Advertisement

22 ಕಡೆ ಅರಳಿದ ಕಮಲ, ಪಾಲಿಕೆಗೂ ನುಗ್ಗಿದ ಆನೆ

11:34 AM Sep 04, 2018 | Team Udayavani |

ಮೈಸೂರು: ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ಫ‌ಲಿತಾಂಶ ಹಲವು ಸ್ವಾರಸ್ಯಕರ ಸಂಗತಿಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಪಕ್ಷ ಬಿಜೆಪಿ 20ರ ಗಡಿದಾಟಿದರೆ, ಬಿಎಸ್ಪಿ ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿ ತನ್ನ ಖಾತೆ ತೆರೆದಿದೆ.

Advertisement

ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‌ನಿಂದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 393 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಗೆ ನಿಂತಿದ್ದರು. ಇರುವ ವಾರ್ಡ್‌ಗಳಿಗಿಂತಲೂ ಕಣದಲ್ಲಿದ್ದ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚಾಗಿದ್ದರ ಕಾರಣದಿಂದ ಮತದಾರರೂ ಸಹ ತಮ್ಮ ಹಕ್ಕು ಚಲಾವಣೆಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಇದರಿಂದಾಗಿ ಆ.31ರಂದು ನಡೆದ ಚುನಾವಣೆಯಲ್ಲಿ ಶೇ.50.01 ಮತದಾನ ನಡೆದಿತ್ತು. ಹೀಗಾಗಿ ಪಾಲಿಕೆ ಚುನಾವಣಾ ಫ‌ಲಿತಾಂಶ ಏನಾಗಲಿದೆ ಎಂಬ ಸಹಜ ಕುತೂಹಲ ಸಾಂಸ್ಕೃತಿಕ ನಗರಿಯ ಜನತೆಯಲ್ಲಿ ಮನೆಮಾಡಿತ್ತು. 

22 ಕಡೆ ಅರಳಿದ ಕಮಲ: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈವರೆಗೂ ಒಮ್ಮೆಯೂ ಮೇಯರ್‌ ಸ್ಥಾನಕ್ಕೇರದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ಹೊಂದಿತ್ತು. ಚುನಾವಣೆಗೂ ಮುನ್ನ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಬಹುತೇಕ ಹೊಸಬರಿಗೆ ಮಣೆಹಾಕಿದ್ದ ಬಿಜೆಪಿಗೆ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, 22 ಸ್ಥಾನದೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತೃಪ್ತಿ ಸಿಕ್ಕಿದೆ. ಕಳೆದ ಮೂರು ದಶಕಗಳ ಪಾಲಿಕೆ ಇತಿಹಾಸದಲ್ಲಿ 3ನೇ ಅವಧಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ರಾಷ್ಟ್ರೀಯ ಪಕ್ಷ ಇದೇ ಮೊದಲ ಬಾರಿಗೆ 22 ಸ್ಥಾನಗಳನ್ನು ಪಡೆಯುವ ಮೂಲಕ ಹೊಸ ಮುನ್ನುಡಿ ಬರೆದಿದೆ. 

ಪಾಲಿಕೆ ಪ್ರವೇಶಿಸಿದ ಆನೆ: ನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಆನೆ ಪ್ರವೇಶಿಸಿದೆ. ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದು ಗಮನ ಸೆಳೆದಿದ್ದ ಬಿಎಸ್ಪಿ, ಈ ಬಾರಿ ಪಾಲಿಕೆ ಚುನಾವಣೆಯಲ್ಲೂ ತನ್ನ ಖಾತೆ ತೆರೆದಿದೆ. ನಗರ ಪಾಲಿಕೆ 65 ವಾರ್ಡ್‌ಗಳಲ್ಲಿ 11 ಕಡೆಗಳಲ್ಲಿ ಸ್ಪರ್ಧಿಸಿದ್ದ ಬಿಎಸ್ಪಿ ಅಭ್ಯರ್ಥಿಗಳಲ್ಲಿ 56ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಬೇಗಂ ಉರುಫ್ ಪಲ್ಲವಿ ಗೆಲುವಿನ ನಗೆಬೀರಿದ್ದಾರೆ. ಪ್ರಮುಖ ಪಕ್ಷಗಳ ಪ್ರಬಲ ಅಭ್ಯರ್ಥಿಗಳ ಪೈಪೋಟಿ ನಡುವೆಯೂ ಮತದಾರರ ಮನಗೆದ್ದಿರುವ ಬಿಎಸ್ಪಿ ಅಭ್ಯರ್ಥಿ 4108 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ. 

ಪಾಲಿಕೆಗೆ ಕೊಡಗಿನ ಕಲಿ: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಹಲವು ಹೊಸ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 20ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೊಡಗಿನ ಎಂ.ಯು.ಸುಬ್ಬಯ್ಯ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ವಿಜಯನಗರ ವ್ಯಾಪ್ತಿಯ 20ನೇ ವಾರ್ಡಿನಿಂದ ಸ್ಪರ್ಧಿಸಿ 2245 ಮತಗಳನ್ನು ಪಡೆದಿರುವ ಎಂ.ಯು.ಸುಬ್ಬಯ್ಯ, ಜೆಡಿಎಸ್‌ನ ಗೋಪಾಲಸ್ವಾಮಿ ವಿರುದ್ಧ 423 ಮತಗಳಿಂದ ಗೆಲುವು ಕಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸಿದ ಮೊದಲ ಕೊಡಗಿನ ಕಲಿ ಎಂಬ ಹೆಗ್ಗಳಿಕೆ ಪಡೆದಿರುವುದು ವಿಶೇಷ. 

Advertisement

ಪಕ್ಷಾಂತರಿಗಳಿಗೆ ಪಾಠ: ಪಾಲಿಕೆ ಚುನಾವಣೆಯಲ್ಲಿ ಒಮ್ಮೆ ಆಯ್ಕೆಯಾಗಿ ಟಿಕೆಟ್‌ ಸಿಗದೆ ಪಕ್ಷಾಂತರಗೊಂಡಿದ್ದ ಹಲವು ಪಕ್ಷಾಂತರಿಗಳಿಗೆ ಮತದಾರರು ತಕ್ಕಪಾಠ ಕಲಿಸಿದ್ದಾರೆ. ವಾರ್ಡ್‌ ವಿಂಗಡಣೆ, ಮೀಸಲಾತಿ ಕಾರಣಕ್ಕಾಗಿ ಈ ಬಾರಿ ಪ್ರಮುಖ ಪಕ್ಷಗಳ ಅನೇಕರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದರೆ, ಕೆಲವರು ರಾತ್ರೋರಾತ್ರಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು.

ಹೀಗೆ ಟಿಕೆಟ್‌ ಆಸೆಗಾಗಿ ಪಕ್ಷಾಂತರಗೊಂಡಿದ್ದ ಬಿಜೆಪಿಯ ಜೆ.ಎಸ್‌.ಜಗದೀಶ್‌(43ನೇ ವಾರ್ಡ್‌), ಜೆಡಿಎಸ್‌ನ ಎಂ.ಡಿ.ಪಾರ್ಥಸಾರತಿ(51ನೇ ವಾರ್ಡ್‌), ಪಿ.ದೇವರಾಜ್‌(40ನೇ ವಾರ್ಡ್‌), ಮಾಜಿ ಮೇಯರ್‌ ಬಿ.ಭಾಗ್ಯವತಿ(21ನೇ ವಾರ್ಡ್‌), ಬಿ.ಎಂ.ನಟರಾಜ್‌(29ನೇ ವಾರ್ಡ್‌) ಅವರುಗಳನ್ನು ಮತದಾರರು ತಿರಸ್ಕರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next