ನವದೆಹಲಿ : ಬಿಜೆಪಿ ಯುವಮೋರ್ಚಾ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಎದುರು ನಡೆಸಿದ ಉಗ್ರ ಪ್ರತಿಭಟನೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
‘ದ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತಾಗಿ ದೆಹಲಿ ವಿಧಾನ ಸಭೆಯಲ್ಲಿ ತೆರಿಗೆ ವಿನಾಯಿತಿ ವಿಚಾರದಲ್ಲಿ ಲೇವಡಿ ಮಾಡಿ ನಗೆಯಾಡಿದುದನ್ನು ಖಂಡಿಸಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆ ಮುಂದೆ ಮಧ್ಯಾಹ್ನ ನಡೆದ ಪ್ರತಿಭಟನೆಯ ವೇಳೆ ಜಮಾವಣೆ ಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಕೆಡವಿ ಒಳಗೆ ನುಗ್ಗಿದ್ದಾರೆ. ಗೇಟ್ ಗಳನ್ನು ಮುರಿಯಲಾಗಿದ್ದು, ಸಿಸಿಟಿವಿ ಹಾನಿಗೊಳಿಸಲಾಗಿದೆ. ಗೇಟ್ ಮತ್ತು ಗೋಡೆಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗಿದೆ.
ತೇಜಸ್ವಿ ಸೂರ್ಯ ಆಕ್ರೋಶ
ದೇಶದ ಹಿಂದೂಗಳಿಗೆ ಮಾಡಿದ ಅವಮಾನಕ್ಕೆ ಕೇಜ್ರಿವಾಲ್ ಕ್ಷಮೆ ಯಾಚಿಸಬೇಕು ಮತ್ತು ಅವರು ಕ್ಷಮೆ ಕೇಳುವವರೆಗೂ ಯುವಮೋರ್ಚಾ ಅವರನ್ನು ಬಿಡುವುದಿಲ್ಲ. ದೇಶದ ಹಿಂದೂಗಳನ್ನು ಅವಮಾನಿಸುವ ಕೇಜ್ರಿವಾಲ್ ಅವರಲ್ಲಿ ನಾವು ಇಂದು ಕಾಶ್ಮೀರಿ ಹಿಂದೂಗಳನ್ನು ಕಗ್ಗೊಲೆ ಮಾಡಿದ ಸಮಾಜವಿರೋಧಿಗಳು ಮತ್ತು ಭಯೋತ್ಪಾದಕರನ್ನು ಕಾಣುತ್ತೇವೆ ಎಂದು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆಕ್ರೋಶ ಹೊರ ಹಾಕಿದ್ದಾರೆ.
ಕೇಜ್ರಿವಾಲ್ ಕೊಲೆಗೆ ಯತ್ನ
ಎಎಪಿಯ ಗೆಲುವು ಮತ್ತು ಪಂಜಾಬ್‌ನಲ್ಲಿ ಬಿಜೆಪಿಯ ಸೋಲಿನಿಂದಾಗಿ, ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲೆ ಮಾಡಲು ಬಯಸಿದೆ. ಬಿಜೆಪಿ ಗೂಂಡಾಗಳನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಕರೆದೊಯ್ದಿದ್ದಾರೆ. ಸಿಎಂ ನಿವಾಸದ ಎದುರಿನ ಸಿಸಿಟಿವಿ ಕ್ಯಾಮರಾ, ತಡೆಗೋಡೆ ಒಡೆದಿದ್ದಾರೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಿಡಿ ಕಾರಿದ್ದಾರೆ.
ಬಿಜೆಪಿಯವರು ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅವರು ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇಂದಿನ ಘಟನೆ ಸಿಎಂ ಹತ್ಯೆಗೆ ಬಿಜೆಪಿಯ ಪೂರ್ವಯೋಜಿತ ಯೋಜನೆ ಎಂದು ಸಿಸೋಡಿಯಾ ಆಕ್ರೋಶ ಹೊರ ಹಾಕಿದ್ದಾರೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಹೀನಾಯ ಸೋಲಿನಿಂದಾಗಿ ಬಿಜೆಪಿಯ ಸಿಟ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪೊಲೀಸರ ಸಮ್ಮುಖದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ಮೇಲಿನ ದಾಳಿ ಹೇಡಿತನದ ಕೃತ್ಯ.ಬಿಜೆಪಿಗೆ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಮೇಲೆ ಭಯ ಇದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.
ಆಘಾತಕಾರಿಯಾಗಿದ್ದು,ಬಿಜೆಪಿ ಕಾರ್ಯಕರ್ತರು ದಾಳಿ ನಡೆಸುತ್ತಿದ್ದಾಗ ದೆಹಲಿ ಪೋಲೀಸರು ಏನು ಮಾಡುತ್ತಿದ್ದರು. ಈ ಕೆಲಸಕ್ಕೆ ಅಮಿತ್ ಶಾ ಅವರ ಕಚೇರಿಯಿಂದ ಆದೇಶವಿದೆಯೇ? ಬಿಜೆಪಿ ವಿಧ್ವಂಸಕರನ್ನು ಬೆಂಬಲಿಸುವುದೇ ಎಂದು ಆಪ್ ನಾಯಕರು ಪ್ರಶ್ನಿಸಿದ್ದಾರೆ.