ಕೋಲ್ಕತಾ: ಒಂದು ವೇಳೆ ನೀವೂ ಕೂಡಾ ಯಾವುದೇ ರೀತಿಯಲ್ಲೂ ಸಿಕ್ಕಿಹಾಕಿಕೊಂಡರು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುನೀರಿನಲ್ಲೇ ಕೈಬಿಡುತ್ತಾರೆ…ಇದು ತೃಣಮೂಲ ಕಾಂಗ್ರೆಸ್ ಶಾಸಕರು ಮತ್ತು ಕಚೇರಿ ಸಿಬ್ಬಂದಿಗಳಿಗೆ ಭಾರತೀಯ ಜನತಾ ಪಕ್ಷ ನೀಡಿರುವ ಎಚ್ಚರಿಕೆಯಾಗಿದೆ!
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಮತ್ತೊಬ್ಬ ವಲಸೆ ಕಾರ್ಮಿಕ ಸಾವು
ಭ್ರಷ್ಟಾಚಾರ ಹಾಗೂ ಇತರ ಪ್ರಕರಣಗಳಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಟಿಎಂಸಿ ಮುಖಂಡರಾದ ಪಾರ್ಥ ಚಟರ್ಜಿ ಹಾಗೂ ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ ನಂತರ ಪಶ್ಚಿಮಬಂಗಾಳದ ಬಿಜೆಪಿ ಮಾಧ್ಯಮ ಸೆಲ್ ನ ಅಮಿತ್ ಮಾಳ್ವಿಯಾ ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಬಂಧಿತ ಪಾರ್ಥ ಮತ್ತು ಅನುಬ್ರತಾ ಮೊಂಡಲ್ ಅವರಿಗೆ ತುರ್ತು ಅಗತ್ಯವಿರುವ ಸಂದರ್ಭದಲ್ಲಿಯೂ ಮೊಬೈಲ್ ಕರೆಯನ್ನೂ ಕೂಡಾ ಮಮತಾ ಬ್ಯಾನರ್ಜಿ ಸ್ವೀಕರಿಸುತ್ತಿಲ್ಲ. ತಮಗೆ ತೊಂದರೆಯಾಗುತ್ತಿದೆ ಅಂತ ತಿಳಿದಾಗ ಮಮತಾ ಇದೇ ರೀತಿ ಕೈಬಿಡುತ್ತಾರೆ. ಇದು ಇತರ ಸಚಿವರು, ಶಾಸಕರು, ಟಿಎಂಸಿ ಕಾರ್ಯಕರ್ತರಿಗೂ ಅನ್ವಯವಾಗಲಿದೆ ಎಂದು ಮಾಳ್ವಿಯಾ ಆರೋಪಿಸಿದ್ದಾರೆ.
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಬ್ರತಾ ಮೊಂಡಲ್ ನಂತಹ ಹಲವಾರು ಕ್ರಿಮಿನಲ್ ಗಳನ್ನು ಪೋಷಿಸಿರುವುದಾಗಿ ಮಾಳ್ವಿಯಾ ದೂರಿದ್ದಾರೆ. ಮಮತಾ ಬ್ಯಾನರ್ಜಿ ತನ್ನ ಕಣ್ಗಾವಲಿನಲ್ಲಿ ಅಪರಾಧ ಮತ್ತು ಸುಲಿಗೆ ಮಾಡುವ ಗುಂಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.