ಕೋಲ್ಕತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮಬಂಗಾಳಕ್ಕೆ ಎರಡು ದಿನಗಳ ಕಾಲ ಪ್ರವಾಸದಲ್ಲಿರುವ ಸಂದರ್ಭದಲ್ಲಿಯೇ ಶುಕ್ರವಾರ (ಮೇ 06) ಬೆಳಗ್ಗೆ ಉತ್ತರ ಕೋಲ್ಕತಾದ ಕಾಶೀಪುರ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇಂದು ಮಧ್ಯಾಹ್ನ ಶಾ ಮೃತ ಕಾರ್ಯಕರ್ತನ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಪತ್ನಿ, ಮಕ್ಕಳನ್ನು ಸ್ಫೋಟಿಸಿ ಕೊಂದ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತಿ!
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಶವ ಘೋಷ್ ಬಗಾನ್ ಪ್ರದೇಶದಲ್ಲಿರುವ ಹಳೆಯ ಕಟ್ಟಡವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನನ್ನು ಆಡಳಿತಾರೂಢ ಟಿಎಂಸಿ ಕೊಲೆಗೈದಿರುವುದಾಗಿ ಬಿಜೆಪಿ ಆರೋಪಿಸಿದೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದೆ. ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮಬಂಗಾಳದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಮಧ್ಯಾಹ್ನ ಚೌರಾಸಿಯಾ ನಿವಾಸಕ್ಕೆ ಶಾ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
Related Articles
ಚೌರಾಸಿಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಇಂದು ಬೆಳಗ್ಗೆ ಅವರ ಶವ ಪತ್ತೆಯಾಗಿದೆ ಎಂದು ಬಿಜೆಪಿ ವಕ್ತಾರ ಸಮೀಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಚೌರಾಸಿಯಾ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಟಿಎಂಸಿ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಟಿಎಂಸಿ ಸಂಸದ ಶಂತನು ಸೇನ್ ಹೇಳಿದ್ದು, ಮತ್ತೊಂದೆಡೆ ಚೌರಾಸಿಯಾ ಕುಟುಂಬ ಸದಸ್ಯರು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.