ಬೆಂಗಳೂರು : ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಸುಳ್ಳಿನ ಮೆರವಣಿಗೆಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರು ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಪಾದಯಾತ್ರೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಬಿಜೆಪಿ “ಕೂಡಲ ಸಂಗಮದ ಸತ್ಯ ತಾಣದಲ್ಲೂ ಸುಳ್ಳು ಹೇಳಿದವರು ನೀವಲ್ಲವೇ ? ʼʼ ಎಂದು ವ್ಯಂಗ್ಯವಾಡಿದೆ.
ಈಗ ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ. ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ ?
ನೆಲ – ಜಲದ ವಿಚಾರವಾಗಿ ಸಿದ್ದರಾಮಯ್ಯ ಇಷ್ಟು ವರ್ಷ ಹೇಳಿದ್ದೆಲ್ಲವೂ ಬರೇ ಸುಳ್ಳು. ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂದು 2013 ರಲ್ಲಿ ಆಯೋಜಿಸಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ ಸುಳ್ಳುಗಳನ್ನು ನೆನಪಿಸಬೇಕೇ? ಸುಳ್ಳಿನ ಸರಮಾಲೆ ರೂಪಿಸಿಯೇ ಇವರು ಅಧಿಕಾರಕ್ಕೆ ಬಂದಿದ್ದು.
ಸಿದ್ದರಾಮಯ್ಯನವರೇ, ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ. ಅಂದರೆ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು ಸಿದ್ದರಾಮಯ್ಯನವರೇ?ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು. ಆದರೆ ಕೂಡಲಸಂಗಮದ ಸತ್ಯತಾಣದಲ್ಲಿ ನಿಂತು ಭಾಷಣ ಮಾಡುವಾಗ ನೀವು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿರಿ. ಅನುದಾನ ನೀಡಲು ಸಾಧ್ಯವಿದೆ ಎಂದಿರಿ. ಆದರೆ ಅಧಿಕಾರಕ್ಕೆ ಬಂದಾಗ ಕೃಷ್ಣೆಯನ್ನು ಮರೆತಿರಿ ಎಂದು ಟೀಕಿಸಿದೆ.