ಲಕ್ನೋ: ಜಾಡಮಾಲಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ತನ್ನ ಪತ್ನಿ ಅದೇ ಉತ್ತರಪ್ರದೇಶದ ಬ್ಲಾಕ್ ನ ಅಧ್ಯಕ್ಷೆಯಾಗುತ್ತಾಳೆ ಎಂಬುದನ್ನು ಊಹಿಸಿಯೂ ಇರಲಿಲ್ಲ. ಆದರೆ ಇತ್ತೀಚೆಗೆ ನಡೆದ ಬ್ಲಾಕ್ ಮುಖ್ಯಸ್ಥರ ಚುನಾವಣೆಯಲ್ಲಿ ಸುನೀಲ್ ಪತ್ನಿ, ಬಿಜೆಪಿ ಸದಸ್ಯೆ ಸೋನಿಯಾ ಗೆಲುವು ಸಾಧಿಸಿದ ನಂತರ ಉತ್ತರಪ್ರದೇಶದ ಸಹರಾನ್ ಪುರದ ಬಾಲಿಯಖೇರಿ ಬ್ಲಾಕ್ ನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜಾಲಿ ರೈಡ್‌ಗಾಗಿ ಬೈಕ್ ಕದಿಯುತ್ತಿದ್ದವರ ಸೆರೆ: 38 ಲಕ್ಷ ರೂ. ಮೌಲ್ಯದ 58 ವಾಹನ ವಶ
ನಲ್ಹೆರಾ ಗುಜ್ಜಾರ್ ಗ್ರಾಮದ ನಿವಾಸಿ ಸುನೀಲ್ ಬಾಲಿಯಖೇರಿ ಡೆವಲಪ್ ಮೆಂಟ್ ಬ್ಲಾಕ್ ನಲ್ಲಿ ಜಾಡಮಾಲಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುನೀಲ್ ಪತ್ನಿ ಸೋನಿಯಾ 55ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ನಂತರ ಬಿಡಿಸಿ ಬ್ಲಾಕ್ ಅಧ್ಯಕ್ಷರ ಚುನಾವಣೆಯಲ್ಲಿ ಸೋನಿಯಾ ಸ್ಪರ್ಧಿಸಿರುವುದಾಗಿ ವರದಿ ವಿವರಿಸಿದೆ.
ಬಾಲಿಯಖೇರಿ ಬ್ಲಾಕ್ ಅಧ್ಯಕ್ಷರ ಹುದ್ದೆ ಪರಿಶಿಷ್ಟ ಜಾತಿಗೆ ಕಾಯ್ದಿರಿಸಲಾಗಿತ್ತು. ಈ ನಿಟ್ಟಿನಲ್ಲಿ 26ವರ್ಷದ ವಿದ್ಯಾವಂತ ಸೋನಿಯಾ ಅವರನ್ನು ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತ್ ಸದಸ್ಯ ಮುಖೇಶ್ ಚೌಧರಿ ಬ್ಲಾಕ್ ಅಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು ಎಂದು ವರದಿ ಹೇಳಿದೆ.
ತನ್ನ ರಾಜಕೀಯದ ಪಯಣಕ್ಕೆ ಪತಿ ಹಾಗೂ ಆಕೆಯ ಕುಟುಂಬ ಸದಸ್ಯರು ಪ್ರೋತ್ಸಾಹ ನೀಡಿರುವುದಾಗಿ ಸೋನಿಯಾ ತಿಳಿಸಿದ್ದು, ಗ್ರಾಮದ ಅಭಿವೃದ್ಧಿ ಕೆಲಸ ಮಾಡುವ ಬಗ್ಗೆ ಇಚ್ಛೆ ಹೊಂದಿರುವುದಾಗಿ ಸೋನಿಯಾ ತಿಳಿಸಿದ್ದಾರೆ.