ಚಿಕ್ಕಮಗಳೂರು: ವಿಜಯೇಂದ್ರ ಅವರ ಕೈಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಸಮಯೋಚಿತ. ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಹೈಕಮಾಂಡ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅವರು ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ವಿಜಯೇಂದ್ರ ಅವರಿಗೆ ಯುವಕ, ಯುವಮೋರ್ಚಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ಶಾಸಕನಾಗಿ ಅನುಭವವಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸಾವಿರಾರು ಜನರಿಗೆ ಪರಿಚಿತ ವ್ಯಕ್ತಿ ಇವರು. ಹೊಸ ಶಕ್ತಿಯಿಂದ ಬಿಜೆಪಿ ಎದ್ದು ಬರುತ್ತದೆ ಎಂದು ಹೇಳಿದರು.
ಮುಂದೆ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಬಹಳ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತೆ. ಹಿಂದೆ ಅತಿವೃಷ್ಟಿಯಾದಾಗ ಯಡಿಯೂರಪ್ಪನವರು ಡಬ್ಬ ಹಿಡ್ಕೊಂಡು ಭಿಕ್ಷೆ ಬೇಡಿದ್ರು. ನಿರಾಶ್ರಿತರ ಜೊತೆ ದೀಪಾವಳಿ ಆಚರಿಸಿದ್ದರು. ಇದು ಒಬ್ಬ ಸಿಎಂ ಆಗಿ ಇರಬೇಕಾದ ಬದ್ಧತೆ, ಹೃದಯವಂತಿಕೆ ಎಂದರು.
ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡುತ್ತಾ, ಡ್ಯಾನ್ಸ್ ಮಾಡುತ್ತಾ ಆರಾಮವಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳು ಎಲ್ಲೂ ಓಡಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರ ಬೆಳೆ ನಾಶ, ಕುಡಿಯುವ ನೀರಿಗೆ ಸಮಸ್ಯೆ, ವಿದ್ಯುತ್ ಅಭಾವವಿದೆ. ಆದ್ರೆ, ಸರ್ಕಾರ ತನ್ನ ಪಾತ್ರ ಏನೂ ಇಲ್ಲದಂತೆ ವರ್ತಿಸುತ್ತಿದೆ. ದಿನ ಬೆಳಗಾದರೆ ಕೇಂದ್ರ ಕೊಡ್ಲಿಲ್ಲ ಅಂತ ಕೇಂದ್ರದತ್ತ ಕೈ ತೋರಿಸುತ್ತಾರೆ. ಕೇಂದ್ರದ ಬಳಿ ನಿಯೋಗ ಹೋಗಲು ಏನ್ ಮಾಡಿದ್ದಾರೆ, ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರಾ ಎಂದು ಪ್ರಶ್ನಿಸಿದರು.
ಕೇಂದ್ರ ಕಳಿಸಿದ ಎನ್.ಡಿ.ಆರ್.ಎಫ್. ಹಣ 900 ಕೋಟಿ ಇದೆ. ಸರ್ಕಾರ ಅದನ್ನೂ ಬಿಡುಗಡೆ ಮಾಡಿಲ್ಲ. ಜನ ಗುಳೇ ಹೋಗ್ತಿದ್ದಾರೆ. ಜನರ ಕೈಗೆ ಕೆಲಸ ಕೊಡಬೇಕಿದೆ. ಜನವರಿ ಬಳಿಕ ಅತ್ಯಂತ ಭೀಕರ ಪರಿಸ್ಥಿತಿಯನ್ನು ನಾವು ನೋಡಬಹುದು ಎಂದು ಕಾಂಗ್ರೇಸ್ ಪಕ್ಷದ ಕುರಿತು ಮಾತನಾಡಿದರು.