Advertisement

ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸೂರ್ಯಚಂದ್ರರಷ್ಟೇ ಸತ್ಯ

03:45 AM Mar 28, 2017 | Team Udayavani |

ಚಾಮರಾಜನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಾಲ್ಕು ವರ್ಷ ಕಳೆದರೂ ಇನ್ನೂ ಟೇಕಾಪ್‌ ಆಗಿಲ್ಲ. ಈ ಸರ್ಕಾರದ ಕೌಂಟ್‌ಡೌನ್‌ ಶುರುವಾಗಿದೆ. ನಂಜನಗೂಡು-ಗುಂಡ್ಲುಪೇಟೆ ಕ್ಷೇತ್ರಗಳನ್ನು ಬಿಜೆಪಿ ಕಸಿದುಕೊಳ್ಳುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಮಾಜಿ ಸಚಿವ, ಸಂಸದ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಎರಡೂ ಕ್ಷೇತ್ರಗಳ ಬಿಜೆಪಿ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯಕ್ಕೆ ಹಾಗೂ ಕಾಂಗ್ರೆಸ್‌ ಸರ್ಕಾರದ ಆಡಳಿತ ಕೊನೆಯಾಗಲಿಕ್ಕೆ ಮುನ್ನುಡಿಯಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರದರ್ಶಿತ್ವ ಇಲ್ಲ. ಜನರ ಸಂಕಷ್ಟಕ್ಕೆ ಅಧಿಕಾರಿ ವರ್ಗ ಹೇಗೆ ಸ್ಪಂದಿಸಬೇಕು. ಸರ್ಕಾರ ಹೇಗೆ ನಡೆಸಬೇಕು ಎಂಬ ಕನಿಷ್ಠ ಚಿಂತನೆಯೂ ಸಿದ್ದರಾಮಯ್ಯನರಿಗೆ ಇಲ್ಲ ಎಂದು ಟೀಕಿಸಿದರು.

ಹಲವು ಇಲಾಖೆಗಳಿಗೆ ಬಿಡುಗಡೆಯಾಗಿರುವ ಹಣ ಇನ್ನೂ ಬಳಕೆಯಾಗಿಲ್ಲ. ಸಿದ್ದರಾಮಯ್ಯ ಭಾಗ್ಯಗಳನ್ನು ಘೋಷಣೆ ಮಾಡುತ್ತಿದ್ದಾರೆಯೇ ವಿನಃ ಅದು ಜನರಿಗೆ ತಲುಪಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗಿಲ್ಲ. ಈ ಸರ್ಕಾರ ಎಲ್ಲ ರಂಗಗಳಲ್ಲೂ ದಯನೀಯ ವೈಫ‌ಲ್ಯ ಅನುಭವಿಸಿದೆ ಎಂದು ಆರೋಪಿಸಿದರು.

ಎಲ್ಲವನ್ನೂ ಮೋದಿ ಮಾಡಿದರೆ ಸಿದ್ದು ಯಾಕೇ ಬೇಕು:
ಸಿದ್ದರಾಮಯ್ಯನವರು ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಕೈತೋರಿಸಿ, ವೃಥಾ ಕಾಲಹರಣ ಮಾಡುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಮಾಡಲಿಲ್ಲ. ಅದಕ್ಕೂ ಪ್ರಧಾನಿ ಮೋದಿ ಕಾರಣ ಎನ್ನುತ್ತಾರೆ. ಬರ ಪರಿಹಾರ ನೀಡಲಾಗಿಲ್ಲ. ಅದಕ್ಕೂ ಕೇಂದ್ರ ಕಾರಣ ಎನ್ನುತ್ತಾರೆ. ಮೊನ್ನೆ ನಡೆದ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆಗೂ ಕೇಂದ್ರ ಕಾರಣ. ಕೇಂದ್ರ ಅನುದಾನ ಕೊಟ್ಟಿಲ್ಲ ಹಾಗಾಗಿ ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚು ಮಾಡೋಕೆ ಸಾಧ್ಯವಿಲ್ಲ ಎಂದು ಉಡಾಫೆಯಿಂದ ಮಾತನಾಡುತ್ತಾರೆ. ಇಂತ ಉಡಾಫೆಯ ಹೊಣೆಗೇಡಿತರನದ ಸರ್ಕಾರ ನಮಗೆ ಬೇಕಾ? ಎಲ್ಲವನ್ನೂ ನರೇಂದ್ರ ಮೋದಿಯವರೇ ಬಂದು ಮಾಡುವುದಾದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಯಾಕಿರಬೇಕು? ಜನರು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಟೀಕೆ ಮಾಡಿದರು.

Advertisement

ನಂಜನಗೂಡು, ಗುಂಡ್ಲುಪೇಟೆ ಬಿಜೆಪಿ ಗೆಲುವು ಶತಸಿದ್ಧ:
ಸಿದ್ದರಾಮಯ್ಯನವರ ಕೌಂಟ್‌ಡೌನ್‌ ಶುರುವಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸದ ಈ ಸಕಾರ ಇದ್ದರೆಷ್ಟು ಹೋದರೆಷ್ಟು? ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರ ಸೋಲು ಶತಸ್ಸಿದ್ಧ. ಈ ಸೋಲಿನೊಂದಿಗೆ ಸರ್ಕಾರದ ಕೌಂಟ್‌ಡೌನ್‌ ಸಹ ಶುರುವಾಗುತ್ತದೆ. ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯದಿಂದ ಜನ ಬೇಸತ್ತಿದ್ದಾರೆ. 

ಉಪಚುನಾವಣೆಂ‌ುಲ್ಲಿ ಬಿಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ಕಾಂಗ್ರೆಸ್‌ ಹತಾಶವಾಗಿದೆ. ಮಾನಸಿಕವಾಗಿ ಸೋತು ಹೋಗಿದೆ. ಗೆಲ್ಲಲೇಬೇಕೆಂಬ ಹಠದಲ್ಲಿ ಸಿದ್ದರಾಮಯ್ಯ ಕ್ಯಾಬಿನೆಟ್‌ ಪಟಾಲಂ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಟೆಂಟ್‌ ಹಾಕಿದೆ ಎಂದು ರಾಮುಲು ವ್ಯಂಗ್ಯವಾಡಿದರು.

150 ಕ್ಷೇತ್ರಗಳಲ್ಲಿ ಗೆಲುವು:
ಉಪಚುನಾವಣೆಯಲ್ಲಷ್ಟೇ ಅಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸ್ಟೀಲ್‌ ಬ್ರಿಡ್ಜ್ ಕಾಮಗಾರಿ ಸಂಬಂಧ ಮುಖ್ಯಮಂತ್ರಿ ಸಂಬಂಧಿಕರಿಗೆ 65 ಕೋಟಿ ರೂ. ಸಂದಾಯವಾಗಿದೆ ಎಂಬ ಆರೋಪ ಬಂದ ಕಾರಣ ಯೋಜನೆಯನ್ನೇ ಕೈಬಿಟ್ಟರು. ಗೋವಿಂದರಾಜು ಡೈರಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಹೊರಬೀಳುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ, ಕೆ.ಆರ್‌.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಸುಂದರರಾಜು, ಜಿಪಂ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

ಬಿಎಸ್‌ವೈ ಸಿಎಂ ಆದಾಕ್ಷಣ ನಾನೇ ಕರೆತರುವೆ…
ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಯಾರು ಎಷ್ಟು ಬಾರಿ ಭೇಟಿ ಕೊಟ್ಟರು ಎಂಬುದು ಮುಖ್ಯವಲ್ಲ. ಏನು ಅಭಿವೃದ್ಧಿ ಕೆಲಸ ಮಾಡಿದರು ಎಂಬುದು ಮುಖ್ಯ ಎಂದು ಸಂಸದ ಬಿ.ಶ್ರೀರಾಮುಲು, ಬಿಎಸ್‌ವೈ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡದ ಬಗ್ಗೆ ಪ್ರತಿಕ್ರಿಯಿಸಿದರು.
ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಒಮ್ಮೆಯೂ ಭೇಟಿ ನೀಡಲಿಲ್ಲ. ಈಗ ಗುಂಡ್ಲುಪೇಟೆಯ ಗ್ರಾಮಗ್ರಾಮಗಳಲ್ಲೂ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಮುಲು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದೇ ಕಡಿಮೆ ಅವಧಿ. ಹಾಗಾಗಿ ಚಾ.ನಗರಕ್ಕೆ ಬರಲಾಗಲಿಲ್ಲ. ಮುಂದಿನ ಬಾರಿ ಮುಖ್ಯಮಂತ್ರಿಯಾದ ತಕ್ಷಣ, ನಾನೇ ಅವರನ್ನು ಚಾಮರಾಜನಗರಕ್ಕೆ ಕರೆತರುತ್ತೇನೆ ಎಂದು ಭರವಸೆ ನೀಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next