Advertisement

BJP: ಯುವ ಸಾರಥಿ ಹೆಗಲೇರಿದ ಕಮಲ ಪಕ್ಷದ ನೊಗ

12:13 AM Nov 11, 2023 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದ ವರ್ತಮಾನದ ಸವಾಲನ್ನು ಎದುರಿಸುವ ಜೊತೆಗೆ ಮುಂದಿನ ಒಂದೆ ರಡು ದಶಕಗಳ ರಾಜ್ಯ ರಾಜಕಾರಣದ ಚಿತ್ರಣವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಬಿಜೆಪಿಯ ನಾಯಕ ತ್ವವನ್ನು ಪಕ್ಷದ ವರಿಷ್ಠರು ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹೆಗಲಿಗೇರಿಸಿದ್ದಾರೆ.

Advertisement

ನಲವತ್ತೇಳರ ಹರೆಯದ ವಿಜಯೇಂದ್ರ ಅವರು ತಮ್ಮ ತಂದೆ ಬಿ.ಎಸ್‌.ಯಡಿಯೂರಪ್ಪ ಅವರ ನೆರಳಿನಲ್ಲಿ ರಾಜಕಾರಣ ಮಾಡಿದವರು. ಕಳೆದ ನಾಲ್ಕೈದು ವರ್ಷದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಪಟ್ಟುಗಳನ್ನು ವಿಜಯೇಂದ್ರರೇ ಹೆಚ್ಚಾಗಿ ನಿರ್ವಹಿಸುತ್ತಿದ್ದರು. ಅಗತ್ಯ ಇದ್ದಾಗ ಸವಾಲುಗಳನ್ನು ಸ್ವೀಕರಿಸಿ ಬಿಜೆಪಿ ಸರ್ಕಾರವನ್ನು ಸುಭದ್ರಗೊಳಿಸುವಲ್ಲಿ ವಿಜಯೇಂದ್ರ ಪ್ರಮುಖ ಪಾತ್ರ ವಹಿಸಿದ್ದರು.

2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನಡೆದ ಹಲವು ಉಪ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲುವಿನ ದಡಕ್ಕೆ ತಲುಪಿಸುವಲ್ಲಿ ವಿಜಯೇಂದ್ರ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇಡೀ ಮಂಡ್ಯ ಜಿಲ್ಲೆಯಲ್ಲಿ ಕಮಲ ಪಕ್ಷಕ್ಕೆ ನೆಲೆಯಿಲ್ಲದಿದ್ದರೂ ಸಹ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಾರಾಯಣಗೌಡರನ್ನು ಗೆಲ್ಲಿಸಿದ್ದು ವಿಜಯೇಂದ್ರ ಅವರ ಸಂಘಟನಾ ಶಕ್ತಿ ಮತ್ತು ಚಾಣಕ್ಷ್ಯತೆಗೆ ಉದಾಹರಣೆ. ಉಳಿದಂತೆ ಬಸವ ಕಲ್ಯಾಣದಿಂದ ಕಾಂಗ್ರೆಸ್‌ನಿಂದ ಗೆದ್ದಿದ್ದ ನಾರಾಯಣ ರಾವ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶರಣು ಸಲಗಾರ್‌ ಅವರನ್ನು ಗೆಲ್ಲಿಸಿದ್ದು, ಶಿರಾದಿಂದ ಜಾತ್ಯತೀತ ಜನತಾದಳದಿಂದ ಗೆದ್ದಿದ್ದ ಬಿ. ಸತ್ಯನಾರಾಯಣ ನಿಧನರಾದ ಹಿನ್ನೆಲೆಯಲ್ಲಿ ಯುವ ಅಭ್ಯರ್ಥಿ ರಾಜೇಶ್‌ ಗೌಡರನ್ನು ಬಿಜೆಪಿಯಿಂದ ಗೆಲ್ಲಿಸಿಕೊಂಡು ಬಂದಿದ್ದು ವಿಜಯೇಂದ್ರ ಅವರ ಚುನಾವಣಾ ರಾಜಕಾರಣದ ಕೆಲ ಮೈಲಿಗಲ್ಲುಗಳು.

ಕಾನೂನು ಪದವೀಧರರಾಗಿರುವ ವಿಜಯೇಂದ್ರ ಕಿರಿಯ ವಯಸ್ಸಿನಲ್ಲೇ ಪಕ್ಷ ಸಂಘಟನೆಯ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ರಾಜ್ಯ ಬಿಜೆಪಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ 2018ರಲ್ಲಿ ಪಕ್ಷ ಸಂಘಟನಾ ಚಟುವಟಿಕೆಗಳಲ್ಲಿ ವಿಜಯೇಂದ್ರ ತೊಡಗಿಸಿಕೊಂಡಿದ್ದರು. 2020ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

2018ರಲ್ಲೇ ವಿಜಯೇಂದ್ರ ವಿಧಾನ ಸಭಾ ಚುನಾವಣಾ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ 2023ರ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರ ಅವರಿಗೆ ಬಿಟ್ಟುಕೊಡುವ ಮೂಲಕ ಯಡಿಯೂರಪ್ಪ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ನಡೆಸಿದ್ದರು. ಇದೀಗ ಬಿಜೆಪಿ ಹೈಕಮಾಂಡ್‌ ಸಹ ಇದನ್ನು ಒಪ್ಪಿಕೊಂಡಿದ್ದು ಯಡಿಯೂರಪ್ಪ ಸುದೀರ್ಘ‌ ಅವಧಿಗೆ ಅಲಂಕರಿಸಿದ್ದ ಬಿಜೆಪಿ ರಾಜ್ಯಾಧ್ಯಕª ಸ್ಥಾನಕ್ಕೆ ಅವರ ಪುತ್ರನನ್ನೇ ನೇಮಿಸಿದೆ.

Advertisement

ನನ್ನ ಮೇಲೆ ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಅವರಿಗೆ ಕೃತಜ್ಞತೆಗಳು. ಇದನ್ನು ದೊಡ್ಡ ಅವಕಾಶ ಎಂದು ತಿಳಿದು, ರಾಜ್ಯ ದಲ್ಲಿ ದೃಢ ಸಂಘಟನೆಯನ್ನು ಕಟ್ಟಿ ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷ ಮತ್ತು ಸ್ಥಾಪಕರ ಧ್ಯೇಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ.
ಬಿ. ವೈ. ವಿಜಯೇಂದ್ರ, ಬಿಜೆಪಿಯ ನಿಯೋಜಿತ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next