ಮಂಗಳೂರು: ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ , ಹಲ್ಲೆ ಪ್ರಕರಣದಲ್ಲಿ ಪಿ.ಎಫ್.ಐ. ಹಾಗೂ ಕೆ.ಎಫ್.ಡಿ. ಸಂಘಟನೆಯು ಭಾಗಿಯಾಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ “ಮಂಗಳೂರು ಚಲೋ’ ಬೈಕ್ ಜಾಥಾ ಆಯೋಜಿಸಲಾಗಿದೆ.
ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರತಾಪ್ ಸಿಂಹ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆ ನೇರವಾಗಿ ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ರುಜುವಾತಾಗಿದೆ. ಆದ್ದರಿಂದ ಈ ಸಂಘಟನೆಗಳನ್ನು ಜಾಥಾ ಆಯೋಜಿಸಲಾಗಿದೆ ಎಂದರು.
ಸೆ.5ರಂದು ಹುಬ್ಬಳ್ಳಿಯಿಂದ ಬೈಕ್ ಜಾಥಾ ಆರಂಭ ವಾಗಲಿದ್ದು, ಬೈಂದೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ತಲುಪಲಿದೆ. ಸೆ. 6ರಂದು ಶಿವಮೊಗ್ಗದಿಂದ ಹೊರಡುವ ಬೈಕ್ ಜಾಥಾ ಕಾರ್ಕಳ, ಮೂಡಬಿದಿರೆ ಮೂಲಕ ಮಂಗಳೂರಿಗೆ ಬರಲಿದೆ. ಮೈಸೂರಿನಿಂದ ಸೆ. 6ರಂದು ಹೊರಡುವ ಬೈಕ್ ಜಾಥಾ ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮೂಲಕ ಮಂಗಳೂರಿಗೆ, ಸೆ. 5ರಂದು ಬೆಂಗಳೂರಿನಿಂದ ಹೊರಡುವ ಬೈಕ್ ರ್ಯಾಲಿ ಹಾಸನ, ಸಕಲೇಶಪುರ, ಉಪ್ಪಿನಂಗಡಿ, ಮಾಣಿ ಮೂಲಕ ಮಂಗಳೂರಿಗೆ ಹಾಗೂ ಸೆ.6ರಂದು ಚಿಕ್ಕಮಗಳೂರಿನಿಂದ ಹೊರಡುವ ಬೈಕ್ ಜಾಥಾಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ ಮೂಲಕ ಮಂಗಳೂರಿಗೆ ಆಗಮಿಸಲಿದೆ ಎಂದರು.
ಬೈಕ್ ಜಾಥಾ ಹೊರಡುವ ಪ್ರದೇಶಗಳಲ್ಲಿ ಕೊಲೆಗೀಡಾದ ಹಿಂದೂ ಕಾರ್ಯಕರ್ತರ ಕುಟುಂಬದವರು ಜಾಥಾಗೆ ಚಾಲನೆ ನೀಡಲಿದ್ದಾರೆ. ಪ್ರತೀ ಜಾಥಾ ಹೊರಡುವ ಸಂದರ್ಭ ಸುಮಾರು 1,000 ಕಾರ್ಯ ಕರ್ತರು ಬೈಕ್‌ನಲ್ಲಿ ಹೊರಡುವರು. ಸೆ.7ರಂದು ಈ ಎಲ್ಲ ಜಾಥಾಗಳ ಬೈಕ್‌ಗಳು ಮಂಗಳೂರು ತಲುಪಲಿದ್ದು, ಇಲ್ಲಿ 10,000 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಬೃಹತ್ ಸಮಾರೋಪ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹಿತ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎಂದರು.
“ಮಂಗಳೂರು ಚಲೋ’ ಬೈಕ್ ಜಾಥಾಗೆ ಪೂರ್ವಭಾವಿ ಯಾಗಿ ಸೆ. 4ರಂದು ದ.ಕ. ಜಿಲ್ಲೆಯ ಪ್ರತಿ ಬೂತ್‌ನಲ್ಲಿ ಪ್ರತಿ ಭಟನೆ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶಿವರಂಜನ್, ಯುವಮೋರ್ಚಾ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜಾ, ಪ್ರಮುಖರಾದ ಸಂದೇಶ್ ಶೆಟ್ಟಿ, ಹರೀಶ್ ಉಪಸ್ಥಿತರಿದ್ದರು.