ಯಾದಗಿರಿ: ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಶಿವರಾಮ ಕಾರಂತ್ ಬಡಾವಣೆ ಡಿನೋಟಿಫಿಕೇಷನ್ ಕುರಿತು ಸುಳ್ಳು ಆರೋಪ ಮಾಡಿ ಎಸಿಬಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ ವಿರುದ್ಧ ಜಿಲ್ಲಾ ಬಿಜೆಪಿ ಕಾರ್ಯಕರ್ತರು ರವಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡ ಆಡುತ್ತಿದೆ. ಈಚೆಗೆ ಇಂಧನ ಸಚಿವರ ಮನೆ ಹಾಗೂ ಕಚೇರಿ ಮೇಲೆ ಐ.ಟಿ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಈಗ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಸುಳ್ಳು ಕೇಸು ಹಾಕಿ ರಾಜಕೀಯ ವೈರತ್ವ ಮಾಡುತ್ತಿರುವುದು ರಾಜ್ಯದ ಜನರ ಮುಂದೆ ಬಟಾ ಬಯಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಗ್ರಹಿಸಿದರು. ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿ, ಭ್ರಷ್ಟ ಸರ್ಕಾರ ಇಡೀ ದೇಶದಲ್ಲೇ ಯಾವ ರಾಜ್ಯದಲ್ಲಿಯೂ ಇಲ್ಲ. ದಲಿತರು ಮತ್ತು ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಕೊಡುವುದಾಗಿ ಸುಳ್ಳು ಹೇಳಿ ಅಧಿ ಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಎಲ್ಲಾ ರಂಗಗಳಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು. ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಮಾತನಾಡಿ, ಕೆಲವೇ ದಿನಗಳಲ್ಲಿ ರಾಜ್ಯ ಸರಕಾರವನ್ನು ಮನೆಗೆ ಕಳುಹಿಸುವ ಕೆಲಸ ರಾಜ್ಯದ ಜನತೆ ಮಾಡುತ್ತಾರೆ. ಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರ ಎಲ್ಲಾ ಸಮಾಜದ ವರ್ಗದವರಿಗೆ ಸಮಬಾಳು ಸಮಪಾಲು ಎನ್ನುವ ಸೂತ್ರದಡಿಯಲ್ಲಿ ಕೆಲಸ ಮಾಡಲಿದೆ. ಮುಂಬರುವ ಚುನಾವಣೆಗಳಲ್ಲಿ ಸಿದ್ರಾಮಯ್ಯನವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಮಾಜಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಹಾಕಿರುವ ಸುಳ್ಳು ಕೇಸನ್ನು ತಕ್ಷಣವೇ ವಾಪಸು ಪಡೆಯಬೇಕು. ಇಲ್ಲದಿದ್ದರೆ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಸಾಯಿಬಣ್ಣ ಬೋರಬಂಡ, ಖಂಡಪ್ಪ ದಾಸನ, ಶರಣಗೌಡ ಬಾಡಿಯಾಳ, ಸಿದ್ದಣ್ಣಗೌಡ ಕಾಡಂನೋರ್, ಎಸ್.ಪಿ ನಾಡೇಕರ್, ಶ್ರೀಕಾಂತ ಸುಬೇದಾರ, ಭೀಮರೆಡ್ಡಿ ಕುರುಕುಂದಿ ಇತರರು ಇದ್ದರು.