Advertisement
ಗುರುವಾರ ಬೆಳಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿದ ವಿಜಯೇಂದ್ರ, ಅಲ್ಲಿಯೇ ಉಪಾಹಾರ ಸೇವಿಸಿದರಲ್ಲದೆ, ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಹಿರಿಯರ ಸಹಿತ ಯಾರು ಏನೇ ಹೇಳಿಕೆ ಕೊಟ್ಟರೂ ಅಪಾರ್ಥ ಮಾಡಿಕೊಳ್ಳದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಒಟ್ಟಾಗಿ ಶ್ರಮಿಸೋಣ ಎಂದು ಜಾರಕಿಹೊಳಿ ಅವರೇ ತಿಳಿಸಿದ್ದಾಗಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರ ನಡೆಯ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದ್ದವು. ಕೆಲವು ಸಂದರ್ಭಗಳಲ್ಲಿ ಅವರು ಅಸಮಾಧಾನವನ್ನೂ ತೋಡಿಕೊಂಡಿದ್ದರು. ಇಂದು ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಕೆಲವು ನೋವುಗಳನ್ನು ತೋಡಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರು, ವರಿಷ್ಠರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಎಲ್ಲರೂ ಜತೆಯಾಗಿ ಪ್ರಧಾನಿ ಮೋದಿ ಅವರ ಕೈಗಳನ್ನು ಬಲಪಡಿಸುತ್ತೇವೆ ಎಂದರು. ವೈಮನಸ್ಸು ಮರೆತು ಒಂದಾಗಿದ್ದೇವೆ
ಇದಕ್ಕೆ ಪುಷ್ಟಿ ಕೊಟ್ಟಂತೆ ರಮೇಶ್ ಜಾರಕಿಹೊಳಿ ಕೂಡ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ಮನುಷ್ಯ ಎಂದ ಮೇಲೆ ಅಸಮಾಧಾನಗಳು ಸಹಜ. ಯಾವ ವೈಮನಸ್ಯವೂ ಇಲ್ಲ. ಎಲ್ಲವೂ ಸರಿಯಾಗಿದೆ. ವರಿಷ್ಠರು ನಿರ್ಣಯ ಕೈಗೊಂಡಿದ್ದಾರೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮ ಮುಂದಿರುವ ಗುರಿ. ಬಸನಗೌಡ ಪಾಟೀಲ್ ಯತ್ನಾಳ್, ಸುನಿಲ್ ಮತ್ತು ನಾನು ಇದೇ ನಿರ್ಣಯವನ್ನು ಬುಧವಾರದ ಸಭೆಯಲ್ಲೂ ತೆಗೆದುಕೊಂಡಿದ್ದೆವು. ಅದನ್ನೇ ಇಂದು ವಿಜಯೇಂದ್ರ ಕೂಡ ಹೇಳಿದ್ದಾರೆ. ವರಿಷ್ಠರ ತೀರ್ಮಾನ ಒಪ್ಪಿ, ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
Related Articles
ಇತ್ತ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಕಚೇರಿ ಪೂಜೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಪಕ್ಷ ಬಲಪಡಿಸುತ್ತೇವೆ. ಎಲ್ಲರನ್ನೂ ಮಾತನಾಡಿಸಿ, ಒಟ್ಟಿಗೆ ಕರೆದೊಯ್ಯುವ ಪ್ರಯತ್ನವನ್ನು ಅಶೋಕ್ ಹಾಗೂ ವಿಜಯೇಂದ್ರ ಮಾಡುತ್ತಿದ್ದಾರೆ. ಯಾರೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸೋಮಣ್ಣ ಅವರನ್ನೂ ಭೇಟಿ ಮಾಡುತ್ತೇವೆ. ಮಾತನಾಡುತ್ತೇವೆ. ಅವರೂ ಒಳ್ಳೆಯ ಸಂಘಟಕರು. ಎಲ್ಲರೂ ಸೇರಿ ಅವರನ್ನೂ ನಮ್ಮ ಜತೆ ಕರೆದೊಯ್ಯುತ್ತೇವೆ. ಅವರ ಅನುಭವವನ್ನು ಬಳಸಿಕೊಂಡು ಪಕ್ಷವನ್ನು ಬಲಪಡಿಸುತ್ತೇವೆ ಎಂದರು.
Advertisement
ಪ್ರತಿಯೊಬ್ಬರೂ ಅವರವರ ಅಭಿಪ್ರಾಯ ತಿಳಿಸುತ್ತಾರೆ. ಅದನ್ನು ತಿಳಿಸುವ ಧಾಟಿ ಒಬ್ಬೊಬ್ಬರದ್ದು ಒಂದೊಂದು ರೀತಿ ಇರುತ್ತದೆ. ಯಾರು ಏನೇ ಹೇಳಿದರೂ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಅಪಾರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲರ ಮನವೊಲಿಸಿ ಅವರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ.-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ ಬಹುಮತ ಪಡೆಯುತ್ತದೆ. ಅಂತಹ ವಾತಾವರಣ ಸೃಷ್ಟಿಯಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರಕಾರವನ್ನು ಆದಷ್ಟು ಬೇಗ ಕಿತ್ತೂಗೆಯಬೇಕೆಂಬ ಅಪೇಕ್ಷೆ ಜನರಲ್ಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ವಿಶೇಷ ಪ್ರಯತ್ನ ನಡೆಸುತ್ತೇವೆ.
ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ