ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮೇಘಶ್ರೀ ಹಾಗೂ ಅಮೃತಾ ಆಯ್ಕೆಯಾದರು. ನಂಜೇದೇವನಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅವರ ಸ್ವ ಗ್ರಾಮವಾಗಿದ್ದು, ಡಿಸಿಸಿ ಅಧ್ಯಕ್ಷರ ತವರಿನಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ತನ್ನ ಸಾಮರ್ಥ್ಯ ತೋರಿದೆ.
ನಂಜೇದೇವನಪುರ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮೇಘಶ್ರೀ ಪುಟ್ಟನಂಜಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಮೃತಾ ಹಾಗೂ ಕಾಂಗ್ರೆಸ್ ಬೆಂಬಲಿತ ಶಶಿಕಲಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಮತದಾನದಲ್ಲಿ ಅಮೃತಾ 12 ಮತಗಳನ್ನು ಪಡೆದರೆ ಶಶಿಕಲಾ 8 ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತವಾಯಿತು. ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಾದೇಶ್, ಜೆ. ಆಧಿಕೃತವಾಗಿ ಅಮೃತಾ ಅವರ ಆಯ್ಕೆಯನ್ನು ಘೋಷಣೆ ಮಾಡಿದರು.
ಇದನ್ನೂ ಓದಿ:ಸುಬ್ರಹ್ಮಣ್ಯ: ನಾಯಿಯನ್ನು ಓಡಿಸಿಕೊಂಡು ನಾಡಿಗೆ ಬಂದ ಚಿರತೆ ಶೌಚಾಲಯದಲ್ಲಿ ಬಂಧಿ!
ನಂಜೇದೇವನಪುರವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿಯವರ ಸ್ವಗ್ರಾಮ. ಅಲ್ಲದೇ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜಿ. ಪ್ರಶಾಂತ್ ಅವರ ಸ್ವಗ್ರಾಮವೂ ಹೌದು. ಬಿಜೆಪಿ ತಾಲೂಕು ಅಧ್ಯಕ್ಷ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನಡುವಿನ ಪೈಪೋಟಿಯಲ್ಲಿ ಬಿಜೆಪಿ ಜಯಗಳಿಸಿದೆ!
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಜಿ. ಪ್ರಶಾಂತ್, ಮುಖಂಡರಾದ ತಮ್ಮಡಹಳ್ಳಿ ಸುಬ್ಬನಾಯಕ, ರವಿ, ಬಸವನಾಯಕ, ಕಾಳನಹುಂಡಿ ಪಟೇಲ್ ಪರಶಿವಪ್ಪ, ಮಹೇಶ್, ದೊಡ್ಡಬಸಪ್ಪ, ಎನ್.ಬಿ. ಮಹೇಶ್, ಎಂ. ಬಸವಣ್ಣ, ಚನ್ನಬಸಪ್ಪ, ಶಿವರಾಜ್, ಗ್ರಾ. ಪಂ. ಸದಸ್ಯರಾದ ಗುರುರಾಜ್, ಪ್ರೇಮಾ, ಮಹದೇವಸ್ವಾಮಿ, ಮಹದೇವೇಗೌಡ, ಮಂಜುಳಾ ಮಾ. ಬಸವಣ್ಣ, ಕಾರ್ಯಕರ್ತರು ಇದ್ದರು.