ಉಡುಪಿ: ಜಿಲ್ಲೆಯ ಹಾಲಿ ಐವರು ಬಿಜೆಪಿ ಶಾಸಕರ ಪೈಕಿ ನಾಲ್ವರು ಶಾಸಕರಿಗೆ ಟಿಕೆಟ್ ನಿರಾಕರಣೆ ಮಾಡಿ ಹೊಸ ಮುಖಗಳಿಗೆ ಮಣೆ ಹಾಕಿದರೂ ಜಿಲ್ಲೆಯ ಮತದಾರರು ಕಮಲ ಪಾಳಯದ ಕೈ ಹಿಡಿದಿದ್ದು, ಎಲ್ಲಾ ಐದು ಬಿಜೆಪಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ (ಸುನೀಲ್ ಕುಮಾರ್) ಹೊರತು ಪಡಿಸಿ ಉಳಿದ ಉಡುಪಿ, ಕಾಪು, ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಹೊಸಮುಖಗಳಿಗೆ ಬಿಜೆಪಿ ಮಣೆ ಹಾಕಿತ್ತು.
ಕಾರ್ಕಳದಲ್ಲಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ನ ಮುನಿಯಾಲು ಉದಯ ಶೆಟ್ಟಿ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಸಾದ್ ರಾಜ್ ಕಾಂಚನ್ ವಿರುದ್ಧ ಯಶಪಾಲ್ ಸುವರ್ಣ ಗೆದ್ದು ಬಿಜೆಪಿ ಬಾವುಟ ಹಾರಿಸಿದ್ದಾರೆ.
ಕಾಪು ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ಮತ್ತೊಮ್ಮೆ ಸೋಲಾಗಿದೆ. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಟ್ಟುಕೊಟ್ಟಿದ್ದ ಕುಂದಾಪುರ ಕ್ಷೇತ್ರದಲ್ಲಿ ಅವರ ಶಿಷ್ಯ ಕಿರಣ್ ಕುಮಾರ್ ಕೊಡ್ಗಿ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರಸ್ ನ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರಿಗೆ ಸೋಲಾಗಿದೆ.
ಬೈಂದೂರು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಿದೆ. ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅಸಮಾಧಾನದ ನಡುವೆಯೂ ಬಿಜೆಪಿಯ ಹೊಸ ಮುಖ ಗುರುರಾಜ ಶೆಟ್ಟಿ ಗಂಟಿಹೊಳಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ನ ಗೋಪಾಲ ಪೂಜಾರಿಯವರ ಮತ್ತೊಂದು ಪ್ರಯತ್ನಕ್ಕೆ ಸೋಲಾಗಿದೆ.