Advertisement

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌: ಶಿಸ್ತುಕ್ರಮ ಕೈಬಿಟ್ಟ ಬಿಜೆಪಿ!

01:20 AM Apr 23, 2017 | Team Udayavani |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮತ್ತು ಪಕ್ಷದ ಆದೇಶ ಉಲ್ಲಂ ಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ನಾಲ್ವರ ವಿರುದ್ಧ ಕೈಗೊಂಡಿದ್ದ ಶಿಸ್ತು ಕ್ರಮವನ್ನು ಬಿಜೆಪಿ ಕೈಬಿಟ್ಟಿದೆ. ಇತ್ತೀಚೆಗಷ್ಟೇ ಬಿಜೆಪಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

Advertisement

ಅಲ್ಲದೆ ಅಸಮಾಧಾನಕ್ಕೆ ಮತ್ತೂಂದು ಕಾರಣವಾದ ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಕುರಿತು ಪರಿಶೀಲಿಸಲೂ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಶಿಸ್ತು ಮತ್ತು ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಮಾಜಿ ಸಚಿವ ತುಮಕೂರಿನ ಸೊಗಡು ಶಿವಣ್ಣ ಮತ್ತು ಬಿಜೆಪಿ ಮುಖಂಡ ಎಂ.ಬಿ.ನಂದೀಶ್‌ ಅವರಿಗೆ ನೀಡಿರುವ ಶೋಕಾಸ್‌ ನೋಟಿಸ್‌ ಹಿಂಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

ಅದೇ ರೀತಿ ಪಕ್ಷದ ಆದೇಶ ಮೀರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಪಾಲ್ಗೊಂಡ ಕಾರಣಕ್ಕೆ ಬೆಂಗಳೂರಿನ ಮಾಜಿ ಮೇಯರ್‌ ಡಿ.ವೆಂಕಟೇಶ್‌ ಮೂರ್ತಿ ಅವರ ಅಮಾನತು ಆದೇಶವನ್ನು ವಾಪಸ್‌ ಪಡೆಯುವಂತೆ ಪಕ್ಷದ ನಗರ ಘಟಕದ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಜತೆಗೆ ಅವ್ವಣ್ಣ ಮ್ಯಾಕೇರಿ ಅವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಆದೇಶವನ್ನು ಹಿಂಪಡೆಯುವಂತೆ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ನಿರ್ದೇಶನ ನೀಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸೊಗಡು ಶಿವಣ್ಣ ಮತ್ತು ನಂದೀಶ್‌ ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಬಿಜೆಪಿ ಶಿಸ್ತು ಸಮಿತಿ ನೋಟಿಸ್‌ ಜಾರಿ ಮಾಡಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದರೂ ನಂತರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

Advertisement

ಅಲ್ಲದೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬ ಕಾರಣಕ್ಕೆ ವೆಂಕಟೇಶ್‌ಮೂರ್ತಿ ಮತ್ತು ಅವ್ವಣ್ಣ ಮ್ಯಾಕೇರಿ ಅವರ ವಿರುದ್ಧ ಕಳೆದ ಜನವರಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗಿತ್ತು. ಪಕ್ಷದ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಮತ್ತು ಇಬ್ಬರು ನಾಯಕರಿಗೆ ನೋಟಿಸ್‌ ಜಾರಿ ಮಾಡಿದ ಕುರಿತು ಉದ್ಭವಿಸಿದ್ದ ಅಸಮಾಧಾನ ಈ ಪ್ರಕರಣದಿಂದ ಭುಗಿಲೆದ್ದಿತ್ತು.

ಈ ಮಧ್ಯೆ ಅಸಮಾಧಾನ ಹೋಗಲಾಡಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ರಾಜ್ಯ ಮುಖಂಡರನ್ನು ದೆಹಲಿಗೆ ಕರೆಸಿಕೊಂಡು ಫೆ. 10ರೊಳಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಜರುಗಿಸದ ಕಾರಣ ಕಳೆದ ಭಾನುವಾರ ತುಮಕೂರಿನಲ್ಲಿ ಸಭೆ ನಡೆಸಿದ್ದ ಅಸಮಾಧಾನಿತ ಮುಖಂಡರು, ಫೆ. 27ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರಲ್ಲದೆ, ಪಕ್ಷದ ವರಿಷ್ಠರಿಗೆ ದೂರು ನೀಡಲೂ ಮುಂದಾಗಿದ್ದರು.

ಈಶ್ವರಪ್ಪ ಅತೃಪ್ತಿಗೆ ಮದ್ದು
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಇತ್ತೀಚೆಗೆ ಶಿಸ್ತಿನ ಪಕ್ಷ ಬಿಜೆಪಿಯಲ್ಲೂ ಅಶಿಸ್ತು ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯೂ ಪಾಲಿಕೆಯಾಗಿಲ್ಲ ಎಂದರೆ ಅದು ಅಶಿಸ್ತು ಅಲ್ಲವೇ ಎಂದು ಪರೋಕ್ಷವಾಗಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ನಾಲ್ವರು ಮುಖಂಡರ ವಿರುದ್ಧದ ಶಿಸ್ತು ಕ್ರಮ ಕೈಬಿಡಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next