ಸುರತ್ಕಲ್, ಎ. 2: ಭಾರತವು ಪರಮ ವೈಭವವನ್ನು ತಲುಪಲು ಈಗಾಗಲೇ ದೊರೆತಿರುವಂತಹ ವ್ಯವಸ್ಥೆಯನ್ನು ಉಳಿಸಿ ಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದಕ್ಕೆ ಪೂರಕವಾಗಿ ತಾಯಂದಿರು ಈ ಸಂದರ್ಭದಲ್ಲಿ ಕಣಕ್ಕಿಳಿದು ಶ್ರಮಿಸ ಬೇಕಾಗಿದೆ ಎಂದು ಶಾಸಕ ಡಾ| ಭರತ್
ಶೆಟ್ಟಿ ವೈ. ಹೇಳಿದರು.
ಸುರತ್ಕಲ್ ಮಹಾಶಕ್ತಿಕೇಂದ್ರ 2ರ ವತಿಯಿಂದ ನಡೆದ ಮಹಿಳಾ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಪ್ರಧಾನಿ ಮೋದಿ ಬೇಟಿ ಬಚಾವೋ ಬೇಟಿ ಪಡಾವೋ ಸಹಿತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಇಂದು
ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರ ಜತೆಗೆ ಬಾಹ್ಯಾಕಾಶವೂ ಸಹಿತ ಎಲ್ಲೆಡೆ ಸಾಧನೆ ಮಾಡುತ್ತಿರುವ ಮಹಿಳೆಯರು ಸಂತೋಷದಿಂದ ಬದುಕು ನಡೆಸುವಂತಾಗಿದೆ ಎಂದರು.
ದ.ಕ. ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದ ನಿವೃತ್ತ ಪ್ರಾಂಶುಪಾಲರಾದ ಡಾ| ಯಶೋದಾ ರಾಮಚಂದ್ರ, ಮಹಿಳಾ ಮೋರ್ಚಾ ಉತ್ತರ ಮಂಡಲದ ಅಧ್ಯಕ್ಷೆ ಬಬಿತಾ ರವೀಂದ್ರ, ಮಹಾಶಕ್ತಿಕೇಂದ್ರ ಅಧ್ಯಕ್ಷ ವಿಟಲ ಸಾಲ್ಯಾನ್ ಉಪಸ್ಥಿತರಿದ್ದರು. ತಾರಾ ಧನರಾಜ್ ಸ್ವಾಗತಿಸಿ , ಬೇಬಿ ಪದ್ಮನಾಭ ವಂದಿಸಿದರು. ವಿಲಾಸಿನಿ ಭಟ್ ನಿರೂಪಿಸಿದರು.