ಉಡುಪಿ: ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸುವುದು ನಮ್ಮ ಮುಖ್ಯ ಗುರಿ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಸೋಮವಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸುವ ಮುನ್ನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದರು.
ಅನೇಕ ರಹಸ್ಯ – ಡಾ| ಜಯಮಾಲಾ: ರಾಜ್ಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರವನ್ನು ಒಪ್ಪಿಕೊಂಡಿದ್ದೇವೆ. ಕೋಮುವಾದಿ ಪಕ್ಷ ಸೋಲಿಸಲು ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ. ಹೊಂದಾಣಿಕೆಯ ಹಿಂದೆ ಅನೇಕ ರಹಸ್ಯಗಳಿವೆ, ಸತ್ವಗಳಿವೆ. ಸುಳ್ಳು ಹೇಳುವ ಪಕ್ಷಕ್ಕೆ ಮತ ಹಾಕಕೂಡದು ಎಂದು ಡಾ| ಜಯಮಾಲಾ ಕರೆ ನೀಡಿದರು.
ಜತೆಯಾಗಿ ಸಂಸತ್ ಪ್ರವೇಶ – ಮಧು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಎರಡೂ ಪಕ್ಷದವರು ಸಹಕಾರ ಕೊಡಬೇಕು. ಬಂಗಾರಪ್ಪನವರ ಅಭಿಮಾನಿಗಳು ಈ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೂ ನಿಮಗೆ ಸಹಕಾರ ನೀಡುತ್ತಾರೆ.
ನಾವಿಬ್ಬರೂ ಜತೆಯಾಗಿ ಸಂಸತ್ತನ್ನು ಪ್ರವೇಶಿಸಲು ಮತದಾರರು ಆಶೀರ್ವದಿಸಬೇಕು ಎಂದರು. ರೈತರ, ಮಹಿಳೆಯರ, ಮೀನುಗಾರರ ಸಮಸ್ಯೆಗಳನ್ನು ಬಗೆ ಹರಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.