Advertisement

ಕಾಂಗ್ರೆಸ್‌ ಭದ್ರಕೋಟೆ ಬೇಧಿಸಲು ಕಮಲ, ದಳ ಕಸರತ್ತು

03:43 PM Apr 02, 2018 | |

ಯಾದಗಿರಿ: ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಬೆಟ್ಟ ಗುಡ್ಡಗಳಿಗೆ ಹೆಸರು ವಾಸಿ. ಗಿರಿಗಳ ನಾಡೆಂದೇ ಪ್ರಸಿದ್ಧಿ ಹೊಂದಿರುವ ಯಾದಗಿರಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದೆ. ಪ್ರತಿವರ್ಷ ಬರಗಾಲ ಹಾಗೂ ಕೈಗಾರಿಕೆಗಳ ಕೊರತೆಯಿಂದಾಗಿ ಇಲ್ಲಿಯ ರೈತರು, ಕೂಲಿಕಾರ್ಮಿಕರು ಗುಳೆ ಹೋಗುವುದು ಮಾತ್ರ ಇನ್ನೂ ತಪ್ಪಿಲ್ಲ. ಮಾಜಿ ಸಚಿವ ದಿ. ವಿಶ್ವನಾಥರೆಡ್ಡಿ ಮುದ್ನಾಳ, ಡಾ.ಎ.ಬಿ. ಮಾಲಕ ರೆಡ್ಡಿ ಅವರನ್ನು ಆರಿಸಿ ಕಳುಹಿಸಿದ ಹೆಗ್ಗಳಿಕೆ ಯಾದಗಿರಿ ಕ್ಷೇತ್ರದ್ದಾಗಿದೆ.

Advertisement

ಯಾದಗಿರಿ ಕೋಟೆ, ಮೈಲಾಪುರ ದೇವಸ್ಥಾನ ಸೇರಿದಂತೆ ಹಲವು ಪ್ರವಾಸಿ ಕೇಂದ್ರಗಳಿವೆ. ಆದರೆ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡಿಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆಗಳ ನಿರ್ಮಾಣ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಂದ ಜನತೆ ವಂಚಿತಗೊಂಡಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರು ಹಾಗೂ ಅಲ್ಪಸಂಖ್ಯಾತರ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು, ಅವರೇ ನಿರ್ಣಾಯಕರಾಗಿದ್ದಾರೆ.
 
ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಐದು ಬಾರಿ ಶಾಸಕರಾಗಿದ್ದಾರೆ.
ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಕಳೆದ ಐದು ವರ್ಷದ ಶಾಸಕರ ಅವಧಿಯಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ನಿರೀಕ್ಷಿಸಿತ ಮಟ್ಟಕ್ಕೆ ಮಾಡಿಲ್ಲ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಪಕ್ಕದ ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗೆ ಹೋಗುವಂತಾಗಿದೆ. ಎಂಬುದು ಸಾರ್ವಜನಿಕರ ದೂರಾಗಿದ್ದು, ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಜಯಕ್ಕಾಗಿ ಕಾತರಿಸುತ್ತಿವೆ. ತಾಲೂಕಿನಲ್ಲಿ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ, ಮತಕ್ಷೇತ್ರದಲ್ಲಿ ಬೃಹತ್‌ ಕೈಗಾರಿಕೆಗಳನ್ನು ತಂದು ಸ್ಥಳೀಯರಿಗೆ ಉದ್ಯೋಗ  –ಕಲ್ಪಿಸುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ಮತದಾರರ ನಿರೀಕ್ಷೆಯಾಗಿದೆ. 
 
ಕ್ಷೇತ್ರದ ಬೆಸ್ಟ್‌ ಏನು?
ನಗರದಲ್ಲಿ 52 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ. ಮಹಿಳಾ ಪದವಿ ಕಾಲೇಜು ಮಂಜೂರು, ಟ್ರಾಫಿಕ್‌ ಪೊಲೀಸ್‌ ಠಾಣೆ, ಮಹಿಳಾ ಪೊಲೀಸ್‌ ಠಾಣೆ ಮಂಜೂರು, ನಗರ ಯೋಜನೆ ಪ್ರಾಧಿಕಾರದಿಂದ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿರುವುದು. ವಡಗೇರಾ ನೂತನ ತಾಲೂಕು ಕೇಂದ್ರ ರಚನೆ ಮಾಡಲಾಗಿದೆ. 

ಕ್ಷೇತ್ರದ ದೊಡ್ಡ  ಸಮಸ್ಯೆ?
ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜು ನಿರ್ಮಾಣ ಆಗಬೇಕಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಸುಧಾರಣೆಯಾಗಿಲ್ಲ. ಹದಗೆಟ್ಟಿರುವ ಗ್ರಾಮೀಣ ರಸ್ತೆಗಳು. ಬರಗಾಲ ಹಾಗೂ ಉದ್ಯೋಗವಿಲ್ಲದೆ ಗುಳೆ ಹೋಗುವ ಕೂಲಿ ಕಾರ್ಮಿಕರು.

ಶಾಸಕರು ಏನಂತಾರೆ?
ಕಳೆದ ಐದು ವರ್ಷದ ಅಧಿಕಾರ ಅವಧಿಯಲ್ಲಿ ಜಿಲ್ಲಾ ಸಂಕೀರ್ಣ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ, ನಗರದಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು, ಸಂಚಾರಿ ಹಾಗೂ ಮಹಿಳಾ ಪೊಲೀಸ್‌ ಠಾಣೆ ಮಂಜೂರು, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿರುವ ಬಗ್ಗೆ ತೃಪ್ತಿ ಇದೆ. 
ಡಾ| ಎ.ಬಿ. ಮಾಲಕರೆಡ್ಡಿ

Advertisement

ಕ್ಷೇತ್ರ ಮಹಿಮೆ
ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ವಿಶೇಷವಾಗಿದೆ. ಯಾದಗಿರಿ ಮತಕ್ಷೇತ್ರದಲ್ಲಿ 1957ರಿಂದ 2013ರವರೆಗೆ 13 ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು, ಕೇವಲ ಎರಡು ಚುನಾವಣೆ ಬಿಟ್ಟು ಉಳಿದ 11 ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಲಿಂಗಾಯತ ಸಮುದಾಯದವರೇ ಶಾಸಕರಾಗಿ ಅಧಿಕಾರ ನಡೆಸಿದ್ದಾರೆ. ಯಾದಗಿರಿ ಮತಕ್ಷೇತ್ರದ ಇತಿಹಾಸ ಗಮನಿಸಿದಾಗ ಮಾಲಕರೆಡ್ಡಿ ಅವರು ಐದು ಬಾರಿ ಗೆಲುವು ಸಾಧಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಶೌಚಾಲಯ, ಚರಂಡಿಗಳ ಸಮಸ್ಯೆ ಹೆಚ್ಚಾಗಿದ್ದು, ಶಾಸಕರು ಇತ್ತ ಕಡೆ ಗಮನ ಹರಿಸಿಲ್ಲ. ಇನ್ನೂ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. 
ವಿಶ್ವನಾಥ ಸಿರವಾರ
 
ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡುವ ಜನಪ್ರತಿನಿಧಿ ಗಳು ನಂತರ ಗ್ರಾಮಗಳ ಕಡೆಗೆ ಮುಖ ಮಾಡಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ಕುಡಿ ಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳು ತಾಂಡವಾಡುತ್ತಿವೆ.
ಉಮೇಶ ಮುದ್ನಾಳ

ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿ ಚರಂಡಿಗಳ ಸ್ವತ್ಛತೆ ಇಲ್ಲ. ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು, ಬಗೆಹರಿಸುವ ಪ್ರಯತ್ನವಾಗಿಲ್ಲ. ಮತಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. 
ಖಂಡಪ್ಪ ದಾಸನ್‌

ಯಾದಗಿರಿ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಜಿಲ್ಲಾ ಸಂಕೀರ್ಣ, ಹೊಸ ಬಸ್‌ ನಿಲ್ದಾಣ, ನೂತನ ತಾಲೂಕು ರಚನೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿವೆ.
ಮಾಣಿಕರೆಡ್ಡಿ ಕುರಕುಂದಾ 

ರಾಜೇಶ್‌ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next