Advertisement

ಯೋಗಾಚಾರ್ಯರಿಗೆ ನೂರು:ಮರೆಯಲಿಲ್ಲ ಹುಟ್ಟೂರು

08:00 AM Dec 15, 2018 | |

ಬಹುಮಂದಿಗೆ ಗೊತ್ತಿಲ್ಲ; ಯೋಗಾಚಾರ್ಯ ಎಂದೇ ವಿಶ್ವಾದ್ಯಂತ ಹೆಸರಾಗಿದ್ದ ಬಿಕೆಎಸ್‌ ಅಯ್ಯಂಗಾರ್‌, ಕೋಲಾರ ಜಿಲ್ಲೆಯ ಬೆಳ್ಳೂರಿನವರು. ಹುಟ್ಟೂರಿನ ಕುರಿತು ಅಪಾರ ಮೋಹ ಹೊಂದಿದ್ದ ಅವರು, ಇಲ್ಲಿ ಶಾಲೆ, ಯೋಗಾಭ್ಯಾಸ ಕೇಂದ್ರ ಮತ್ತು ಆಸ್ಪತ್ರೆ ಆರಂಭಿಸಿದರು.

Advertisement

 “ಯೋಗ’ ಅಂದರೆ ತಕ್ಷಣವೇ ನೆನಪಾಗುವ ಹೆಸರು  ಬಿ.ಕೆ.ಎಸ್‌. ಅಯ್ಯಂಗಾರ್‌ ಅವರದು. ಜಗತ್ತಿಗೇ ಯೋಗ ಪಾಠ ಮಾಡಿ  ವಿಶ್ವಖ್ಯಾತ ರಾದ ನಂತರವೂ ಅವರು  ತಮ್ಮ ಹುಟ್ಟೂರನ್ನು ಮರೆತಿರಲಿಲ್ಲ.  ಯೋಗವೇ ಬದುಕು ಎನ್ನುವಂತೆ ಜೀವಿಸಿದ್ದ ಬಿ.ಕೆ.ಎಸ್‌.ಅಯ್ಯಂಗಾರ್‌, ತಮ್ಮ ಹದಿನೆಂಟನೇ ವಯಸ್ಸಿನಿಂದಲೇ ಯೋಗದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವ ಕಾಯಕ ಆರಂಭಿಸಿ, ಜಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಯೋಗವನ್ನು ಧಾರೆ ಎರೆದಿದ್ದಾರೆ. ಇಂದಿಗೂ ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳಲ್ಲಿ ಬಿ.ಕೆ.ಎಸ್‌.ಅಯ್ಯಂಗಾರ್‌ ಶಿಷ್ಯರು 300 ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದಾರೆ.  ಅಂದಹಾಗೆ, ಅಯ್ಯಂಗಾರ್‌ ಅವರು ಹುಟ್ಟೂರು ಹುಟ್ಟಿದ ಊರು  ಕೋಲಾರ ಜಿಲ್ಲೆಯ ಬೆಳ್ಳೂರು. 

ಶಾಲೆ ಕೊಡುಗೆ
ಪುಣೆಯನ್ನು ತಮ್ಮ ಕಾರ್ಯಕ್ಷೇತ್ರ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡರೂ ಹುಟ್ಟೂರಿನ ಮಮಕಾರ ಅವರನ್ನು ಬಿಡಲಿಲ್ಲ. ತಾವು ಜನಿಸಿದ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂದು .ಅವರು ಆಸೆಪಟ್ಟರು. ಅಂತೆಯೇ ಹುಟ್ಟರೂಇನಲ್ಲಿ,  ಕೆ.ಎಸ್‌.ಅಯ್ಯಂಗಾರ್‌ ತಮ್ಮ ಗ್ರಾಮಕ್ಕೆ ಹೊಸ ಕಟ್ಟಡ ನಿರ್ಮಿಸಿ ಸುಸಜ್ಜಿತ ಪ್ರಾಥಮಿಕ ಶಾಲೆಯೊಂದನ್ನು 1967 ರಲ್ಲಿಯೇ ನಿರ್ಮಾಣ ಮಾಡಿದರು. 1970 ರವರೆವಿಗೂ ಶಾಲೆಯನ್ನು ತಾವೇ ನಡೆಸಿ, ನಂತರ ಅದನ್ನು ಸರಕಾರಕ್ಕೊಪ್ಪಿಸಿದರು. ಇಂದಿಗೂ ಆ ಶಾಲೆ ಅವರ ತಂದೆ-ತಾಯಿ ಕೃಷ್ಣಮಾಚಾರ್‌-ಶೇಷಮ್ಮ ಹೆಸರಿನಲ್ಲಿಯೇ ನಡೆಯುತ್ತಿದೆ.

ಟ್ರಸ್ಟ್‌ ಸ್ಥಾಪನೆ
2002 ರಲ್ಲಿ ತಂದೆ-ತಾಯಿಯ ಹೆಸರಿನಲ್ಲಿ  ಟ್ರಸ್ಟ್‌ ಸ್ಥಾಪಿಸಿದರು. ಆ ಮೂಲಕ ಅನೇಕ ಸೇವಾ ಕಾರ್ಯಗಳನ್ನು ನಡೆಸುವುದು ಬಿ.ಕೆ.ಎಸ್‌.ಅಯ್ಯಂಗಾರರ ಉದ್ದೇಶವಾಗಿತ್ತು. ಪ್ರತಿ ವರ್ಷವೂ ಒಂದೆರೆಡು ಬಾರಿ ಹುಟ್ಟೂರಿಗೆ ಬರುತ್ತಿದ್ದರು. ಗ್ರಾಮಸ್ಥರ ಬೇಡಿಕೆಗೆ ಅನುಗುಣಮವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದರು.

Advertisement

ಶಾಲಾ ಮಕ್ಕಳಿಗೆ ಯೋಗಾಭ್ಯಾಸಕ್ಕೆ ಹಾಗೂ ಗ್ರಾಮಸ್ಥರು ಶುಭ ಕಾರ್ಯಗಳನ್ನು ನಡೆಸಲು ಉಪಯೋಗವಾಗುವಂತೆ ಶಾಲೆಯ ಮೇಲ್ಭಾಗದಲ್ಲಿ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿದರು.  ಗ್ರಾಮದ ಜನತೆ ಶುದ್ಧ ನೀರನ್ನು ಕುಡಿಯಲಿ ಎನ್ನುವ ಉದ್ದೇಶದಿಂದ 50 ಸಾವಿರ ಗ್ಯಾಲನ್‌ ನೀರು ಶೇಖರಿಸುವ ಮೇಲ್ಮಟ್ಟದ ನೀರಿನ ಟ್ಯಾಂಕ್‌ ಅನ್ನು ಕೊಡುಗೆಯಾಗಿ ನೀಡಿದರು.

ರಮಾಮಣಿ ನಗರ
ಟ್ರಸ್ಟ್‌ನ ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸಲು ಹಾಗೂ ತಾವು ಗ್ರಾಮಕ್ಕೆ ಬಂದಾಗ ನೆಲೆಸುವ ಸಲುವಾಗಿ ಬೆಳ್ಳೂರಿನ ಪಕ್ಕದಲ್ಲಿಯೇ 25 ಎಕರೆ ಜಮೀನಿನಲ್ಲಿ ತಮ್ಮ ಅಗಲಿದ ಪತ್ನಿಯ ಹೆಸರಿನ ರಮಾಮಣಿ ನಗರವನ್ನು ಶುರು ಮಾಡಿದರು.  ಈಗ ರಮಾಮಣಿ ನಗರದಲ್ಲಿ ಯೋಗಾಭ್ಯಾಸ ಕೇಂದ್ರದ ಜೊತೆಗೆ, ಸುಸಜ್ಜಿತ ಆಸ್ಪತ್ರೆ, ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಬೆಳ್ಳೂರು ಹಾಗೂ ಸುತ್ತಮುತ್ತಲಿನ 20 ರಿಂದ 30 ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಲಾ-ಕಾಲೇಜು ಆಸ್ಪತ್ರೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಳ್ಳೂರಿನ ಸುತ್ತಮುತ್ತಲೂ ಆರಂಭವಾಗಿರುವ ಕೈಗಾರಿಕೆಗಳ ಕಾರ್ಮಿಕರ ಕುಟುಂಬಗಳಿಗೂ ರಮಾಮಣಿ ನಗರದ ಆಸ್ಪತ್ರೆಯೇ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದು.

ನಿತ್ಯವೂ ಯೋಗ
ಬೆಳ್ಳೂರು ಶಾಲಾ ಕಾಲೇಜುಗಳಲ್ಲಿ ಪ್ರತಿ ನಿತ್ಯವೂ ಯೋಗಾಭ್ಯಾಸ ಕಡ್ಡಾಯವಾಗಿದೆ. ನಿತ್ಯವೂ ಪ್ರಾರ್ಥನೆಯ ನಂತರ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಿಯೇ ವಿದ್ಯಾರ್ಥಿಗಳು ತರಗತಿಗಳನ್ನು ಪ್ರವೇಶಿಸುತ್ತಾರೆ. ಇದಲ್ಲದೆ ಪ್ರತಿ ಮಂಗಳವಾರ ಮತ್ತು  ಗುರುವಾರದಂದು ವಿದ್ಯಾರ್ಥಿಗಳಿಗೆ ವಿಶೇಷ ಯೋಗಾಭ್ಯಾಸದ ತರಗತಿಗಳನ್ನು ಪರಿಣಿತರು ತೆಗೆದುಕೊಳ್ಳುತ್ತಾರೆ. ಇದರಿಂದ  ರಮಾಮಣಿ ನಗರದ ಶಾಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಅರಿತವರೇ ಆಗಿದ್ದಾರೆ.  ಹೀಗೆ ಯೋಗ ಕಲಿತ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸುತ್ತಮುತ್ತಲಿನ 30 ಗ್ರಾಮಗಳಲ್ಲಿ ಯೋಗಾಭ್ಯಾಸ ತರಗತಿಗಳನ್ನು ಬಿ.ಕೆ.ಎಸ್‌.ಅಯ್ಯಂಗಾರ್‌ ಶತಮಾನೋತ್ಸವ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದೆ. 

ಕೌಶಲ್ಯ ತರಬೇತಿ ಕೇಂದ್ರ
ಕೇವಲ ವಿದ್ಯಾಭ್ಯಾಸ ಕಲಿಸುವುದರ ಜೊತೆಗೆ ಬೆಳ್ಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಓದು ಬಿಟ್ಟ ಯುವಕ ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಸ್ಟ್‌ ಬಾಷ್‌ ಕಂಪನಿಯೊಂದಿಗೆ ಕೌಶಲ್ಯ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಈಗಾಗಲೇ ಐದು ತಂಡಗಳಲ್ಲಿ ನೂರಾರು ಮಂದಿ ತರಬೇತಿ ಪಡೆದು ಉದ್ಯೋಗವಕಾಶವನ್ನು ಪಡೆದುಕೊಂಡಿದ್ದಾರೆ.  ಇವರ ಶತಮಾನೋತ್ಸವದ ನೆಪದಲ್ಲಿ  ಬಿ.ಕೆ.ಎಸ್‌.ಅಯ್ಯಂಗಾರ್‌ರ ಹುಟ್ಟುರಾದ ಬೆಳ್ಳೂರಿನ ರಮಾಮಣಿ ನಗರದಲ್ಲಿ ಡಿ.17 ರಿಂದ ಡಿ.19 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಮಾಮಣಿ ನಗರದ ಯೋಗ ಮಂದಿರದಲ್ಲಿ ಬಿ.ಕೆ.ಎಸ್‌.ಅಯ್ಯಂಗಾರ್‌ ದಂಪತಿಯ ಕಂಚಿನ ಪುತ್ಥಳಿಗಳ ಅನಾವರಣ, ಅಂಚೆ ಇಲಾಖೆಯಿಂದ ಬಿ.ಕೆ.ಎಸ್‌.ಅಯ್ಯಂಗಾರ್‌ ಶತಮಾನೋತ್ಸವ ಸಂಭ್ರಮದ ಅಂಚೆ ಚೀಟಿಗಳ ಬಿಡುಗಡೆಯಾಗಲಿದೆ. 

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next