Advertisement

“ಬಿಜೆಪಿಯವರ ಗೋಬ್ಯಾಕ್‌ ಶೋಭಾ ಅಭಿಯಾನ ಯಶಸ್ವಿಗೊಳಿಸಿ’

12:55 AM Mar 28, 2019 | sudhir |

ಕಾರ್ಕಳ: ಶೋಭಾ ಕರಂದ್ಲಾಜೆ ತನ್ನ ಅವಧಿಯಲ್ಲಿ ಕ್ಷೇತ್ರದ ಕೆಲಸ ಕಾರ್ಯ ಮಾಡದಿರುವ ಕಾರಣ ಬಿಜೆಪಿಯವರು ಗೋಬ್ಯಾಕ್‌ ಶೋಭಾ ಅಭಿಯಾನ ಆರಂಭಿಸಿದ್ದರು. ಅದನ್ನೀಗ ಕಾಂಗ್ರೆಸ್‌ - ಜೆಡಿಎಸ್‌ ಕಾರ್ಯಕರ್ತರು ಯಶಸ್ವಿಗೊಳಿಸಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಕರೆ ನೀಡಿದರು.

Advertisement

ಮಾ. 27ರಂದು ಕಾರ್ಕಳದ ಕಿಸಾನ್‌ ಸಭಾಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯ ಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಉಡುಪಿ ಶಾಸಕನಾಗಿದ್ದ ವೇಳೆ ತನ್ನ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಅನುದಾನ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ತಮ್ಮೆಲ್ಲರ ಹಾರೈಕೆಯಿಂದ ಈ ಸಲ ಸಂಸದನಾಗಿ ಆಯ್ಕೆಗೊಂಡಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದು ಅವರು ಭರವಸೆಯಿತ್ತರು.

ರಾಜಕಾರಣದಿಂದ ಒಂದು ರೂ. ಸಂಪಾದನೆ ಮಾಡಿದವನು ನಾನಲ್ಲ. ಸೋಲೇ ಗೆಲುವಿಗೆ ಸೋಪಾನ ಎನ್ನುವಂತೆ ಕಳೆದ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಕಾರಣ ಈ ಸಲ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಸುಯೋಗ ತನಗೆ ಲಭಿಸಿದೆ. ಸಂಸದನಾಗಿ ಆಯ್ಕೆಗೊಂಡಲ್ಲಿ ಕ್ಷೇತ್ರದ ಜನತೆಯ ಸೇವಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಕಾಂಗ್ರೆಸ್‌ನಿಂದ ಜನಪರ ಆಡಳಿತ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ,
ಕೇವಲ ಮಾತಿನ ಮೋಡಿಯಿಂದ ಮೋದಿ ಜನರನ್ನು ಮರುಳು ಮಾಡುತ್ತಿದ್ದಾರೆ. ಆದರೆ, ಈ ಸಲ ಅವರ ಪೊಳ್ಳು ಭರವಸೆಗೆ ಮತದಾರರು ಮನ್ನಣೆ ನೀಡಲಾರರು. ಕಾಂಗ್ರೆಸ್‌ ಸರಕಾರ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಿ ಆಡಳಿತ ನೀಡಿದರೆ ಬಿಜೆಪಿಯದ್ದು ಕೇವಲ ಪ್ರಚಾರ-ಅಪಪ್ರಚಾರಕ್ಕಷ್ಟೇ ಸೀಮಿತ ಎಂದರು.

Advertisement

ಶೋಭಾ ಅತಿಥಿ ಕಲಾವಿದೆ
ಬಿಜೆಪಿಯವರು ಕೇವಲ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಜನರನ್ನು ಮರುಳು ಮಾಡುವ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಶೋಭಾ ಕರಂದ್ಲಾಜೆ ಸಂಸದರಾಗಿದ್ದ ಅವಧಿಯಲ್ಲಿ ಅತಿಥಿ ಕಲಾವಿದೆಯಂತೆ ಈ ಭಾಗದಲ್ಲಿ ಕಾಣಸಿಗುತ್ತಿದ್ದರು. ಇದೀಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪೂರ್ಣ ಪ್ರಮಾಣದ ಕಲಾವಿದೆಯಾಗಿ ಉಡುಪಿ ಯಲ್ಲಿ ಓಡಾಡುತ್ತಿದ್ದಾರೆ.
ಸಂಸದೆಯಾಗಿ ಅವರು ಉಡುಪಿಗೆ ನೀಡಿದ ಕೊಡುಗೆ ಯಾದರೂ ಏನು ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಪ್ರಶ್ನಿಸಿದರು.

ಪುಲ್ವಾಮ ದಾಳಿಯಲ್ಲಿ ಸೈನಿಕರು ಮೆರೆದ ಸಾಹಸವನ್ನು ಬಿಜೆಪಿಯವರು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ವೇಳೆ ಯಡಿಯೂರಪ್ಪನವರು ದಾಳಿಯ ಪರಿಣಾಮ ಬಿಜೆಪಿಗೆ 22 ಸೀಟು ಪಡೆಯ ಬಹುದು ಎಂಬ ಹೇಳಿಕೆ ನೀಡಿರುತ್ತಾರೆ. ಸೈನಿಕರ ಸಾವಿನಲ್ಲೂ ಇವರಿಗೆ ಸೀಟಿನದ್ದೇ ಚಿಂತೆ ಎಂದು ಟೀಕಿಸಿದರು.

ಒಗ್ಗಟ್ಟಿನಿಂದ ಗೆಲುವು ಖಚಿತ
ಕೆಪಿಸಿಸಿ ಪ್ರ. ಕಾರ್ಯದರ್ಶಿ ಭರತ್‌ ಮುಂಡೋಡಿ ಮಾತನಾಡಿ, ಬಿಜೆಪಿ ಮತೀಯವಾದ ಮುಂದಿಟ್ಟು ಕೊಂಡು ರಾಜಕೀಯ ಮಾಡುತ್ತಿದೆ. ಮಾನವೀಯ ಮೌಲ್ಯ, ಪ್ರೀತಿ, ವಿಶ್ವಾಸ ತುಂಬಿದ್ದ ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತಿ ಮತ ಪಡೆಯುವ ತಂತ್ರ ಬಿಜೆಪಿಯದ್ದು. ಕಾಂಗ್ರೆಸ್‌ ಜೆಡಿಎಸ್‌ ಒಟ್ಟಾಗಿ ಶ್ರಮಿಸಿದಲ್ಲಿ ಪ್ರಮೋದ್‌ ಗೆಲುವು ಖಚಿತವೆಂದರು. ಕಾಂಗ್ರೆಸ್‌ ಸಾಧನೆ ಮೇಲೆ ಮತ ಯಾಚಿಸಿದರೆ, ಬಿಜೆಪಿ ಸುಳ್ಳು ಭರವಸೆ ನೀಡಿ ಮತ ಯಾಚಿಸುತ್ತಿದೆ ಎಂದು ಮುಂಡೋಡಿ ಟೀಕಿಸಿದರು.

ಪ್ರಮೋದ್‌ ಕೊಡುಗೆ ಅಪಾರ
ಶೋಭಾ ಕರಂದ್ಲಾಜೆ ಕಾರ್ಕಳ ಕ್ಷೇತ್ರಕ್ಕೆ ಬಂದದ್ದೇ ವಿರಳ. ಪ್ರತಿ ಚುನಾವಣೆ ಸಂದರ್ಭ ಕ್ಷೇತ್ರ ಬದಲಿಸುತ್ತಿದ್ದ ಶೋಭಾ ಅವರಿಗೆ ಈ ಸಲ ಬೇರೆ ಕ್ಷೇತ್ರ ಸಿಗದ ಕಾರಣ ಉಡುಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಉಡುಪಿಯಲ್ಲಿ ಹುಟ್ಟಿ ಬೆಳೆದ ಪ್ರಮೋದ್‌ ಮಧ್ವರಾಜ್‌ ಶಾಸಕ, ಸಚಿವರಾಗಿ ಉಡುಪಿಗೆ ನೀಡಿದ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಪ್ರಮೋದ್‌ ಅವರು ಸಂಸದರಾಗಿ ಸೇವೆ ನೀಡಲು ಮತದಾರರು ಅವಕಾಶ ಮಾಡಿಕೊಡಬೇಕೆಂದು ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶೇಖರ್‌ ಮಡಿವಾಳ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಪ್ರಭಾಕರ್‌ ಬಂಗೇರ ನಿರೂಪಿಸಿದರು. ಜಾರ್ಜ್‌ ಕ್ಯಾಸ್ಟಲಿನೋ ವಂದಿಸಿದರು.

ಬ್ಯಾನರ್‌ನಲ್ಲಿ ಶೋಭಾ ಚಿತ್ರವಿರಲ್ಲ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ನೀಡಿದ ಅನುದಾನದಲ್ಲಿ ಕಾರ್ಕಳ ಕ್ಷೇತ್ರದಲ್ಲಾಗುವ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ, ಉದ್ಘಾಟನಾ ಸಮಾರಂಭದ ಬ್ಯಾನರ್‌ಗಳಲ್ಲಿ ಸುನಿಲ್‌ ಕುಮಾರ್‌ ಹಾಗೂ ಮೋದಿ ಚಿತ್ರವಿರುತ್ತದೆ. ಕ್ಷೇತ್ರದ ಸಂಸದರ ಚಿತ್ರವನ್ನು ಶಾಸಕರು ಅಳವಡಿಸುತ್ತಿಲ್ಲ. ಇದು ಶಾಸಕರೇ ಸಂಸದರ ಕೊಡುಗೆಯೇನಿಲ್ಲ ಎಂದು ನಿರೂಪಿಸಿದಂತೆ ಎಂದು ಗೋಪಾಲ ಭಂಡಾರಿ ಹೇಳಿದರು.

ಮರಳು ಸಿಗದಿರಲು ಕೇಂದ್ರ ಕಾರಣ
ಉಡುಪಿ ಕ್ಷೇತ್ರದಲ್ಲಿ ಮರಳಿನ ಅಭಾವ ತಲೆದೋರಲು ಕೇಂದ್ರ ಸರಕಾರವೇ ಕಾರಣ. ಕೇಂದ್ರ ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಮರಳು ದೊರೆಯದಂತಾಯಿತು. ಶೋಭಾ ಕರಂದ್ಲಾಜೆ ಕೂಡ ಈ ಕುರಿತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫ‌ಲರಾಗಿದ್ದಾರೆ. ತಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಮರಳು ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ಪ್ರಮೋದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next