ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಜವಾಬ್ದಾರಿಯುತ ವಿಪಕ್ಷವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಸಚಿವರ ಹೇಳಿಕೆಗಳನ್ನು ನೋಡಿದರೆ ಸರಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಬಿಜೆಪಿಯ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಸಚಿವರ ಹೇಳಿಕೆಗಳು ಯಾವ ರೀತಿ ಇದ್ದವು? ಘಟನೆ ನಡೆದು ನಾಲ್ಕೈದು ದಿನವಾದರೂ ಎಫ್ಎಸ್‌ಎಲ್ ವರದಿ ಬಂದಿಲ್ಲ ಎನ್ನುತ್ತಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಇದೇ ರೀತಿ ಹೇಳಿದ್ದಾರೆ. ಆದರೆ ನಮಗೆ ಬಂದ ಮಾಹಿತಿ ಪ್ರಕಾರ ವರದಿ ಸರಕಾರದ ಕೈ ಸೇರಿದೆ. ಆದರೆ ಅದನ್ನು ಮುಚ್ಚಿ ಮತ್ತೂಂದು ಬೋಗಸ್ ವರದಿ ತಯಾರಿಸಲು ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.
ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದೆ. ವರದಿ ಬಿಡುಗಡೆ ಮಾಡದೆ ಸರಕಾರ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ. ಸರಕಾರದ ಈ ನಡವಳಿಕೆ ಹಾಗೂ ಮಂತ್ರಿಗಳ ಹೇಳಿಕೆಗಳು ಸರಿಯಲ್ಲ. ಬಾಂಬ್ ಸ್ಫೋಟ ಹಾಗೂ ಪಾಕ್ ಪರ ಘೋಷಣೆ ಪ್ರಕರಣ ಸಂಬಂಧ ಸರಕಾರದ ನಡವಳಿಕೆ ರಾಜ್ಯದ ಸುರಕ್ಷೆಗೆ ಧಕ್ಕೆ ತರಲಿದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ಆತಂಕ ಇದೆ. ಇಂಥ ಘಟನೆಗಳನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕ್ ಪರ ಘೋಷಣೆ ಕೂಗಿದವರ ಇನ್ನೂ ಬಂಧಿಸಿಲ್ಲ. ಬಂಧನ ಮಾಡಿದರೆ ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವ ಭಯ ಕಾಂಗ್ರೆಸ್‌ನವರನ್ನು ಕಾಡುತ್ತಿದೆ. ಏನೂ ಆಗಿಯೇ ಇಲ್ಲವೆಂದು ಸಚಿವರು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.