ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ಗಲಾಟೆ ಮಾಡಿಕೊಂಡಿರುವ ವಿಚಾರವಾಗಿ ಕರ್ನಾಟಕ ಬಿಜೆಪಿ ಸಹಿತವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದ ನಾಯಕರು ಟ್ವೀಟ್ ಮೂಲಕ ಕಾಂಗ್ರೆಸ್ ವಿರುದಟಛಿ ಟೀಕಾಪ್ರಹಾರ ನಡೆಸಿದ್ದಾರೆ. “ಓ ಸಿದ್ದರಾಮಯ್ಯನವರೇ, ನೀವು ಹೇಳಿದ ಅಖಾಡ-ಈಗಲ್‌ಟನ್ ರೆಸಾರ್ಟ್. ಕುಸ್ತಿಪಟುಗಳು-ಆನಂದ್‌ಸಿಂಗ್ ಮತ್ತು ಗಣೇಶ್ ಅಂಥ ಗೊತ್ತಾಯಿತು ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ. ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ರಾಜಕೀಯದ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು. ಪಟುಗಳು ನಮಗೂ ಗೊತ್ತು ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಭಾನುವಾರ ಬಿಜೆಪಿ ಕರ್ನಾಟಕ ರೀ ಟ್ವೀಟ್ ಮಾಡಿದೆ.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇನ್ನಷ್ಟೇ ದಾಖಲೆಗಳು ಬೇಕು? ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ಗಲಾಟೆ ಮಾಡಿಕೊಂಡಿದ್ದಾರೆ ಮತ್ತು ಒಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾಂಗ್ರೆಸ್ ಎಷ್ಟು ಸಮಯ ನಿರಾಕರಣೆ ವಾದ ಅನುಸರಿಸುತ್ತದೆ ಮತ್ತು ಅವರ ಎಲ್ಲ ತಪ್ಪಿಗೆ ಬಿಜೆಪಿಯನ್ನು ದೂರುತ್ತದೆ? ಯಾವಾಗ ರಾಜಕೀಯ ಪಕ್ಷ ಕುಂಟಾಗಿರುತ್ತದೋ ಆಗ ಅದು ದೂಷಣೆ ಮಾಡುವುದನ್ನೇ ಇಷ್ಟಪಡುತ್ತದೆ.
● ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ
ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಗಲಾಟೆ ಯನ್ನು ತಪ್ಪಿಸಲು ಕೆಪಿಸಿಸಿ ಅಧ್ಯಕ್ಷರಿಗೂ ಸಾಧ್ಯವಾಗದೆ ಇರುವುದು ದುರಾದೃಷ್ಟಕರ. ಶಾಸಕ ಆನಂದ್ ಸಿಂಗ್ ಅವರು ಆದಷ್ಟು ಬೇಗ ಗುಣಮುಖ ರಾಗಲಿ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಈಗ ಬಿಜೆಪಿಯನ್ನು ದೂರಲು ಸಾಧ್ಯ ವಾಗುತ್ತಿಲ್ಲ. ಕಾರಣ, ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದ ಎಲ್ಲ ಶಾಸಕರು ಇವರ ಕಣ್ಗಾವಲಿನಲ್ಲೇ ಇದ್ದರು.
● ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ.
ಆನಂದ್‌ಸಿಂಗ್ ಜೀ ಶೀಘ್ರ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ. ಬಿಜೆಪಿ ಕರ್ನಾಟಕ ನಿಮ್ಮನ್ನು ನಾಯಕ, ಶಾಸಕ, ಸಚಿವರನ್ನಾಗಿ ಮಾಡಿತ್ತು. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಬ್ಲ್ಯಾಕ್‌ವೆುàಲ್‌ನಿಂದ ನೀವು ಅಲ್ಲಿಗೆ ಹೋಗಿದ್ದಿರಿ. ನಿಮ್ಮ ಮೇಲಿನ ಹಲ್ಲೆಯನ್ನು ಪೂರ್ವನಿಯೋಜಿತ ಪಿತೂರಿ ಎಂದು ಜನರು ಭಾವಿಸುತ್ತಿದ್ದಾರೆ. ರಾಜಕುಮಾರರು ಈಗ ಮೌನವಾಗಿರುವುದು ಏಕೆ?
● ಶೋಭಾ ಕರಂದ್ಲಾಜೆ, ಸಂಸದೆ
ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾದರೂ ಸತ್ಯಹರಿಶ್ಚಂದ್ರನಂತೆ ಬೀಗುವ ಡಿ.ಕೆ.ಶಿವಕುಮಾರ, ಆನಂದ ಸಿಂಗ್ ಮದುವೆಗೆ ಹೋಗಿದ್ದಾರೆಂದು ಹೇಳುತ್ತಾರೆ. ಅವರ ಸಹೋದರ ಡಿ.ಕೆ.ಸುರೇಶ್, ಆನಂದ್ ಸಿಂಗ್‌ಗೆ ಎದೆನೋವು ಎನ್ನುತ್ತಾರೆ. ಸಚಿವ ಜಮೀರ ಅಹ್ಮದ್ ಸ್ವಲ್ಪ ಗಲಾಟೆ ಆಗಿದೆ ಎನ್ನುತ್ತಾರೆ. ರಿಜ್ವಾನ್ ಹರ್ಷದ್ ಏನೂ ಆಗಿಲ್ಲ ಎನ್ನುತ್ತಾರೆ. ಹೊಡೆದಾಟದ ಕುರಿತು ಯಾಕೆ ಮುಚ್ಚಿಡುತ್ತಿದ್ದಿರಿ? ಸುಳ್ಳು ಹೇಳುವುದನ್ನು ಬಿಡಬೇಕು.
● ಎನ್.ರವಿಕುಮಾರ್, ಬಿಜೆಪಿ, ಪ್ರಧಾನ ಕಾರ್ಯದರ್ಶಿ.