ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಈಗಿರುವ ಬಿಜೆಪಿ ಅಭ್ಯರ್ಥಿ ಕುಮಟಳ್ಳಿ ಅವರನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿನಿಂದ ಅಥಣಿಗೆ ಬಂದಿಳಿಯುತ್ತಿದ್ದಂತೆ ಭಾನುವಾರ ಅವರ ನಿವಾಸ ಎದುರು ಜಮಾಯಿಸಿದ ಬೆಂಬಲಿಗರು ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತರು. ಈ ವೇಳೆ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕೂಡ ಸವದಿ ನಿವಾಸದೊಳಗೆ ಇದ್ದರು. ಕುಮಟಳ್ಳಿಗೆ ಟಿಕೆಟ್ ನೀಡಿದ್ದನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಾವು ಬೆಂಬಲಿಸುವುದಿಲ್ಲ ಎಂದು ಬೆಂಬಲಿಗರು ಘೋಷಣೆ ಕೂಗಿದರು.
ಶೆಟ್ಟರ್ ಹಾಗೂ ಸವದಿ ಕಾರ್ಯಕರ್ತರ ಮನವೊಲಿಸಿಲು ಯತ್ನಿಸಿದರೂ ಪ್ರಯೋ ಜನವಾಗಲಿಲ್ಲ. ಅನೇಕ ವರ್ಷಗಳಿಂದ ಬಿಜೆಪಿಗೆ ಭದ್ರ ಬುನಾದಿ ಹಾಕಿರುವ ಕ್ಷೇತ್ರದಲ್ಲಿ ಸವದಿಗೆ ಟಿಕೆಟ್ ನೀಡದಿರುವುದು ಬೇಸರ ತಂದಿದೆ. ಬಿಜೆಪಿ ಬೆಳೆಸಿದ ಶ್ರೇಯಸ್ಸು ಸವದಿ ಅವರಿಗೆ ಸಲ್ಲುತ್ತದೆ. ಈಗ ಬಂದವರಿಗೆ ಟಿಕೆಟ್ ಕೊಟ್ಟಿದ್ದು ತಪ್ಪು. ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ಕೀಳಾಗಿ ಮಾತನಾಡಿರುವ ಮಹೇಶ ಕುಮಟಳ್ಳಿ ಈಗ ಬಿಜೆಪಿಗೆ ಬಂದು ಫೋಸ್ ಕೊಡುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಸವದಿ ಬೆಂಬಲಿಗರು ಇದನ್ನು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸವದಿ ಹಾಗೂ ಶೆಟ್ಟರ್ ಅವರನ್ನು ಹೊರಗೆ ಬಿಡದೆ ಮನೆ ಎದುರೇ ನಿಲ್ಲಿಸಿದರು. ಶೆಟ್ಟರ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಸವದಿ ಮನವೊಲಿಸಿ ಗೇಟ್ ಹೊರಗೆ ಶೆಟ್ಟರ್ ಅವರನ್ನು ಬಿಟ್ಟು ಕಾರಿನಲ್ಲಿ ಕಳುಹಿಸಿದರು.
ಸವದಿ ಅವರನ್ನು ಹೊರಗೆ ಬಿಡದಿದ್ದಾಗ ಕಾರ್ಯಕರ್ತರ ಕೈ ಮುಗಿದ ಸವದಿ, “ಬಿಡ್ರಪ್ಪಾ ಸಾಕು. ಪಕ್ಷದ ನಿರ್ಧಾರಕ್ಕೆ ತಲೆ ಬಾಗಬೇಕು’ ಎಂದು ಹೇಳಿ ಹೊರ ನಡೆದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ನಿವಾಸದ ಎದುರು ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ, ಶಾಸಕರಾದ ಪಿ.ರಾಜೀವ್, ದುರ್ಯೋಧನ ಐಹೊಳೆ ಸೇರಿ ಅನೇಕರು ಇದ್ದರು.
ಕುಮಟಳ್ಳಿಗೆ ಅಶ್ಲೀಲವಾಗಿ ನಿಂದನೆ: ಪ್ರತಿಭಟನೆ ವೇಳೆ ಕಿಡಿಗೇಡಿಗಳು ಕುಮಟಳ್ಳಿ ಅವರಿಗೆ ಅಶ್ಲೀಲವಾಗಿ ನಿಂದನೆ ಮಾಡಿದ್ದರಿಂದ ಕುಮಟಳ್ಳಿ ಕೆಲ ಸಮಯ ಮುಜಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಯಿತು.