ಬಳ್ಳಾರಿ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ವರ್ಷದ ಮುನ್ನವೇ ರಣಕಹಳೆ ಮೊಳಗಿಸಿ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯವರು ದಶಕದ ಹಿಂದಿನ ‘ಅಸ್ತ್ರ’ವನ್ನೇ ಈಗಲೂ ಬಳಸುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.
ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ವರಿಷ್ಠರು, ಯಾವುದಕ್ಕೂ ಹೆದರದೆ ಧೈರ್ಯವಾಗಿರಿ, ನಿಮ್ಮ ಬೆಂಬಲಕ್ಕೆ ಪಕ್ಷ ಸದಾ ಇರಲಿದೆ ಎಂದು ಪಕ್ಷದ ಜನಪ್ರತಿನಿಧಿಗಳು-ಕಾರ್ಯಕರ್ತರಿಗೆ ಅಭಯ ‘ಹಸ್ತ’ ನೀಡಿದ್ದಾರೆ.
ಗಣಿನಾಡು ಬಳ್ಳಾರಿ ರಾಜಕೀಯ, ಚುನಾವಣೆಗಳು ರಾಜ್ಯ ಸೇರಿ ದೇಶದ ಗಮನ ಸೆಳೆದಿವೆ. ದಶಕದ ಹಿಂದಿನ ಬಳ್ಳಾರಿ ರಾಜಕೀಯವನ್ನು ಗಮನಿಸಿದಾಗ ಸಂಬಂಧವಿಲ್ಲದ ಯಾವುದೋ ಪ್ರಕರಣದಲ್ಲಿ ಇನ್ನಾರೋ ಮುಖಂಡರ ಹೆಸರನ್ನು ಸೇರಿಸಿ ಅವರನ್ನು ‘ಕಟ್ಟಿ ಹಾಕುವ’, ಪೊಲೀಸರಿಂದ ಬೆದರಿಸಿ ಮನೆಯಿಂದ ಹೊರಬರದಂತೆ ತಡೆಹಿಡಿದು ಚುನಾವಣೆಗಳನ್ನು ನಡೆಸಿರುವ ಹಲವು ಉದಾಹರಣೆಗಳಿವೆ. ಮುಂಬರುವ 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯವರು ಇದೇ ‘ಅಸ್ತ್ರ’ವನ್ನು ಬಳಸುವ ಸಾಧ್ಯತೆಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈಗಾಗಲೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ‘ಸೈಲೆಂಟ್’ ಮಾಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಬಳ್ಳಾರಿಯ ಕಾಂಗ್ರೆಸ್ ಯಾವೊಬ್ಬ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಯಾವುದಕ್ಕೂ ಹೆದರದೆ ಧೈರ್ಯವಾಗಿರಿ. ನಿಮ್ಮ ಬೆಂಬಲಕ್ಕೆ ಪಕ್ಷ ಇರಲಿದೆ ಎಂದು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಸದಸ್ಯರೊಬ್ಬರು ತಿಳಿಸಿದ್ದಾರೆ.
ಕಮಲಕ್ಕೆ ತಪ್ಪಿದ ಪಾಲಿಕೆ
ಗಣಿನಾಡು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಕಾಂಗ್ರೆಸ್ ಅಧಿ ಕಾರಕ್ಕೆ ಬಂದಿದೆ. ಪಾಲಿಕೆಯ 39 ಸದಸ್ಯರಲ್ಲಿ 21 ಕಾಂಗ್ರೆಸ್, ಐವರು ಕಾಂಗ್ರೆಸ್ ಬೆಂಬಲಿತ ಪಕ್ಷೇತರರು, 13 ಬಿಜೆಪಿ ಸದಸ್ಯರು ಜಯಗಳಿಸಿದ್ದಾರೆ. ಇದರಿಂದ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ನಗರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಬಲವನ್ನು ಬಿಜೆಪಿ ಹೊಂದಿದ್ದರೂ, ತಳಮಟ್ಟದಲ್ಲಿನ ಮತದಾರರ ಮೇಲೆ ಹಿಡಿತ ಸಾಧಿಸುವುದು ಒಂದಷ್ಟು ಕಷ್ಟಸಾಧ್ಯವೆನ್ನಲಾಗುತ್ತಿದೆ. ಜನಪ್ರತಿನಿಧಿಗಳು ಮತದಾರರ ಮೇಲೆ ಪ್ರಭಾವ ಬೀರುವುದು ಸಹಜ. ಹಾಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಮತದಾರರ ಮೇಲೆ ಪ್ರಭಾವ ಬೀರದಂತೆ ಬಿಜೆಪಿಯಿಂದ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅವ ಧಿಯಲ್ಲಿ 20ಕ್ಕೂ ಹೆಚ್ಚು ಪೊಲೀಸರು ತೆರಳಿ ಕಾಂಗ್ರೆಸ್ ಮುಖಂಡರನ್ನು ಕರೆದೊಯ್ದು ಜೈಲಿಗೆ ಕಳುಹಿಸಿರುವ ಹಲವು ಉದಾಹರಣೆಗಳಿವೆ. ನಮ್ಮನ್ನು ಸಹ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಅಧಿಕಾರ ಅವರ ಬಳಿ ಇದ್ದಾಗ ಬೆದರಿಸಬಹುದು. ಜೈಲಿಗೆ ಕಳುಹಿಸಬಹುದು. ಯಾವಾಗ ಏನಾದರೂ ಆಗಬಹುದು. ಯಾವುದಕ್ಕೂ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆಯಿಂದಿರಿ, ಹೆದರದೆ, ಅಧೈರ್ಯಗೊಳ್ಳದೆ ಧೈರ್ಯವಾಗಿ ಎದುರಿಸಿ, ನಿಮ್ಮ ಬೆನ್ನಿಗೆ, ಬೆಂಬಲಕ್ಕೆ ಪಕ್ಷ ಸದಾ ಇರಲಿದೆ ಎಂದು ವರಿಷ್ಠರು ಅಭಯ ‘ಹಸ್ತ’ ನೀಡಿದ್ದಾರೆ. ಆದರೂ, ಚುನಾವಣೆಗೆ ಇನ್ನು ಒಂದು ವರ್ಷ ಇರುವುದರಿಂದ ಸದ್ಯ ಈಗ ಏನೂ ಆಗದಿದ್ದರೂ, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದವರು ತಿಳಿಸಿದ್ದಾರೆ.
-ವೆಂಕೋಬಿ ಸಂಗನಕಲ್ಲು