ಗಂಗಾವತಿ: ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಜಿ.ರಾಮುಲು ನಿವಾಸಕ್ಕೆ ವಿಧಾನಪರಿಷತ್ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ ಏ. 9 ರಂದು ಭೇಟಿ ನೀಡಲಿದ್ದು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗುವಂತೆ ಎಚ್.ಜಿ.ರಾಮುಲು ಅವರನ್ನು ಮನವೊಲಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ತೊರೆದವರನ್ನು ಮತ್ತು ನಿಷ್ಕ್ರಿಯರಾದವರನ್ನು ಪುನಃ ಸಂಪರ್ಕಿಸುತ್ತಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೆಲ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಎಚ್.ಜಿ.ರಾಮುಲು ಹಾಗೂ ಅವರ ಪುತ್ರ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇವರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆ ಮಾಡಲು ಯೋಜಿಸಿದ್ದು ಈಡಿಗ ಸಮುದಾಯದ ಪ್ರಬಲ ನಾಯಕ ಎಚ್.ಜಿ.ರಾಮುಲು ಅವರ ಮನವೊಲಿಸಲು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹಾಗೂ ಅವರ ಅಪ್ತ ಕರಿಯಣ್ಣ ಸಂಗಟಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಕಾಂಗ್ರೆಸ್ ಪರವಾದ ಸಿದ್ದಾಂತದಲ್ಲಿ ನಂಬಿಕೆಯುಳ್ಳವರಾಗಿದ್ದು ಕಳೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕಂಪ್ಲಿ ಸೇರಿ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಹಿರಂಗವಾಗಿ ಪ್ರಚಾರ ನಡೆಸಿದ್ದರು. ಬೆಂಗಳೂರಿನ ಎಚ್.ಜಿ.ರಾಮುಲು ನಿವಾಸಕ್ಕೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ನೀಡಿ ಆರೋಗ್ಯ ವಿಚಾರಿಸುವ ನೆಪದಲ್ಲಿ ಕಾಂಗ್ರೆಸ್ ನಲ್ಲಿ ಸಕ್ರೀಯವಾಗುವಂತೆ ಎಚ್.ಜಿ.ರಾಮುಲು ಹಾಗೂ ಎಚ್.ಆರ್.ಶ್ರೀನಾಥ ಅವರಿಗೆ ಮನವಿ ಮಾಡಿದ್ದರು. ಇದೀಗ ಬಿ.ಕೆ,ಹರಿಪ್ರಸಾದ ಭೇಟಿಯಿಂದ ರಾಜಕೀಯ ಗರಿಗೆದರಿದ್ದು ಗಂಗಾವತಿ ಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಇದನ್ನೂ ಓದಿ : ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ
ನಮ್ಮ ತಂದೆ ಎಚ್.ಜಿ.ರಾಮುಲು ಇಂದಿರಾ ಗಾಂಧಿ , ರಾಜೀವಗಾಂಧಿ ಸೇರಿ ಪಕ್ಷದ ಹಿರಿಯ ನಾಯಕರೊಂದಿಗೆ ಇದ್ದವರು ಅವರನ್ನು ಭೇಟಿ ಮಾಡಲು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಆಗಮಿಸುತ್ತಿದ್ದಾರೆ. ನಾನು ಸಹ ಎರಡು ಭಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಕಾಡಾ ಅಧ್ಯಕ್ಷನಾಗಿ ಮತ್ತು ಎಂಎಲ್ಸಿಯಾಗಿ ಸೇವೆ ಮಾಡಿದ್ದು ಸರ್ವ ಜನರನ್ನು ತೆಗೆದುಕೊಂಡುವ ಹೋಗುವ ಕಾಂಗ್ರೆಸ್ ಸಿದ್ದಾಂತ ನಮ್ಮ ಮನೆತನದ್ದು ಕೆಲ ಕಾರಣದಿಂದ ಹೊರಗೆ ಹೋಗಿದ್ದು ನಮ್ಮ ತಂದೆಯವರ ನಿರ್ಧಾರ ಅಂತಿಮವಾಗಿದೆ.
-ಎಚ್.ಆರ್.ಶ್ರೀನಾಥ ಮಾಜಿ ಎಂಎಲ್ಸಿ