ಶಹಾಬಾದ: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಉಡಿ ತುಂಬುವ ಕಾರ್ಯಕ್ರಮವಾಗಿ ಮಾರ್ಪಟ್ಟು ನಗೆಪಾಟಲಿಗೆ ಗುರಿಯಾಯಿತು.
ಬೆಳಗ್ಗೆ 11:00ಕ್ಕೆ ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮೊದಲು ನಿರೀಕ್ಷೆಗೂ ಮೀರಿ ಸುಮಾರು 2000ಕ್ಕೂ ಹೆಚ್ಚಿನ ಮಹಿಳೆಯರು ಆಗಮಿಸಿದ್ದರು. ಇದರಿಂದಾಗಿ ಕುರ್ಚಿಗಳು ಸಿಗದೇ ಪರದಾಡಿದ ಪ್ರಸಂಗ ನಡೆಯಿತು. ಕಾರ್ಯಕರ್ತರು ಕುರ್ಚಿಗಳನ್ನು ತರಿಸಿದರೂ ಅವು ಸಹ ಕಡಿಮೆಯಾದವು.
ಹಾಗಾಗಿ ಮಹಿಳೆಯರು ಸಭಾಂಗಣದ ಪಕ್ಕದಲ್ಲಿರುವ ಊಟದ ಕೋಣೆಯಲ್ಲಿ ಸೇರಿದರು. ಆದರೆ ಅಲ್ಲಿ ಆಸನ ಇಲ್ಲದ್ದರಿಂದ ಅಕ್ರೋಶವ್ಯಕ್ತಪಡಿಸಿದರು. ಇನ್ನೂ ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಮಧ್ಯಪ್ರದೇಶದ ಯುವಜನ ಸೇವೆ ಹಾಗೂ ಕ್ರೀಡಾ ಖಾತೆ ಸಚಿವೆ ಯಶೋಧರಾ ರಾಜೆ ಸಿಂಧಿಯಾ ನೇರವಾಗಿ ಹೋದರು.
ಸಭೆ ನಡೆಯುತ್ತಿದ್ದಂತೆ ಆಮಂತ್ರಣವಿಲ್ಲದ ಅನೇಕ ಮುಖಂಡರು ವೇದಿಕೆ ಹಂಚಿಕೊಂಡರು. ಆದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳಿ, ಶಾಸಕ ದತ್ತಾತ್ರೇಯ ಪಾಟೀಲ, ಶಶೀಲ ನಮೋಶಿ, ಮಾಜಿ ಶಾಸಕ ವಾಲ್ಮೀಕಿ ನಾಯಕ ಸೇರಿದಂತೆ ಇತರ ಗಣ್ಯರು ಆಸನಗಳು ಸಿಗದೇ ವೇದಿಕೆ ಪಕ್ಕದಲ್ಲಿ ನಿಂತಿದ್ದರಿಂದ ಕಾರ್ಯಕ್ರಮ ಆಯೋಜಕರು ತುಸು ಗಲಿಬಿಲಿಗೊಂಡರು.
ಸ್ವಲ್ಪ ಸಮಯದ ನಂತರ ವೇದಿಕೆ ಮೇಲಿದ್ದ ಕೆಲವು ಮುಖಂಡರನ್ನು ಹಿಂದಕ್ಕೆ ಕೂಡಿಸಿ ಆಸನಗಳ ವ್ಯವಸ್ಥೆ ಮಾಡಿದರು. ಆಸನಗಳು ಸಿಗದೇ ಇದ್ದಿದ್ದರಿಂದ ವರದಿಗಾರರು ಸಹ ನಿಂತುಕೊಂಡೆ ವರದಿ ಬರೆದುಕೊಳ್ಳುವ ಪ್ರಸಂಗ ಎದುರಾಯಿತು. ಕೇಂದ್ರದ ಮೋದಿ ಸರ್ಕಾರದ ಮೂರು ವರ್ಷದ ಅವ ಧಿಯಲ್ಲಿ ಕೈಗೊಂಡ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಗದ್ದಲ ಹಾಗೂ ಉಡಿ ತುಂಬುವುದಕ್ಕೆ ಮಾತ್ರ ಸಿಮೀತವಾದಂತೆ ಕಂಡು ಬಂತು.