Advertisement

ಕೈ-ದಳ ಮತಗಳು ಬಿಜೆಪಿ ಪಾಲು!

11:54 AM May 25, 2019 | pallavi |

ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಎಂಬ ಸುನಾಮಿ ಅಲೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪಾರಂಪರಿಕ ಮತಗಳೂ ಬಿಜೆಪಿ ಪಾಲಾಗಿವೆ.

Advertisement

ಹೌದು, ಫಲಿತಾಂಶದ ಬಳಿಕ ಇಂತಹವೊಂದು ವಿಶ್ಲೇಷಣೆ ನಡೆಯುತ್ತಿದೆ. ಎರಡೂ ಪಕ್ಷಗಳ ನಾಯಕರು ಮಾಡಿದ್ದ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದ್ದು, ಗೆಲುವಿನ ಅಂತರ ನೋಡಿ, ಇದು ಮೋದಿ ಅಲೆಯಲ್ಲ, ಸುನಾಮಿ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವಿಧಾನಸಭೆ ಹಾಗೂ ಜಮಖಂಡಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪಡೆದಿದ್ದ ಮತಗಳೂ ಈ ಬಾರಿ ಮೈತ್ರಿ ಅಭ್ಯರ್ಥಿಗೆ ಬಂದಿಲ್ಲ. ಹುನಗುಂದ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ವತಃ ಮೈತ್ರಿ ಅಭ್ಯರ್ಥಿಯ ಪತಿ ವಿಜಯಾನಂದ ಕಾಶಪ್ಪನವರ ಪಡೆದಿದ್ದ ಮತಗಳೂ ತಮ್ಮ ಸ್ವಕ್ಷೇತ್ರದಲ್ಲಿ ವೀಣಾ ಅವರಿಗೆ ಬರದೇ ಇರುವುದು ಈ ಬಾರಿಯ ಚುನಾವಣೆಯ ವಿಶೇಷತೆಯೂ ಹೌದು.

ಮೇಟಿಗೆ ಮತಗಳು ಮತ್ತಷ್ಟು ತುಟ್ಟಿ: ಈ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತಷ್ಟು ಭದ್ರಗೊಂಡಿದೆ. ಹೀಗಾಗಿ ಮಾಜಿ ಸಚಿವ ಎಚ್.ವೈ. ಮೇಟಿ, ಕ್ಷೇತ್ರದಲ್ಲಿ ಹಿಡಿತ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ-88,074, ಕಾಂಗ್ರೆಸ್‌-59,186 ಮತ ಪಡೆದಿದ್ದು, 28,888 ಮತಗಳ ಲೀಡ್‌ ಬಿಜೆಪಿ ಪಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಡಾ| ಚರಂತಿಮಠರಿಗೂ ಇಷ್ಟೊಂದು ಲೀಡ್‌ ಬಂದಿರಲಿಲ್ಲ. ಆಗ ಬಿಜೆಪಿ 85,653, ಕಾಂಗ್ರೆಸ್‌ 69,719 ಮತ ಪಡೆದಿದ್ದವು. ಆಗಿನ ಲೀಡ್‌ 15,934 ಬಿಜೆಪಿ ಪಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಲೀಡ್‌ 28 ಸಾವಿರ ದಾಟಿದೆ.

ಬೀಳಗಿಯಲ್ಲಿ ಬೀಗಿದ ಬಿಜೆಪಿ: ಬೀಳಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬರೋಬ್ಬರಿ 22,186 ಮತಗಳ ಲೀಡ್‌ ಪಡೆದಿದೆ. ಇಲ್ಲಿ ಜಾತಿ ಆಧಾರದ ಮೇಲೆ ಚುನಾವಣೆ ನಡೆದಿದೆ. ಬಿಜೆಪಿಯ ಕೆಲವರು ಕಾಂಗ್ರೆಸ್‌ ಪರವಾಗಿದ್ದಾರೆ ಎಂಬೆಲ್ಲ ವದಂತಿ ಹಬ್ಬಿಸಲಾಗಿತ್ತು. ಆದರೆ, ಮತದಾರ ಮಾತ್ರ ಯಾರ ಒತ್ತಡ, ಆಮೀಷ ಅಥವಾ ಜಾತಿ ಲಾಭಿಗೆ ಒಳಗಾಗದೇ ಮೋದಿ ಸುನಾಮಿಗೆ ಬಿಜೆಪಿ ಪರ ತೀರ್ಪು ನೀಡಿರುವುದು ಸ್ಪಷ್ಟವಾಗುತ್ತದೆ ಎಂಬ ಮಾತು ಹೇಳಿ ಬಂದಿದೆ.

Advertisement

ಇಲ್ಲಿ ಬಿಜೆಪಿ-88,116 ಹಾಗೂ ಕಾಂಗ್ರೆಸ್‌-65,930 ಮತ ಪಡೆದಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 85,135 ಮತ ಪಡೆದರೆ, ಕಾಂಗ್ರೆಸ್‌ 80,324 ಹಾಗೂ ಜೆಡಿಎಸ್‌ 1773 ಮತ ಪಡೆದಿದ್ದವು. ಆಗ ಬಿಜೆಪಿ-ಕಾಂಗ್ರೆಸ್‌ನ ನಡುವಿನ ಅಂತರ 4,811 ಮತಗಳಿತ್ತು. ಈಗ 22,186 ಅಂತರಕ್ಕೆ ಬಿಜೆಪಿ ಹಾರಿದೆ.

ಜಮಖಂಡಿಯಲ್ಲಿ ನಿರೀಕ್ಷೆ ಬುಡಮೇಲು: ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳ ನಿರೀಕ್ಷೆಗಳೂ ಬುಡಮೇಲಾಗಿವೆ. ಒಳ ಒಪ್ಪಂದದ ಗುಟ್ಟು, ಫಲಿತಾಂಶದ ಬಳಿಕ ರಟ್ಟಾಗಲಿವೆ ಎಂಬ ಮಾತು, ಮತದಾನದ ಬಳಿಕ ಕೇಳಿ ಬಂದರೂ, ಮೋದಿ ಅಲೆಯಲ್ಲಿ ಯಾವ ಒಳಗುಟ್ಟೂ ಕೆಲಸ ಮಾಡದಿರುವುದು ಸ್ಪಷ್ಟವಾಗಿವೆ. ಬಿಜೆಪಿ-81,804, ಕಾಂಗ್ರೆಸ್‌-60,774 ಮತ ಪಡೆದಿದ್ದು, ಮತಗಳ ಅಂತರ 21,030 ಆಗಿವೆ. ಅದೇ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮತಗಳೆಲ್ಲವೂ ಬಿಜೆಪಿ ಪಾಲಾಗಿರುವುದು ಬಹಿರಂಗ ಸತ್ಯ. ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ 2,795 ಮತಗಳ ಅಂತರ ಕಾಂಗ್ರೆಸ್‌ ಪಡೆದಿತ್ತು. ಅದೇ ಉಪ ಚುನಾವಣೆಯಲ್ಲಿ ಬರೋಬ್ಬರಿ 39,480 ಮತಗಳ ಲೀಡ್‌ ಕಾಂಗ್ರೆಸ್‌ ತನ್ನದಾಗಿಸಿಕೊಂಡಿತ್ತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ ನಿರೀಕ್ಷೆ, ಲೆಕ್ಕಾಚಾರ ಹುಸಿಗೊಳಿಸಿ, 21 ಸಾವಿರಕ್ಕೂ ಹೆಚ್ಚು ಅಂತರ ಪಡೆದಿದೆ.

ತೇರದಾಳದಲ್ಲಿ ಸಿಗದ ಮೈತ್ರಿ ಫಲ: ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಗೆ ಅತಿಹೆಚ್ಚು ಲೀಡ್‌ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಅತಿಹೆಚ್ಚು ಬಿಜೆಪಿಗೆ ಲೀಡ್‌ ಕೊಟ್ಟಿದ್ದ ಕ್ಷೇತ್ರವಿದು. ಈ ಬಾರಿಯೂ 34,918 ಮತಗಳ ಲೀಡ್‌ ಬಂದಿದೆ. ಇಲ್ಲಿ ಬಿಜೆಪಿ-98,149 ಮತ್ತು ಕಾಂಗ್ರೆಸ್‌-63,231 ಮತ ಪಡೆದಿವೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಡೆದಿದ್ದ ಮತಗಳು, ಈಗ ಬಿಜೆಪಿ ಪಾಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-87,209, ಕಾಂಗ್ರೆಸ್‌-66,321 ಹಾಗೂ ಜೆಡಿಎಸ್‌-12,433 ಮತ ಪಡೆದಿದ್ದವು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಎರಡೂ ಪಕ್ಷಗಳ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದಿದ್ದರೆ 78,754 ಮತಗಳು ಬರಬೇಕಿತ್ತು. ಆದರೆ, ಇಲ್ಲಿ ಕಾಂಗ್ರೆಸ್‌ನ ಪಾರಂಪರಿಕ ಮತಗಳು ಮಾತ್ರ ಬಂದಿವೆ.

ಕೈ ಹಿಡಿಯದ ನಾಯಕರ ಒಪ್ಪಂದ: ಮುಧೋಳ ಕ್ಷೇತ್ರದಲ್ಲಿ ಜಾತಿ ಸಮೀಕರಣದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು ಕಾಂಗ್ರೆಸ್ಸಿಗರಿಗೆ ಮತ್ತೆ ಹಿನ್ನಡೆಯಾಗಿದೆ. ನೀವು ಇಲ್ಲಿ ಮಾಡಿ, ನಾವು ಗದಗನಲ್ಲಿ ಮಾಡುತ್ತೇವೆ ಎಂಬ ನಾಯಕರ ಒಳ ಒಪ್ಪಂದಕ್ಕೆ ಮತದಾರ, ಮುದ್ರೆಯೊತ್ತಿಲ್ಲ. ನಾಯಕರು ಏನೇ ಒಪ್ಪಂದ ಮಾಡಿಕೊಂಡರೂ ನಮ್ಮ ನಿರ್ಧಾರ ಅಚಲ ಎಂಬುದು ಮತದಾರರು ಸಾಬೀತುಪಡಿಸಿದ್ದಾರೆ.

ಮುಧೋಳ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ-78,636, ಕಾಂಗ್ರೆಸ್‌-58,989 ಮತ ಪಡೆದಿದ್ದು, 19,647 ಮತಗಳು ಬಿಜೆಪಿಗೆ ಲೀಡ್‌ ಬಂದಿವೆ. ಅದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-76,431, ಕಾಂಗ್ರೆಸ್‌-60,949 ಹಾಗೂ ಜೆಡಿಎಸ್‌-4431 ಮತಗಳು ಪಡೆದಿದ್ದವು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದಿದ್ದ ಮತಗಳಿಗಿಂತಲೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಹಿಂದುತ್ವದ ಗಟ್ಟಿ ನೆಲ ಹಾಗೂ ಮೋದಿ ಅಲೆಯಲ್ಲಿ ಮತಗಳು, ಅಲೆಯಲ್ಲಿ ಬಿಜೆಪಿ ಪಾಲಾಗಿವೆ.

ಹುನಗುಂದ ಸ್ವಕ್ಷೇತ್ರದಲ್ಲಿ ಕೈ ಕೊಟ್ಟ ಮತದಾರ: ಕಳೆದ 35 ವರ್ಷಗಳ ಬಳಿಕ ಹುನಗುಂದ ಕ್ಷೇತ್ರದ ಒಬ್ಬ ಮಹಿಳಾ ನಾಯಕಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು, ಅಭ್ಯರ್ಥಿಯ ಸ್ವ ಕ್ಷೇತ್ರವಾದ್ದರಿಂದ ಇಲ್ಲಿ ಮೈತ್ರಿ ಅಭ್ಯರ್ಥಿ ಲೀಡ್‌ ಪಡೆಯಬಹುದೆಂಬ ನಿರೀಕ್ಷೆ ಬಹಳಷ್ಟಿತ್ತು. ಆದರೆ, ಇಲ್ಲಿ ಕಾಂಗ್ರೆಸ್‌ 11,369 ಮತಗಳ ಹಿನ್ನಡೆ ಅನುಭವಿಸಿದೆ. ಅಲ್ಲದೇ ಕಾಂಗ್ರೆಸ್‌-ಜೆಡಿಎಸ್‌ನ ಮತಗಳೂ, ಬಿಜೆಪಿ ಪಾಲಾಗಿರುವುದು ಇಲ್ಲಿ ಸ್ಪಷ್ಟವಾಗಿದೆ.

ಹುನಗುಂದ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ-75,669, ಕಾಂಗ್ರೆಸ್‌-64,300 ಮತ ಪಡೆದಿದ್ದು, 11,369 ಮತಗಳ ಅಂತರವಿದೆ. ಅದೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-65,012, ಕಾಂಗ್ರೆಸ್‌-59,785, ಜೆಡಿಎಸ್‌-25,850 ಮತ ಪಡೆದಿದ್ದವು. ಮೈತ್ರಿಯಿಂದ ಕಾಂಗ್ರೆಸ್‌-ಜೆಡಿಎಸ್‌ ಪಡೆದ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದಿದ್ದರೆ, ಇಲ್ಲಿ ಕಾಂಗ್ರೆಸ್‌ಗೆ 85,635 ಮತಗಳು ಬಂದು, 20,623 ಮತಗಳ ಅಂತರವನ್ನು ಮೈತ್ರಿ ಅಭ್ಯರ್ಥಿ ವೀಣಾ ಪಡೆಯಬೇಕಿತ್ತು. ಇಲ್ಲಿಯೂ ಸ್ವಕ್ಷೇತ್ರ, ಮಹಿಳಾ ನಾಯಕಿ ಎಂಬ ಯಾವ ಅಂಶಕ್ಕೂ ಮತದಾರ ಮನ್ನಣೆ ನೀಡದೇ, ಬಿಜೆಪಿ ಪರ ತೀರ್ಪು ನೀಡಿದ್ದಾನೆ.

ನರಗುಂದದಲ್ಲಿ ನಡುಗಿದ ಕೈ: ನರಗುಂದ ವಿಧಾನಸಭೆ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ-ಕಾಂಗ್ರೆಸ್‌ಗೆ ಲೀಡ್‌ ಬಂದಿಲ್ಲ. ಜಾತಿ ಆಧಾರದ ಮೇಲೆ ಇಲ್ಲಿ ಹೆಚ್ಚು ಮತ ಕಾಂಗ್ರೆಸ್‌ಗೆ ಬರುತ್ತವೆ ಎಂಬ ನಿರೀಕ್ಷೆ ಇಡಲಾಗಿತ್ತು. ಈ ಚುನಾವಣೆ ಜಾತಿ, ಅಭ್ಯರ್ಥಿ ಮುಖ ನೋಡಿದ್ದಕ್ಕಿಂತ ದೇಶ-ಮೋದಿ ಮುಖ ನೋಡಿಯೇ ನಡೆದಿರುವುದು ಬಹುತೇಕ ಸ್ಪಷ್ಟವಾಗುತ್ತದೆ.

ಇಲ್ಲಿ ಬಿಜೆಪಿ-73,118, ಕಾಂಗ್ರೆಸ್‌-54,805 ಮತಗಳು ಪಡೆದಿದ್ದು, 18,313 ಮತಗಳ ಅಂತರವನ್ನು ಬಿಜೆಪಿ ಕಾಯ್ದುಕೊಂಡಿದೆ. ಅದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-73,045, ಕಾಂಗ್ರೆಸ್‌-65,056, ಜೆಡಿಎಸ್‌-2456 ಮತ ಪಡೆದಿದ್ದವು. ಮೈತ್ರಿ ಪಕ್ಷಗಳ ಮತಗಳು, ಈ ಬಾರಿ ಕಾಂಗ್ರೆಸ್‌ಗೆ ಬಂದಿದ್ದರೆ, 67,512 ಮತಗಳು ಬಂದು, ಬಿಜೆಪಿ ಕೇವಲ 5,533 ಲೀಡ್‌ ಪಡೆಯಬೇಕಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ 18,313 ಲೀಡ್‌ ಈ ಕ್ಷೇತ್ರದಲ್ಲಿ ಪಡೆದಿದೆ.

ಒಟ್ಟಾರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಪಾರಂಪರಿಕ ಮತಗಳೂ ಬಿಜೆಪಿ ಪಾಲಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್‌ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಚಿಂತನ-ಮಂಥನದ ಮೊರೆ ಹೋಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಖಭಂಗ

ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ, ಪ್ರಸ್ತುತ ಚುನಾವಣೆಯಲ್ಲಿ ಮುಖಭಂಗವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ತಾವು ಪಡೆದಷ್ಟು ಮತಗಳೂ, ಮೈತ್ರಿ ಅಭ್ಯರ್ಥಿಗೆ ಕೊಡಿಸುವಲ್ಲಿ ಸಿದ್ದು ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ 78,096 ಮತ ಪಡೆದರೆ, ಕಾಂಗ್ರೆಸ್‌ಗೆ 68,421 ಮತ ಬಂದಿವೆ. ಇಲ್ಲಿನ ಬಿಜೆಪಿ 9,675 ಮತಗಳ ಅಂತರ ಪಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 67,599, ಬಿಜೆಪಿ 65,908 ಹಾಗೂ ಜೆಡಿಎಸ್‌ 24,484 ಮತ ಪಡೆದಿದ್ದವು. ಮೈತ್ರಿ ಅಭ್ಯರ್ಥಿಯಾಗಿದ್ದರಿಂದ ಕಾಂಗ್ರೆಸ್‌-ಜೆಡಿಎಸ್‌ ಮತಗಳು ಒಟ್ಟುಗೂಡಿ, ಬಿಜೆಪಿಗಿಂತ ಹೆಚ್ಚಿನ ಲೀಡ್‌ ಈ ಕ್ಷೇತ್ರದಲ್ಲಿ ಬರಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಮಾಡಿತ್ತು. ಆದರೆ, ಸಿದ್ದರಾಮಯ್ಯ ಕ್ಷೇತ್ರದಲ್ಲೇ ಬಿಜೆಪಿ 9,675 ಮತಗಳ ಅಂತರ ಪಡೆದಿದೆ.
ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ನಮ್ಮ ನಿರೀಕ್ಷೆ ಹುಸಿಯಾಗಿವೆ. ಆದರೂ, ದೃತಿಗೆಡುವುದಿಲ್ಲ. ಪಕ್ಷ ಸಂಘಟನೆ ಮಾಡುತ್ತೇವೆ. ಸೋಲೇ, ಗೆಲುವಿನ ಮೆಟ್ಟಿಲು ಎಂದು ಭಾವಿಸಿದ್ದೇವೆ.
• ವೀಣಾ ಕಾಶಪ್ಪನವರ,ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ
ಹುನಗುಂದ ಕ್ಷೇತ್ರದಲ್ಲಿ ನನಗೆ ಬಂದಿದ್ದ ಮತಗಳೇ ಬಂದಿಲ್ಲ. 11 ಸಾವಿರ ಮತಗಳ ಲೀಡ್‌ ಬಿಜೆಪಿ ಪಡೆದಿದೆ. ಸ್ವಕ್ಷೇತ್ರ ಹಾಗೂ ಮಹಿಳೆಗೆ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತ ಬರಲಿವೆ ಎಂಬ ವಿಶ್ವಾಸವಿತ್ತು. ಇದಕ್ಕೆ ಏನು ಕಾರಣ, ಕ್ಷೇತ್ರದಲ್ಲಿ ಜನರ ಪ್ರೀತಿ-ವಿಶ್ವಾಸ ಗಳಿಸಲು ಏನು ಮಾಡಬೇಕು, ಪಕ್ಷ ಸಂಘಟನೆ ಗಟ್ಟಿಗೊಳಿಸಲು ಮುಂದಾಗುತ್ತೇವೆ.
• ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ
Advertisement

Udayavani is now on Telegram. Click here to join our channel and stay updated with the latest news.

Next