Advertisement

ಮಹಾರಾಷ್ಟ್ರ ಸರ್ಕಾರ ಉರುಳಿಸಲು ಬಿಜೆಪಿ ಸಂಚು: ಜಿ.ಪರಮೇಶ್ವರ್

02:28 PM Jun 25, 2022 | Team Udayavani |

ಕಲಬುರಗಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ. ಭವಿಷ್ಯದಲ್ಲಿ ಇದು ಅಪಾಯಕಾರಿ ನಡೆಯಾಗಲಿದೆ. ಸರ್ಕಾರವನ್ನು ಬೀಳಿಸಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದರು.

Advertisement

ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಸಾಮಾನ್ಯ. ಇದಕ್ಕೆ ದೇಶದ ಸಂವಿಧಾನದಲ್ಲೂ ಕೂಡ ಅವಕಾಶ ಇದೆ. ಆದ್ದರಿಂದ ಎನ್ ಸಿಪಿ ಮತ್ತು ಶಿವಸೇನೆ ಹಾಗೂ ಕಾಂಗ್ರೆಸ್ ಸೇರಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿದ್ದವು. ಆದರೆ ಮೂರೂ ಪಕ್ಷಗಳ ಮಧ್ಯೆ ಆಂತರಿಕ ಬಿಕ್ಕಟ್ಟಿಗೆ ಪ್ರಚೋದನೆ ನೀಡಿದುದಲ್ಲದೆ ಸರ್ಕಾರವನ್ನು ಬೀಳಿಸಲು ಬಿಜೆಪಿ ವ್ಯವಸ್ಥಿತವಾದ ಸಂಚು ಮಾಡಿದೆ ಎಂದು ನೇರವಾಗಿ ಆರೋಪಿಸಿದರು.

ಈಗಾಗಲೇ ಕರ್ನಾಟಕದಲ್ಲಿ ಇದನ್ನೇ ಮಾಡಿದ್ದ ಬಿಜೆಪಿ, ಮಹಾರಾಷ್ಟ್ರದಲ್ಲೂ ಮತ್ತು ಇತರ ರಾಜ್ಯಗಳಲ್ಲೂ ವ್ಯವಸ್ಥಿತವಾಗಿ ಸಂಚಿನ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇಂತಹ ಕುತಂತ್ರದ ಆಟಗಳು ಬಹಳ ದಿನ ನಡೆಯುವುದಿಲ್ಲ. ಅದೂ ಅಲ್ಲದೆ ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ ಎಂದ ಅವರು, ಇಂತಹ ತಂತ್ರ ಕುತಂತ್ರಗಳಿಂದ ಸರಕಾರಗಳನ್ನು ಬೀಳಿಸುವ ನಿಟ್ಟಿನಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಚುನಾವಣಾ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಈ ಕುರಿತು ದೇಶದ ಎಲ್ಲೆಡೆ ವ್ಯಾಪಕ ಚರ್ಚೆಯಾಗಿ ದೊಡ್ಡ ಬದಲಾವಣೆ ತರಬೇಕಾಗಿದೆ ಎಂದರು.

ಇದನ್ನೂ ಓದಿ:ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ,ಪಡುಕೋಣೆಗೆ ಚೊಚ್ಚಲ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

ಮಹಾರಾಷ್ಟ್ರದಲ್ಲಿ ಕುತಂತ್ರದಿಂದ ಮೈತ್ರಿ ಸರ್ಕಾರವನ್ನು ಕೆಡವಲು, ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಈ ಮಧ್ಯೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ ರಾಜಕಾರಣದಲ್ಲಿರುವ ಯಾರೂ ಸನ್ಯಾಸಿಗಳಲ್ಲ ಎನ್ನುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ ಎಂದು ಕಾಲೆಳೆದ ಅವರು, ಖಂಡಿತವಾಗಿ ನಿರಾಣಿಯವರು ಸನ್ಯಾಸಿಯಾಗಿದ್ದರೆ, ಮಠ ಮಾನ್ಯಗಳಲ್ಲಿ ಕಾವಿಬಟ್ಟೆ ತೊಟ್ಟು ಕುಳಿತುಕೊಳ್ಳಲಿ ಎಂದು ಛೇಡಿಸಿದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next