ಮಡಿಕೇರಿ: ಭ್ರಷ್ಟಾಚಾರ ಮತ್ತು ಹೈಕಮಾಂಡ್‌ಗೆ ಕಪ್ಪ ನೀಡಿದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ರಾಜ್ಯ ಸರಕಾರವನ್ನು ವಜಾಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮೋರ್ಚಾದ ಪ್ರಮುಖರಾದ ಎಂ.ಬಿ. ಗಪ್ಪಣ್ಣ, ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿರುವುದಲ್ಲದೆ, ಭ್ರಷ್ಟಾಚಾ ರದಲ್ಲಿ ಮುಳುಗಿದೆಯೆಂದು ಆರೋಪಿಸಿದರು. ಡೈರಿಯೊಂದರ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ಬಣ್ಣ ಬಯಲಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ರಾಜ್ಯಪಾಲರು ಭ್ರಷ್ಟ ಸರಕಾರವನ್ನು ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದಿರುವ ಆರೋಪ ಮತ್ತು ರಾಜ್ಯ ಸರಕಾರದ ವಿರುದ್ಧದ ಆರೋಪಗಳನ್ನು ತನಿಖೆಗೆ ಒಳಪಡಿಸಿ ನೈಜಾಂಶವನ್ನು ಜನತೆಗೆ ತಿಳಿಸುವ ಅಗತ್ಯವಿದೆ ಎಂದರು.
ಯುವಮೋರ್ಚಾದ ರಾಜ್ಯ ಖಜಾಂಚಿ ಶಶಾಂಕ್ ಭೀಮಯ್ಯ ಮಾತನಾಡಿ, ಮಳೆಯ ಕೊರತೆಯಿಂದಾಗಿ ಕೊಡಗಿನಲ್ಲಿ ಕೂಡ ಬರದ ಪರಿಸ್ಥಿತಿ ಇದ್ದು, ಕಾಫಿ ತೋಟಗಳಿಗೆ ನೀರಿನ ಅಭಾವ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಳೆಗಳಿಗೆ ಮೋಟಾರ್ ಅಳವಡಿಕೆಗೆ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮೋಟಾರ್ ಅಳವಡಿಕೆಗೆ ತಡೆಯೊಡ್ಡಿದರೆ ಯುವಮೋರ್ಚಾದ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿಯ ನೀರನ್ನು ರಾಜ್ಯ ಮಾತ್ರವಲ್ಲದೆ, ತಮಿಳುನಾಡು ರಾಜ್ಯಕ್ಕೂ ಹರಿಸಲಾಗುತ್ತಿದೆ. ಆದರೆ, ಕೊಡಗಿನಲ್ಲಿ ನದಿ ನೀರಿನ ಬಳಕೆಗೆ ಅಡ್ಡಿ ಆತಂಕಗಳು ಎದುರಾಗಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ, ಪ್ರಧಾನ ಕಾರ್ಯದರ್ಶಿ ಕೆ. ಮಧು, ಖಜಾಂಚಿ ಕೆ.ಜಿ. ಕೀರ್ತನ್ ಹಾಗೂ ಕಾರ್ಯದರ್ಶಿ ಎಂ. ಶ್ರೀಕಾಂತ್ ಉಪಸ್ಥಿತರಿದ್ದರು.