Advertisement

ಬೈಂದೂರಲ್ಲಿ ಲಕ್ಷ ದಾಟಿದ ಬಿಜೆಪಿಯ ಮತ !

12:43 AM May 25, 2019 | sudhir |

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಈ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಗಿಂತ 73,612 ಮತಗಳ ಮುನ್ನಡೆಯನ್ನು ಪಡೆದಿದೆ. ಆ ಮೂಲಕ ಬೈಂದೂರಲ್ಲಿ ನಡೆದ ಕಳೆದ 7 ಚುನಾವಣೆಗಳಲ್ಲಿಯೇ ಈ ಬಾರಿ ಪಕ್ಷವೊಂದು ಪಡೆದ ಗರಿಷ್ಠ ಅಂತರ ಇದಾಗಿದೆ. ಇದೇ ಮೊದಲ ಬಾರಿಗೆ ಬಿಜೆಪಿ ೈಂದೂರಲ್ಲಿ ಲಕ್ಷಕ್ಕೂ ಮಿಕ್ಕಿ ಮತ ಪಡೆದ ಸಾಧನೆ ಮಾಡಿದೆ.

Advertisement

2008 ರಿಂದೀಚೆಗೆ ಬೈಂದೂರಲ್ಲಿ 3 ವಿಧಾನಸಭೆ ಚುನಾವಣೆ, 3 ಲೋಕಸಭೆ ಹಾಗೂ 1 ಬಾರಿ ಲೋಕ ಸಭೆಗೆ ಉಪ ಚುನಾವಣೆ ನಡೆದಿತ್ತು. ಈ ಪೈಕಿ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು ಬಿಟ್ಟರೆ, ಬಾಕಿ ಎಲ್ಲ ಚುನಾವಣೆ ಗಳಲ್ಲಿಯೂ ಬಿಜೆಪಿ ಮುನ್ನಡೆ ಗಳಿಸಿಕೊಂಡಿದೆ.

2008 ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ವಿರುದ್ಧ ಬಿಜೆಪಿಯ ಲಕ್ಷ್ಮಿನಾರಾಯಣ 7,726 ಮತಗಳ ಗೆಲುವು, 2009 ರ ಲೋಕಸಭೆ ಚುನಾವಣೆಯಲ್ಲಿ ಬೈಂದೂರಲ್ಲಿ ಕಾಂಗ್ರೆಸ್‌ನ ಎಸ್‌. ಬಂಗಾರಪ್ಪ ವಿರುದ್ಧ ಬಿಜೆಪಿಯ ಬಿ.ವೈ. ರಾಘವೇಂದ್ರ 12,255 ಅಂತರದ ಮುನ್ನಡೆ ಪಡೆದಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಂ. ಸುಕುಮಾರ್‌ ಶೆಟ್ಟಿ ವಿರುದ್ಧ ಕಾಂಗ್ರೆಸ್‌ನ ಗೋಪಾಲ ಪೂಜಾರಿ 31,149 ಮತಗಳ ಗೆಲುವು, 2014 ರ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿರುದ್ಧ 46,416 ಮತಗಳ ಮುನ್ನಡೆ ಸಾಧಿಸಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ಕಾಂಗ್ರೆಸ್‌ನ ಗೋಪಾಲ ಪೂಜಾರಿ ವಿರುದ್ಧ 24,393 ಮತಗಳ ಅಂತರದ ಜಯ, ಅದೇ ವರ್ಷ ಲೋಕಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ (ಪಡೆದ ಮತ- 69,049) ಅವರು ಜೆಡಿಎಸ್‌- ಕಾಂಗ್ರೆಸ್‌ನ ಮಧು ಬಂಗಾರಪ್ಪ (ಪಡೆದ ಮತ -54,472) ವಿರುದ್ಧ 14,572 ಮತಗಳ ಅಂತರದ ಮುನ್ನಡೆ ಗಳಿಸಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಒಟ್ಟಾರೆ ಬಿಜೆಪಿಯ ರಾಘವೇಂದ್ರ ಅವರಿಗೆ 7,29,872 ಮತಗಳು ಹಾಗೂ ಕಾಂಗ್ರೆಸ್‌ – ಜೆಡಿಎಸ್‌ನ ಮಧು ಬಂಗಾರಪ್ಪ ಅವರಿಗೆ 5,06,512 ಮತಗಳು ಸಿಕ್ಕಿವೆ. ಇನ್ನು 8 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಘವೇಂದ್ರ ಅವರಿಗೆ ಬೈಂದೂರಲ್ಲಿಯೇ ಅತ್ಯಧಿಕ ಮತಗಳು ಸಿಕ್ಕಿದೆ.

ಬಿ.ವೈ.ಆರ್‌. ಅವರಿಗೆ 1,17,401 ಮತ ಹಾಗೂ ಮಧು ಅವರಿಗೆ 43,789 ಮತಗಳು ಸಿಕ್ಕಿವೆ. ಅಂದರೆ ಇಲ್ಲಿ ಗರಿಷ್ಠ 76,612 ಮತಗಳ ಅಂತರದ ಮುನ್ನಡೆ ಗಳಿಸಿದ್ದಾರೆ. ಸಾಗರ- 16,650, ಸೊರಬ- 2,821, ಶಿವಮೊಗ್ಗ ಗ್ರಾಮಾಂತರ – 18,246, ಶಿವಮೊಗ್ಗ ನಗರ – 57,908, ಭದ್ರಾವತಿ – 5,645 ಶಿಕಾರಿಪುರ – 21,277, ತೀರ್ಥಹಳ್ಳಿ – 29,531 ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.

Advertisement

ಲಕ್ಷ ದಾಟಿದ ಬಿಜೆಪಿ ಮತ
ಬಿಜೆಪಿಗೆ ಲೋಕಸಭೆ ಚುನಾವಣೆಗಳ ಪೈಕಿ 2009 ರಲ್ಲಿ 60,989 ಮತ, 2014 ರಲ್ಲಿ 90,955 ಮತ, 2018 (ಉಪ ಚುನಾವಣೆ) ರಲ್ಲಿ 69,049 ಮತ ಪಡೆದಿತ್ತು. ಇನ್ನು ವಿಧಾನಸಭೆ ಚುನಾವಣೆಗಳ ಪೈಕಿ 2013 ರಲ್ಲಿ 51,128 ಮತ, 2018 ರಲ್ಲಿ 96,029 ಮತ ಸಿಕ್ಕರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 1,17,401 ಮತ ಸಿಗುವ ಮೂಲಕ ಬೈಂದೂರಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯು 1 ಲಕ್ಷಕ್ಕೂ ಮಿಕ್ಕಿ ಮತಗಳನ್ನು ಪಡೆದಂತಾಗಿದೆ.

ನೋಟಾಕ್ಕೆ ಹೆಚ್ಚು ಮತ
ಶಿವಮೊಗ್ಗ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ನೋಟಾಕ್ಕೆ ಗರಿಷ್ಠ ಮತ ಬಿದ್ದಿರುವುದು ಬೈಂದೂರಲ್ಲಿ. ಶಿವಮೊಗ್ಗ ಗ್ರಾಮಾಂತರ – 765, ಭದ್ರಾವತಿ – 804, ಶಿವಮೊಗ್ಗ ನಗರ – 901, ತೀರ್ಥಹಳ್ಳಿ- 808, ಶಿಕಾರಿಪುರ – 672, ಸೊರಬ – 742, ಸಾಗರ – 884 ಮತಗಳು ನೋಟಾಕ್ಕೆ ಸಿಕ್ಕರೆ, ಬೈಂದೂರಲ್ಲಿ ನೋಟಾಗೆ 1,286 ಮತಗಳು ಬಿದ್ದಿವೆ.

ಖುಷಿ ತಂದಿದೆ
ಪ್ರಧಾನಿ ಮೋದಿ ಅವರ ಉತ್ತಮ ಆಡಳಿತ ವನ್ನು ಮೆಚ್ಚಿರುವುದರ ಜತೆಗೆ, ರಾಜ್ಯ ದಲ್ಲಿರುವ ಮೈತ್ರಿ ಸರಕಾರದ ವೈಫಲ್ಯದಿಂದ ಬೇಸತ್ತು ಜನ ಮತ್ತೂಮ್ಮೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬೈಂದೂರಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದಕ್ಕೆ ಹಾಗೂ ಈ ಫಲಿತಾಂಶ ಖುಷಿ ತಂದಿದೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next