ಹುಬ್ಬಳ್ಳಿ: ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ರಾಮಚಂದ್ರ ಜಾಧವ ಸೋಮವಾರ ಅವಿರೋಧವಾಗಿ ಆಯ್ಕೆಗೊಂಡರು.
ಬಿಜೆಪಿ ಬೆಂಬಲಿತ ಉಣಕಲ್ಲ ಕ್ಷೇತ್ರದ ಸದಸ್ಯ ರಾಮಚಂದ್ರ ಜಾಧವ ಹೊರತಾಗಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡರ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ ಮಧ್ಯಾಹ್ನ 2:15ರ ವರೆಗೆ ನಾಮ ನಿರ್ದೇಶನ ಪತ್ರಗಳ ಪರಿಶೀಲನೆ ನಿಗದಿಪಡಿಸಲಾಗಿತ್ತು.
ರಾಮಚಂದ್ರ ಜಾಧವ 2 ನಾಮಪತ್ರ ಸಲ್ಲಿಸಿದ್ದರು. ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಲಿಲ್ಲ. ಮಧ್ಯಾಹ್ನ 2:30ಕ್ಕೆ ರಾಮಚಂದ್ರ ಜಾಧವ ಅವರನ್ನು ಅಧ್ಯಕ್ಷರೆಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು. ರಾಮಚಂದ್ರ ಜಾಧವ ನೂತನ ಅಧ್ಯಕ್ಷರೆಂದು ಘೋಷಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಹಾಗೂ ರಾಮಚಂದ್ರ ಜಾಧವ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಎಪಿಎಂಸಿಯಲ್ಲಿ 14 ಚುನಾಯಿತ ಪ್ರತಿನಿಧಿಗಳಿದ್ದು, 3 ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಕನಿಷ್ಟ 9 ಮತಗಳನ್ನು ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಎಪಿಎಂಸಿ ಉಪಾಧ್ಯಕ್ಷೆಯಾಗಿ ಗಿರಿಜವ್ವಾ ಬೆಂಗೇರಿ ಮುಂದುವರಿಯಲಿದ್ದಾರೆ.
ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ರವಿವಾರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಹಿರಿಯ ಸದಸ್ಯ ರಾಮಚಂದ್ರ ಜಾಧವ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಯಿತು. ಮೂವರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 8 ಜನ ಸದಸ್ಯರು ಬಿಜೆಪಿ ಬೆಂಬಲಿತರಿದ್ದರು. ಇದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಹುದ್ದೆಗೇರುವುದು ಸುಲಭವಾಯಿತು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ನಾಮನಿರ್ದೇಶನ: ರಾಜ್ಯ ಸರಕಾರ ಕಮಲಾಕ್ಷಿ ಬಸಾಪುರ, ಶಿವಯೋಗಿ ಮಂಟೂರಶೆಟ್ರಾ, ಪರಸಪ್ಪ ಮುಳಗುಂದ ಅವರನ್ನು ನೇಮಕ ಮಾಡಿದೆ.