ಹೊಸದಿಲ್ಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ‘ಬಿಜೆಪಿಗೆ ಮತ ಹಾಕುವವರು ರಾಕ್ಷಸರು’ ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ.
ಹರಿಯಾಣದ ಕೈತಾಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ “ಬಿಜೆಪಿ ಮತ್ತು ಜನನಾಯಕ ಜನತಾ ಪಕ್ಷದ (ಜೆಜೆಪಿ) ಜನರು ‘ರಾಕ್ಷಸರು’ ಮತ್ತು ಆ ಪಕ್ಷಕ್ಕೆ ಮತ ಚಲಾಯಿಸಿ ಅವರನ್ನು ಬೆಂಬಲಿಸುವವರೂ ‘ರಾಕ್ಷಸರು’. ಇಂದು ಈ ಮಹಾಭಾರತದ ನೆಲದಲ್ಲಿ ನಾನು ಅವರನ್ನು (ಬಿಜೆಪಿ-ಜೆಜೆಪಿ) ಶಪಿಸುತ್ತೇನೆ. ” ಎಂದು ರಾಜ್ಯಸಭಾ ಸದಸ್ಯ ಹೇಳಿಕೆ ನೀಡಿದ್ದರು.
ಬಿಜೆಪಿ ‘ಈ ಹೇಳಿಕೆಗಳು ಯುವರಾಜ ರಾಹುಲ್ ಗಾಂಧಿಯನ್ನು ರೀ ಲಾಂಚ್ ಮಾಡಲು ವಿಫಲವಾದ ನಂತರ ಕಾಂಗ್ರೆಸ್ ಪಕ್ಷದ ಹತಾಶೆಯ ಸಂಕೇತವಾಗಿದೆ’ ಎಂದು ಹೇಳಿದೆ.
ಹಲವು ಬಿಜೆಪಿ ನಾಯಕರು ವಿಡಿಯೋವನ್ನು ಹಂಚಿಕೊಂಡಿದ್ದು, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು X (ಟ್ವಿಟರ್)ನಲ್ಲಿ ಪುನರಾವರ್ತಿತ ಚುನಾವಣ ಸೋಲುಗಳು ಕಾಂಗ್ರೆಸನ್ನು ಅಪ್ರಸ್ತುತಕ್ಕೆ ತಳ್ಳಿವೆ ಮತ್ತು ಈ ರೀತಿಯ ಅಸಂಬದ್ಧ ಕಾಮೆಂಟ್‌ಗಳು ಪಕ್ಷವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಉಳಿಯಲು ನಿರ್ಧರಿಸಿದೆ ಎಂದು ಸೂಚಿಸುತ್ತದೆ”ಎಂದು ಪ್ರತಿಕ್ರಿಯಿಸಿದ್ದಾರೆ.
ಹೇಳಿಕೆ ಕುರಿತು ಭಾರೀ ಕೋಲಾಹಲ ಎದ್ದ ನಂತರ, ರಣದೀಪ್ ಸುರ್ಜೇವಾಲಾ ಅವರು ಸ್ಪಷ್ಟೀಕರಣ ನೀಡಿ,”ಈ ಸರಕಾರವು ತನ್ನ ವೈಫಲ್ಯಗಳನ್ನು ಭಾವನಾತ್ಮಕ ವಿಷಯಗಳ ಹಿಂದೆ ಪದೇ ಪದೇ ಮರೆಮಾಚಲು ಪ್ರಯತ್ನಿಸುತ್ತದೆ. ಸಮಾಜವನ್ನು ದ್ವೇಷದ ಬೆಂಕಿಗೆ ಎಸೆದ ಮತ್ತು ಯುವಕರ ಕನಸುಗಳನ್ನು ಕೊಂದವರು ರಾಕ್ಷಸರಿಗಿಂತ ಕಡಿಮೆಯೇ?” ಎಂದು ಪ್ರಶ್ನಿಸಿದ್ದಾರೆ.