ಕೋಲ್ಕತಾ:ನೂರು ಗ್ರಾಂ ಕೊಕೇನ್ ಹೊಂದಿದ್ದ ಕೋಲ್ಕತಾ ಭಾರತೀಯ ಜನತಾ ಪಕ್ಷದ ಯುವ ಘಟಕದ ನಾಯಕಿಯನ್ನು ಶುಕ್ರವಾರ(ಫೆ.19, 2021) ಬಂಧಿಸಿರುವುದಾಗಿ ಪಶ್ಚಿಮಬಂಗಾಳ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ವಿ.ನಿಲ್ದಾಣ: ಟ್ರಾಲಿ ಬ್ಯಾಗ್ ಚಕ್ರದಲ್ಲಿ 19 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ
ನಾಟಕೀಯ ಬೆಳವಣಿಗೆಯಲ್ಲಿ ಪಶ್ಚಿಮಬಂಗಾಳದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪರ್ಸ್ ನೊಳಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಕಾರಿನೊಳಗೆ ಅಡಗಿಸಿಟ್ಟುಕೊಂಡಿರುವುದಾಗಿ ವರದಿ ಹೇಳಿದೆ.
ಕಾರಿನಲ್ಲಿದ್ದ ಪಮೇಲಾ ಗೆಳೆಯ, ಯುವ ಮೋರ್ಚಾದ ಪ್ರಬೀರ್ ಕುಮಾರ್ ದೇ ಅವರನ್ನು ಕೂಡಾ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂ ಅಲಿಪೋರಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿರುವುದಾಗಿ ವರದಿ ಹೇಳಿದೆ.
ಗೋಸ್ವಾಮಿ ಹಾಗೂ ಆಕೆಯ ಗೆಳೆಯ ಕಾರಿನಲ್ಲಿ ಎನ್ ಆರ್ ಅವೆನ್ಯೂ ಪ್ರದೇಶದ ಕೆಫೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಕಾರಿನ ಸೀಟಿನಡಿ ಪರ್ಸ್ ನೊಳಗೆ ಅಡಗಿಸಿಟ್ಟಿದ್ದ 100 ಗ್ರಾಂ ಕೊಕೇನ್ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಿಕ್ ಭಟ್ಟಾಚಾರ್ಯ, ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಆದರೆ ಕಾರಿನೊಳಗೆ ಬೇರೆ ಯಾರೋ ಕೊಕೇನ್ ಅಡಗಿಸಿಟ್ಟಿದ್ದರೇ? ರಾಜ್ಯದಲ್ಲಿ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿಲ್ಲ. ಪಶ್ಚಿಮಬಂಗಾಳ ಪೊಲೀಸರ ನಿಯಂತ್ರಣದಲ್ಲಿ ಎಲ್ಲವೂ ಇದ್ದು, ಇದರಿಂದಾಗಿ ಏನಾದರು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮಬಂಗಾಳದಲ್ಲಿ ಈ ಘಟನೆ ನಡೆದಿರುವುದು ಅವಮಾನಕರವಾಗಿದೆ. ಇದು ಪಶ್ಚಿಮಬಂಗಾಳದಲ್ಲಿನ ಬಿಜೆಪಿಯ ನೈಜ ಮುಖವಾಗಿದೆ. ಈ ಹಿಂದೆ ಬಿಜೆಪಿ ಕೆಲವು ಮುಖಂಡರು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.