Advertisement

ಕೋಟಿ ಒಡೆಯನ ಕೋಟೆ ಕೆಡವಿದ ಬಿಜೆಪಿ

10:33 AM Dec 15, 2021 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷದಿಂದ “ಕೋಟಿವೀರ’ ಯುಸೂಫ್ ಶರೀಫ್ (ಕೆಜಿಎಫ್ ಬಾಬು) ಸ್ಪರ್ಧಿಸಿದ್ದರಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಸ್ಥಳೀಯ ಸಂಸ್ಥೆಗಳ ಬೆಂಗಳೂರು ನಗರ ವಿಧಾನರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ದಶಕದ ಬಳಿಕ ಬಿಜೆಪಿ ಅಭ್ಯರ್ಥಿ ಎಚ್‌.ಎಸ್‌ ಗೋಪಿನಾಥ್‌ ರೆಡ್ಡಿ ವಿಜಯಮಾಲೆ ಧರಿಸಿದ್ದಾರೆ.

Advertisement

ಕಾಂಗ್ರೆಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬೆಂ. ನಗರ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದ್ದು, ಕ್ಷೇತ್ರವನ್ನು ವಶಕ್ಕ ಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಗೋಪಿನಾಥ್‌ ರೆಡ್ಡಿ 1,227 ಮತಗಳನ್ನು ಪಡೆದುಕೊಂಡು ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 447 ಮತಗಳ ಅಂತರದಿಂದ ಗೆದ್ದಿದ್ದಾರೆ. ಕೋಟಿ ಒಡೆಯ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸೂಫ್ ಶರೀಫ್ ಮತದಲ್ಲಿ ಸಾವಿರ ಗಡಿ ದಾಟಿಲ್ಲ.

ಅವರು ಪಡೆದದ್ದು ಕೇವಲ 830 ಮತಗಳು ಮಾತ್ರ. ಗೋಪಿನಾಥ್‌ ರೆಡ್ಡಿ 2009ರಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರನ್ನು ಮತದಾರರು ಕೈ ಹಿಡಿದಿದ್ದಾರೆ. ಹಾಲಿ ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಇಲ್ಲಿ ಯುಸೂಫ್ ಶರೀಫ್ಗೆ ಟಿಕೆಟ್‌ ನೀಡಲಾಗಿತ್ತು. ಜೆಡಿಎಸ್‌ನಲ್ಲಿ ಅಭ್ಯರ್ಥಿ ಹಾಕಿರಲಿಲ್ಲ. ಪಕ್ಷೇತರ ಅಭ್ಯರ್ಥಿ ಇಲ್ಲಿ ಶೂನ್ಯ ಸಂಪಾದಿಸಿದ್ದಾರೆ.

ನೇರ ಹಣಾಹಣಿ: ಪಕ್ಷೇತರ ಅಭ್ಯರ್ಥಿಯಾಗಿ ಶೀನಪ್ಪ ಸ್ಪರ್ಧಾ ಕಣದಲ್ಲಿದ್ದರು. ಆದರೆ, ಗೋಪಿನಾಥ್‌ ಮತ್ತು ಯೂಸೂಫ್‌ ಷರೀಫ್‌ ನಡುವೆ ನೇರ ಹಣಾಹಣಿ ಇತ್ತು. ಕಾಂಗ್ರೆಸ್‌ ಅಭ್ಯರ್ಥಿಯ ವೈಯಕ್ತಿಕ ಮತ್ತು ಕೌಟುಂಬಿಕ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದರಿಂದ ಚುನಾವಣಾ ಪ್ರಚಾರದಲ್ಲಿ ಸಾಕಷ್ಟು ಕೆಸರೇರಚಾಟ ನಡೆದಿತ್ತು.

ಕಣ್ಣೀರು ಹಾಕಿದ್ದ ಯುಸೂಫ್ ಶರೀಫ್ ಕಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೂ ಬಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವೊಲಿಸಿದ್ದರು. ಬಿಜೆಪಿ ಅಭ್ಯರ್ಥಿ ಪರ ಸಚಿವರಾದ ಆರ್‌. ಅಶೋಕ್‌, ಅಶ್ವತ್ಥನಾರಾಯಣ, ಗೋಪಾಲಯ್ಯ, ಮಾಜಿ ಸಚಿವ ಅರವಿಂದ ಲಿಂಬಾವಳಿ ಇತರರು ಗೆಲುವಿಗೆ ಶ್ರಮಿಸಿದ್ದರು.

Advertisement

ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ

ವಿಧಾನ ಪರಿಷತ್‌ ಚುನಾವಣೆಯ ಮತ ಏಣಿಕೆ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯ ಮಹಾರಾಣಿ ವಿಜ್ಞಾನ ಕಾಲೇಜಿನ ಮುಂಭಾಗ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಮಲ ಅಭ್ಯರ್ಥಿ ಗೋಪಿನಾಥ ರೆಡ್ಡಿ ಅವರು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮತ್ತು ಸಂಭ್ರಮ ಮುಗಿಲು ಮುಟ್ಟಿತು.

ಬಿಜೆಪಿ ಬಾವುಟ ಹಿಡಿದಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಪರವಾಗಿ ಜೈಕಾರ ಹಾಕಿ ಘೋಷಣೆ ಕೂಗಿದರು. ಬಿಜೆಪಿಯ ಕೇಂದ್ರ ಕಚೇರಿಯಲ್ಲೂ ಪಕ್ಷದ ಕಾರ್ಯಕರ್ತರ ಸಂಭ್ರಮ ಕಂಡುಬಂತು.

ಕಾರಿನಲ್ಲಿ ಬಂದು ಆಟೋದಲ್ಲಿ ವಾಪಸ್‌

ಪರಿಷತ್ತಿನ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ನ ಯೂಸಫ್‌ ಷರೀಫ್‌ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಸುಮಾರು 1743 ಕೋಟಿ ರೂ.ಆಸ್ತಿಯ ಒಡೆಯನಾಗಿರುವುದು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿತ್ತು. ಮಂಗಳವಾರ ಮತಗಟ್ಟೆ ಏಣಿಕೆ ಕೇಂದ್ರಕ್ಕೆ ಕಾರಿನಲ್ಲಿ ಬಂದಿದ್ದ ಯೂಸುಫ್ ಷರೀಪ್‌ ಫ‌ಲಿತಾಂಶ ಪ್ರಕಟವಾದ ನಂತರ ಆಟೋದಲ್ಲಿ ಮನೆಯತ್ತ ತೆರಳಿದರು.

“ನನ್ನ ಗೆಲುವಿಗಾಗಿ ಶ್ರಮಿಸಿದವರಿಗೆ ಈ ವಿಜಯವನ್ನು ಅರ್ಪಿಸುತ್ತೇನೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ನನ್ನನ್ನು ಪಕ್ಷ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಖುಷಿ ಕೊಟ್ಟಿದೆ.” ಎಚ್‌.ಎಸ್‌.ಗೋಪಿನಾಥ ರೆಡ್ಡಿ , ವಿಜೇತ ಅಭ್ಯಥಿ

“ಗೆಲ್ಲುವ ವಿಶ್ವಾಸವಿತ್ತು. ಪಕ್ಷ ಗೆದ್ದಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಇದು ಸಂಘಟಿತ ಪ್ರಯತ್ನದ ಫ‌ಲ.” ●ನಿರ್ಮಲ್‌ ಕುಮಾರ್‌ ಸುರಾನಾ, ರಾಜ್ಯ ಬಿಜೆಪಿ ಉಪಾಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next