Advertisement

ಬಿಜೆಪಿ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

12:25 PM Mar 12, 2017 | |

ದಾವಣಗೆರೆ: ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಸಾಧಿಸಿದ ಮೇಲುಗೈ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಕೆ.ಬಿ. ಬಡಾವಣೆಯಲ್ಲಿರುವ ಪಕ್ಷದ ಕಚೇರಿಯಿಂದ ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಪಟಾಕಿ, ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

Advertisement

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪರ ಘೋಷಣೆ ಕೂಗಿದರು. ಈಗ ಉತ್ತರ ಪ್ರದೇಶ, ಮಂದೆ ಕರ್ನಾಟಕದಲ್ಲಿ ನಮ್ಮದೇ ಆಡಳಿತ ಎಂದು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ಇದು ಪ್ರಧಾನಿ ನರೇಂದ್ರಮೋದಿಯವರೆಗೆ ಸಂದ ಗೆಲುವಾಗಿದೆ. 

ಗರಿಷ್ಠ ಮುಖಬೆಲೆಯ ನೋಟ್‌ ಬ್ಯಾನ್‌ ನಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆಎಂಬ ವಿಪಕ್ಷಗಳ ಟೀಕೆ ಸುಳ್ಳು ಎಂಬುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಜನಪರ ಯೋಜನೆಗಳಿಂದಾಗಿ ಉತ್ತರ ಪ್ರದೇಶ, ಉತ್ತರ ಖಾಂಡ್‌, ಮಣಿಪುರದ ಜನತೆ ಮೋದಿಯವರನ್ನುಬೆಂಬಲಿಸಿದ್ದಾರೆ ಎಂದರು. 

ಹೋಳಿ ಹಬ್ಬದ ಕೊಡುಗೆಯಾಗಿ ಬಿಜೆಪಿಗೆ ಈ ಗೆಲುವು ಸಿಕ್ಕಿದೆ. ಈ ಚುನಾವಣೆಯಿಂದ ಹೊಸ ಯುಗ ಆರಂಭವಾದಂತಾಗಿದೆ. ನರೇಂದ್ರಮೋದಿ ನಮ್ಮ ದೇಶದ ಹೆಮ್ಮೆಯ ಪುತ್ರರಾಗಿ ಹೊರಹೊಮ್ಮಿದ್ದಾರೆ. ಗೋವಾ ಚುನಾವಣೆಯಲ್ಲಿ  ಕೊಂಚ ಹಿನ್ನಡೆಯಾಗಿದೆ. ಆದರೆ, ಇತರೆ ಶಾಸಕರ ಬೆಂಬಲದಿಂದ ಅಲ್ಲೂ ಸಹ ನಾವು ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ದೂಳಿಪಟವಾಗಿತ್ತು. ಇದೀಗ 5 ರಾಜ್ಯಗಳ ಚುನಾವಣೆಯಲ್ಲೂ ಮುಖಭಂಗ ಅನುಭವಿಸಿದೆ. ನರೇಂದ್ರ ಮೋದಿಯವರ ಆಡಳಿತ ಮೆಚ್ಚಿರುವ ಜನತೆ ನಮ್ಮ  ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

Advertisement

ವಿಪಕ್ಷಗಳು ಸುಳ್ಳು ಆರೋಪ ಮಾಡಿ, ಮೋದಿಯವರ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರು. ಆದರೆ, ಜನ ಮೋದಿಯವರ ಬೆಂಬಲಕ್ಕೆ ಇದ್ದಾರೆ ಎಂಬುದು ಸಾಬೀತಾಗಿದೆ ಎಂದರು. ಇದೇ ರೀತಿ ಮುಂದಿನ ನಮ್ಮ ರಾಜ್ಯದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿ ಬರಲಿವೆ.

ಯಡಿಯೂರಪ್ಪನವರು ಹೇಳಿದಂತೆ 150ಕ್ಕೂ ಹೆಚ್ಚು ಸ್ಥಾನ ನಾವು ಗೆಲ್ಲುತ್ತೇವೆ.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ.  ಕಾಂಗ್ರೆಸ್‌ನ ಭ್ರಷ್ಟ ಸರ್ಕಾರ ತೊಲಗಲಿದೆ ಎಂದು ಅವರು ಹೇಳಿದರು. ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ, ಜಿಪಂ ಅಧ್ಯಕ್ಷೆ ಉಮಾ ರಮೇಶ್‌,

ಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌, ಮುಖಂಡರಾದ ಜಯಪ್ರಕಾಶ್‌ ಕೊಂಡಜ್ಜಿ, ಆನಂದಪ್ಪ, ಎಚ್‌.ಎನ್‌. ಶಿವಕುಮಾರ್‌,ಬಿ. ರಾಜಶೇಖರ್‌, ಪಿ.ಸಿ. ಶ್ರೀನಿವಾಸ್‌, ಎಚ್‌.ಸಿ. ಜಯಮ್ಮ, ಕೆ.ಪಿ. ಕಲ್ಲಿಂಗಪ್ಪ, ಹೇಮಂತಕುಮಾರ್‌, ಶಿವನಗೌಡ ಪಾಟೀಲ್‌, ಪ್ರಭು ಕಲಬುರ್ಗಿ ಇತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next