ಹೈದರಾಬಾದ್: ಅನುಮತಿ ಪಡೆಯದೆ ಹೈದರಾಬಾದ್ ನ ಒಸ್ಮಾನಿಯಾ ಯೂನಿರ್ವಸಿಟಿಯೊಳಕ್ಕೆ ಪ್ರವೇಶಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಸಂಸದ ತೇಜಸ್ವಿ ಸೂರ್ಯ ವಿವಿಯೊಳಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಒಸ್ಮಾನಿಯಾ ಯೂನಿರ್ವಸಿಟಿಯ ರಿಜಿಸ್ಟ್ರಾರ್ ದೂರು ದಾಖಲಿಸಿರುವುದಾಗಿ ತೆಲಂಗಾಣ ಪೊಲೀಸ್ ವರಿಷ್ಠಾಧಿಕಾರಿ ಮಹೇಂದರ್ ರೆಡ್ಡಿ ಗುರುವಾರ(ನವೆಂಬರ್ 26, 2020) ತಿಳಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ (ಜಿಎಚ್ ಎಂಸಿ) ಚುನಾವಣೆಯ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದರು. ಚುನಾವಣಾ ಪ್ರಚಾರದ ವೇಳೆ ತೇಜಸ್ವಿ ಸೂರ್ಯ ಹೈದರಾಬಾದ್ ಸಂಸದ, ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಹಾಗೂ ಆಡಳಿತಾರೂಢ ಟಿಆರ್ ಎಸ್ ವಿರುದ್ಧ ವಿವಾದಿತ ಹೇಳಿಕೆ ನೀಡಿರುವುದಾಗಿ ವರದಿ ಹೇಳಿದೆ.
ತೇಜಸ್ವಿ ಸೂರ್ಯ ಅವರು ಮಂಗಳವಾರ ಒಸ್ಮಾನಿಯಾ ಯೂನಿರ್ವಸಿಟಿಗೆ ಭೇಟಿ ನೀಡಿದ್ದರು. ಸೂರ್ಯ ಹಾಗೂ ಬೆಂಬಲಿಗರು ಬ್ಯಾರಿಕೇಡ್ ಅನ್ನು ಕಿತ್ತೆಸೆದು ಬಲವಂತವಾಗಿ ಆವರಣದೊಳಕ್ಕೆ ನುಗ್ಗಿ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವುದಾಗಿ ರಿಜಿಸ್ಟ್ರಾರ್ ದೂರಿನಲ್ಲಿ ತಿಳಿಸಿದ್ದಾರೆ.