Advertisement
ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಭಾರತಿ ಶೆಟ್ಟಿ, ಸಾಯಬಣ್ಣ ತಳವಾರ, ಲೇಹರಸಿಂಗ್, ಪ್ರತಾಪಸಿಂಹ ನಾಯಕ್, ರಘುನಾಥ ಮಲ್ಕಾಪುರೆ ಹಾಗೂ ಸಚಿವ ಮುನಿರತ್ನ ಸೇರಿ ಏಳು ಮಂದಿ ಹೆಸರನ್ನು ಕಲಬುರಗಿ ಮಹಾನಗರದ ಮತದಾರರ ಪಟ್ಟಿಯಲ್ಲಿ ಸೇರಿಸಿ ವಾಮಮಾರ್ಗದಿಂದ ಗದ್ದುಗೆ ಏರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.
Related Articles
Advertisement
ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು, ಆಮಿಷಕ್ಕೊಳಗಾಗಿ ಯಾವುದೇ ವಿಚಾರಣೆ ನಡೆಸದೆ ಮತದಾರರ ಪಟ್ಟಿಯಲ್ಲಿ ಈ ಏಳು ಜನರ ಹೆಸರು ಸೇರಿಸಿದರೆ ಕಾಂಗ್ರೆಸ್ ಸುಮ್ಮನೇ ಕೂಡುವುದಿಲ್ಲ. ಕಾನೂನು ಹೋರಾಟದ ಜತೆಗೆ ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಲಾಗುವುದು. ಸಾಧ್ಯವಾದರೆ ಜೈಲಿಗೂ ಕಳುಹಿಸಲಾಗುವುದು. ಅಧಿಕಾರಿಗಳು ಐಎಎಸ್ ಆಗಿರಲಿ ಇನ್ಯಾರೇ ಆಗಿರಲಿ, ಅವರನ್ನು ಬಿಡೋದಿಲ್ಲ ಎಂದು ಗುಡುಗಿದರು.
ಈಗಾಗಲೇ ಏಳು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಿರುವಂತೆ ಚುನಾವಣಾಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಲಾಗಿದೆ. ಅಲ್ಲದೇ ಕಾನೂನು ಹೋರಾಟದ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೇ ತೆರನಾಗಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ನಡೆದಿದೆ. ಈ ಹಿಂದೆ ತಪ್ಪು ಮಾಡಲಾಗಿದ್ದರೆ ಈಗಲೂ ತಪ್ಪು ಮಾಡುವುದು ಯಾವ ನ್ಯಾಯ? ಡಿಸಿ, ಪಾಲಿಕೆ ಆಯುಕ್ತ ಹಾಗೂ ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರು ಯಾರದ್ದೇ ಒತ್ತಡಕ್ಕೆ ಮಣಿಯದೇ ಮುಂದಿನ ದಿನಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ಮಾದರಿಯನ್ನಾಗಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣು ಮೋದಿ, ಡಾ| ಕಿರಣ ದೇಶಮುಖ, ಪ್ರವೀಣ ಹರವಾಳ, ಈರಣ್ಣ ಝಳಕಿ, ಸಂತೋಷ ಪಾಟೀಲ ದುಧನಿ, ಸೈಯದ್ ಅಹ್ಮದ ಇದ್ದರು.
ಈಗಾಗಲೇ 55 ಪಾಲಿಕೆ ಸದಸ್ಯರು ಹಾಗೂ ಎಂಟು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆದರೆ ಈಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದರೆ ಅಧಿಕಾರ ದುರ್ಬಳಕೆ ಆಗುತ್ತದೆಯಲ್ಲದೇ ಕ್ರಿಮಿನಲ್ ದರ್ಬಾರ್‌ಗೆ ಸಾಕ್ಷಿಯಾಗುತ್ತದೆ. -ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ