ಈ ಯೋಗಕ್ರಮ ಕಲಿಸಿಕೊಡುವುದರಿಂದ ಬೆನ್ನು ಮತ್ತು ಕತ್ತಿನ ನೋವು ಉಂಟಾಗಲು ಕಾರಣವಾಗುವ ಜೋಲು ನಡಿಗೆ, ಬಾಗು ನಡಿಗೆ ಹಾಗೂ ಸ್ನಾಯು ದೌರ್ಬಲ್ಯಗಳಂಥ ಸಮಸ್ಯೆಗಳು ಬಹುತೇಕ ನಿವಾರಣೆಯಾಗುತ್ತವೆ. ಬೆನ್ನಿನ ಸ್ನಾಯುಗಳನ್ನು ಹಿಗ್ಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಅಭ್ಯಾಸ ತಂತ್ರವೂ ಅಯ್ಯಂಗಾರ್‌ ಪ್ರಣೀತ ಯೋಗಕ್ರಮದಲ್ಲಿರುವುದರಿಂದ ಬೆನ್ನುನೋವಿನಿಂದ ಬರುವ ಒದ್ದಾಟ-ನರಳಾಟಗಳಿಗೆ ಸುಲಭದಲ್ಲಿ ವಿದಾಯ ಹೇಳಬಹುದಾಗಿದೆ.

ಅಂಗಾಂಗಗಳ ಹೊಂದಾಣಿಕೆ
ದೇಹದ ಎಲ್ಲ ಅಂಗಾಂಗಗಳನ್ನು ಸಮಗ್ರವಾಗಿ ನೇರ್ಪುಗೊಳಿಸುವ ಕಲೆಯನ್ನು ಅಯ್ಯಂಗಾರ್‌ ಯೋಗ ಒಳಗೊಂಡಿರುವುದರಿಂದ ಇದನ್ನು ಅಭ್ಯಾಸ ಮಾಡಿದರೆ ನಾವು ನಿಲ್ಲುವ, ಕುಳಿತುಕೊಳ್ಳುವ, ನಡೆಯುವ ಕೆಲಸಗಳಿಗೆ ಬಲವೀಯುವ ಕಾಲುಗಳ, ಬೆನ್ನಿನ, ಎದೆಯ ಸ್ನಾಯುಗಳ ಸಾಮರ್ಥ್ಯ ಹೆಚ್ಚುತ್ತದೆ. ದೇಹದ ಅಂಗಗಳ ಹೊಂದಾಣಿಕೆಯ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಹಕರಿಸುವ ಆಸನ-ಭಂಗಿಗಳ ನೆರವಿನಿಂದ, ಇದುವರೆಗೆ ಅಲಕ್ಷ್ಯಕ್ಕೀಡಾಗಿದ್ದ ಕಿರುಸ್ನಾಯುಗಳು ಕೂಡ ಗಟ್ಟಿಗೊಳ್ಳುತ್ತವೆ. ಇದರ ಪರಿಣಾಮ ಅದ್ಭುತ. ನೀವು ನೆಟ್ಟಗೆ ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ಸಾಧ್ಯವಾಗುತ್ತದೆ. ಈ ರೀತಿಯ ನೆಟ್ಟಗಿನ ಭಂಗಿ ನಿಮಗೆ ಹೆಚ್ಚಿನ ಬಲವನ್ನೂ ತಂದುಕೊಡುತ್ತದೆ; ನಿಮ್ಮ ದೇಹದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋವುಗಳು ಹೇಳಹೆಸರಿಲ್ಲದಂತೆ ಮರೆಯಾಗುತ್ತವೆ. ನಿಮ್ಮ ಆತ್ಮವಿಶ್ವಾಸವೂ ವೃದ್ಧಿಸುತ್ತದೆ.

ರೋಗಗಳಿಂದ ರಕ್ಷಣೆ
ಶರೀರದ ಸಾಮಾನ್ಯ, ಸಹಜ ಚಟುವಟಿಕೆಗಳಿಗೆ ಭಂಗ ಬಂದಾಗ ರೋಗಗಳು ತಲೆಯೆತ್ತುತ್ತವೆ. ಅಯ್ಯಂಗಾರ್‌ ಯೋಗ ಪದ್ಧತಿ ರಕ್ತ ಪರಿಚಲನೆ, ದೇಹದ ಅಂಗಾಂಗಗಳ ಸಹಜ ಸ್ರಾವಗಳ ವ್ಯವಸ್ಥೆ, ನರನಾಡಿಗಳ ವ್ಯವಸ್ಥೆ ಹಾಗೂ ಜೀರ್ಣಕ್ರಿಯೆ ಮುಂತಾದ ಯಾವತ್ತೂ ಕೆಲಸಕಾರ್ಯಗಳ ಸಾಮರ್ಥ್ಯದ ಸುಧಾರಣೆಗೆ ನೆರವಾಗುತ್ತದೆ. ದೇಹದೊಳಗಿನ ವಿವಿಧ ವ್ಯವಸ್ಥೆಗಳು ತಮ್ಮ ತಮ್ಮ ಕೆಲಸಗಳನ್ನು  ಸಾಂಗವಾಗಿ ನಿರ್ವಹಿಸಿದಾಗ ಅಂಗಾಂಗಗಳು ಪುಷ್ಟಿಗೊಳ್ಳುತ್ತವೆ, ದೇಹದೊಳ ಗಿನ ವಿಷ (ನಂಜು) ಪದಾರ್ಥಗಳು ವಿಸರ್ಜನೆಗೊಳ್ಳುತ್ತವೆ ಹಾಗೂ ಕೆಲವೊಂದು ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗೆ ಈ ಯೋಗಪದ್ಧತಿ ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸಿ ಸುಸ್ಥಿತಿಯಲ್ಲಿರಿಸುತ್ತದೆ.

( ಮಾಹಿತಿ ಕೃಪೆ : ರಶ್ಮೀ ಪಾಲಿVàವಾಲಾ ಬರೆದ ದಿ ಬಯೋಗ್ರಫಿ ಆಫ್ ಬಿಕೆಎಸ್‌ ಅಯ್ಯಂಗಾರ್‌: ಎ ಲೈಫ್ ಆಫ್ ಲೈಟ್‌)

ಇಂಗ್ಲಿಶ್‌ ಮೂಲ:ವನಿತಾ ಪೈ

Advertisement

Udayavani is now on Telegram. Click here to join our channel and stay updated with the latest news.

Next