ಬೆಂಗಳೂರು/ಹೊಸದಿಲ್ಲಿ: ಕೋವಿಡ್ ಈ ಸಂಕಷ್ಟದ ಕಾಲದಲ್ಲೂ ನಮ್ಮ ಪಕ್ಷ ಕೈಗೊಂಡ ರಾಷ್ಟ್ರವ್ಯಾಪಿ ಕ್ಷೇಮಾಭಿವೃದ್ಧಿ ಕೆಲಸಗಳು ಇತಿಹಾಸದಲ್ಲೇ ಅತಿದೊಡ್ಡ “ಸೇವಾಯಜ್ಞ’ವಾಗಿದೆ. ಬಿಜೆಪಿಗೆ ಅಧಿಕಾರ ಎನ್ನುವುದು ಜನಸೇವೆಗಿರುವ ಮಾಧ್ಯಮ.
-ಪ್ರಧಾನಿ ಮೋದಿ ಶನಿವಾರ “ಸೇವಾ ಹಿ ಸಂಘಟನ್’ (ಸೇವೆಯೇಸಂಘಟನೆ) ಸಭೆಯಲ್ಲಿ ಬಿಜೆಪಿ ಆಡಳಿತ ದ ರಾಜ್ಯಗಳ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಮಾತು ಹೇಳಿದ್ದಾರೆ.
ನಮಗೆ ನಮ್ಮ ಸಂಘಟನೆಯು ಚುನಾವಣೆಯನ್ನು ಗೆಲ್ಲಲು ಇರುವ ಯಂತ್ರವಲ್ಲ. ನಮಗೆ ಸಂಘ ಎಂದರೆ “ಸೇವೆ’. ಸಂಘಟನೆ ಎಂದರೆ “ಎಲ್ಲರನ್ನೂ ಒಳಗೊಂಡು ಸಾಗು ವುದು’ (ಸಬ್ ಕಾ ಸಾಥ್), “ಸರ್ವರ ಸಂತೋಷ, ಸಮೃದ್ಧಿಯ ಆಶಯ’. ಒಟ್ಟಿನಲ್ಲಿ ನಮ್ಮ ಸಂಘಟನೆಯು ಸಮಾಜದ ಏಳಿಗೆಗಾಗಿ ಕೆಲಸ ಮಾಡುವಂಥದ್ದು ಎಂದಿದ್ದಾರೆ.
ನಿಮ್ಮ ಬದ್ಧತೆಗೆ ನನ್ನ ನಮನ ಹಲವು ರಾಜ್ಯಗಳಲ್ಲಿ ನಮ್ಮ ಕಾರ್ಯ ಕರ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕರು ಜನರ ಮತ್ತು ದೇಶದ ಸೇವೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅವರೆಲ್ಲರಿಗೂ ಅವರ ಕುಟುಂಬಗಳಿಗೂ ಗೌರವ ಸಲ್ಲಿಸುತ್ತೇನೆ. ಜಗತ್ತಿನ ಕಣ್ಣಿಗೆ ನೀವು ಕೋವಿಡ್ ಯುಗದಲ್ಲಿ ಕೆಲಸ ಮಾಡು ತ್ತಿರುವವರಂತೆ ಕಂಡರೆ ನನ್ನ ಕಣ್ಣಿಗೆ ನೀವು ನಿಮ್ಮನ್ನು ಬಲಿಷ್ಠಗೊಳಿಸಿಕೊಂಡಂತೆ, ನಿಮ್ಮ ಆದರ್ಶಗಳ ನಡುವೆಯೇ ನಿಮ್ಮನ್ನು ಗಟ್ಟಿಗೊಳಿಸಿದಂತೆ ಕಾಣಿಸುತ್ತಿದೆ ಎಂದರು.
ಕರ್ನಾಟಕದಿಂದ 49 ಲಕ್ಷ ಆಹಾರ ಕಿಟ್ ವಿತರಣೆ
ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಬಿಜೆಪಿಯಿಂದ 49 ಲಕ್ಷ ಆಹಾರ ಕಿಟ್, 1.40 ಲಕ್ಷ ಜನರಿಗೆ ಔಷಧ ಪೂರೈಕೆ ಸಹಿತ ಹಲವು ವಿಧಗಳಲ್ಲಿ ಸೇವಾ ಕಾರ್ಯ ನಡೆಸಲಾಗಿದೆ ಎಂದು ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮಾಹಿತಿ ನೀಡಲಾಗಿದೆ. ರಾಜ್ಯ ಬಿಜೆಪಿ ಘಟಕದ ಮಾಹಿತಿ ಪಡೆದ ಬಳಿಕ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು.
ಪಕ್ಷದ ಹಿರಿಯ ನಾಯಕರಾದ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾ ಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರ ಪ್ರಮುಖರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು.