ಹೊಸದಿಲ್ಲಿ : ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂಬ ಬೇಡಿಕೆಯನ್ನು ಈಡೇರಿಸದ ಕಾರಣಕ್ಕೆ ಎನ್‌ಡಿಎ ಕೂಟದಿಂದ ಹೊರಬರುವ ಟಿಡಿಪಿ ನಿರ್ಧಾರಕ್ಕೆ ಅನುಗುಣವಾಗಿ ಇಂದು ಗುರುವಾರ ಸಂಜೆ ತೆಲುಗು ದೇಶಂ ಪಕ್ಷದ ಇಬ್ಬರು ಕೇಂದ್ರ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ದಿನದ ಉದ್ದಕ್ಕೂ ಇಂದು ಬಿಜೆಪಿ, ಟಿಡಿಪಿಯನ್ನು ತನ್ನ ತೆಕ್ಕೆಯೊಳಗೆ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದವು.
ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ ಟಿಡಿಪಿ ಸಚಿವರೆಂದರೆ ನಾಗರಿಕ ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ವಿಜ್ಞಾನ-ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ವೈ ಎಸ್ ಚೌಧರಿ.
ಎನ್‌ಡಿಎ ಸಚಿವ ಸಂಪುಟದಿಂದ ಹೊರಬರುವ ಟಿಡಿಪಿಯ ನಿರ್ಧಾರಕ್ಕೆ ಪ್ರತಿಯಾಗಿ ಇಂದು ಬೆಳಗ್ಗೆ ಇಬ್ಬರು ಬಿಜೆಪಿ ಸಚಿವರು ಆಂಧ್ರ ಸಚಿವ ಸಂಪುಟದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತೆಲಂಗಾಣ ನೂತನ ರಾಜ್ಯ ರಚನೆಯಿಂದಾಗಿ ತನಗೆ ತೀವ್ರವಾದ ಆರ್ಥಿಕ ಹೊಡೆತ ಬಿದ್ದಿರುವುದರಿಂದ ವಿಶೇಷ ಸ್ಥಾನಮಾನದ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ಬೆಂಬಲ ಪಡೆಯುವುದು ಅಗತ್ಯವಾಗಿದೆ ಎಂದು ಟಿಡಿಪಿ ಪದೇ ಪದೇ ಹೇಳಿತ್ತು.